ರಾಮನಗರ: ಮಳವಳ್ಳಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ
ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರೊಂದಿಗೆ ಕಿರಿಕ್
ರಾಮನಗರ(ಜೂ.07): ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಣಮಿಣಿಕೆ ಟೋಲ್ ಪ್ಲಾಜಾದಲ್ಲಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರೊಂದಿಗೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿದ್ದಲ್ಲದೆ ಗೂಂಡಾ ವರ್ತನೆ ತೋರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಭಾನುವಾರ ಬೆಂಗಳೂರಿನಿಂದ ಮಳವಳ್ಳಿ ಕಡೆ ಪ್ರಯಾಣಿಸುತ್ತಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿದ್ದ ಕಾರಿಗೆ ಪಾಸ್ ಇದ್ದರೂ ಕುಂಬಳಗೂಡು ಬಳಿಯ ಕಣಮಿಣಿಕೆ ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಶಾಸಕರು ಮತ್ತು ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೊಲೀಸರು ಬರಲಿ ಎಂದು ನರೇಂದ್ರ ಸ್ವಾಮಿ ಹೇಳಿದ್ದಾರೆ. ಆಗ ಸಿಬ್ಬಂದಿ ಯಾವ ಪೊಲೀಸರು ಬೇಕಾದರು ಬರಲಿ, ನಾನು ನೋಡಿರದ ಪೊಲೀಸಾ ಎಂದು ಏಕವಚನದಲ್ಲಿಯೇ ಮಾತನಾಡಿದ್ದಾರೆ.
RAMANAGARA: ಕಾಡಂಚಿನ ಗ್ರಾಮಗಳಲ್ಲಿ ಕಲ್ಲಿನ ತಡೆಗೋಡೆಗೆ ಚಿಂತನೆ: ಸಚಿವ ಈಶ್ವರ ಖಂಡ್ರೆ
ಅಲ್ಲದೆ, ನೀವು ಸರ್ಕಾರದ ಪ್ರತಿನಿಧಿ, ಕರೆಕ್ಟಾಗಿ ಮಾತನಾಡಬೇಕು. ನಿಮ್ಮನ್ನು ಹೈವೆಯಲ್ಲಿ ಫ್ರೀಯಾಗಿ ಬಿಡುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದರಿಂದ ಶಾಸಕರು ಮತ್ತಷ್ಟುಕೋಪಗೊಂಡು ತರಾಟೆ ತೆಗೆದುಕೊಂಡಿದ್ದಾರೆ.
ಸಿಬ್ಬಂದಿ ನಾನು ಜೆಡಿಎಸ್ ಕಾರ್ಯದರ್ಶಿ, ಇಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದಾಗ ನರೇಂದಸ್ವಾಮಿರವರು ನೀನು ಜೆಡಿಎಸ್ ಕಾರ್ಯದರ್ಶಿಯಾದರೆ ನಾನೇನು ಮಾಡಲಿ. ನನ್ನ ಕಾರನ್ನು ಏಕೆ ತಡೆದು ನಿಲ್ಲಿಸಿದ್ದೀಯಾ ಎಂದು ಹರಿಹಾಯ್ದರು.
ಕಣಮಿಣಿಕೆ ಟೋಲ್ ಪ್ಲಾಜಾದಲ್ಲಿ ಅನುಚಿತವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದೆ. ಆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳವಂತೆ ಬರವಣಿಗೆಯಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇನೆ ಅಂತ ಮಳವಳ್ಳಿ ಕ್ಷೇತ್ರ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದ್ದಾರೆ.