ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರಿದ ಬೆನ್ನಲ್ಲೇ ಪ್ರಮುಖ ಹಗಲು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದ್ದು, ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಂದೇ ಭಾರತ್ ರೈಲಿಗಾಗಿ ಸಾಮಾನ್ಯ ರೈಲುಗಳ ಸಮಯ ಬದಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಪ್ರಕಟವಾಗಿದ್ದು, ಇದು ಕರಾವಳಿಯ ರೈಲು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದ್ದು, ಮಂಗಳೂರು ಸೆಂಟ್ರಲ್‌ಗೆ ಬರದಿರುವುದು ಒಂದೆಡೆಯಾದರೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹಗಲು ರೈಲುಗಳ ವೇಳಾಪಟ್ಟಿಯನ್ನೇ ಬದಲಿಸಿರುವುದು ಮತ್ತೊಂದೆಡೆ ಚರ್ಚೆಗೆ ಗ್ರಾಸವಾಗಿದೆ.

ಗೋಮಟೇಶ್ವರ ಎಕ್ಸ್‌ಪ್ರೆಸ್: 16576/16540

ಗೋಮಟೇಶ್ವರ ಹಗಲು ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡುತ್ತಿದ್ದ 16576/16540 ಸಂಖ್ಯೆಯ ರೈಲು ಇನ್ನು ಮುಂದೆ ಬೆಳಗ್ಗೆ 11.40ಕ್ಕೆ ಹೊರಡಲಿವೆ. ಯಶವಂತಪುರ ತಲುಪುವ ಸಮಯವನ್ನು ಸಂಜೆ 4.30ರ ಬದಲಿಗೆ ರಾತ್ರಿ 10.15ಕ್ಕೆ ನಿಗದಿಪಡಿಸಲಾಗಿದೆ.

ಯಶವಂತಪುರದಿಂದ ಮಂಗಳೂರು ಕಡೆಗೆ ಬರುವ 16575/16539 ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಈ ರೈಲು ಪಡೀಲ್‌ಗೆ ಸಂಜೆ 4.25ರ ಬದಲಿಗೆ 5 ಗಂಟೆಗೆ ಆಗಮಿಸಲಿದ್ದು, ಮಂಗಳೂರು ಜಂಕ್ಷನ್‌ಗೆ ಸಂಜೆ 4.40ರ ಬದಲಿಗೆ 5.10ಕ್ಕೆ ತಲುಪಲಿವೆ.

ಯಶವಂತಪುರ-ಕಾರವಾರ 16515

ಯಶವಂತಪುರ-ಕಾರವಾರ 16515 ರೈಲಿನ ಪಡೀಲ್ ಆಗಮನ ಸಮಯವನ್ನು ಸಂಜೆ 4.25ರಿಂದ 5 ಗಂಟೆಗೆ ಹಾಗೂ ತೋಕೂರು ಆಗಮನ ಸಮಯವನ್ನು ಸಂಜೆ 5.45ರಿಂದ 6.20ಕ್ಕೆ ಬದಲಿಸಲಾಗಿದೆ. ಕಾರವಾರ ತಲುಪುವ ಸಮಯ ರಾತ್ರಿ 10.45ರ ಬದಲಿಗೆ 11.30 ಆಗಿದೆ. ಕಾರವಾರ-ಯಶವಂತಪುರ 16516 ರೈಲು ಯಶವಂತಪುರ ತಲುಪುವ ಸಮಯ ರಾತ್ರಿ 8.50ರ ಬದಲಿಗೆ 10.15ಕ್ಕೆ ಬದಲಾವಣೆಯಾಗಿದೆ.

ದುಬಾರಿ ವಂದೇ ಭಾರತ್‌ಗಾಗಿ ಕಡಿಮೆ ದರದಲ್ಲಿ ಬೆಂಗಳೂರಿಗೆ ತೆರಳಲು ಸಾಮಾನ್ಯ ಜನರಿಗೆ ನೆರವಾಗುತ್ತಿದ್ದ ಹಗಲು ರೈಲಿನ ಸಮಯವನ್ನೇ ಬದಲಿಸುವುದು ಯಾವ ರೀತಿಯ ರೈಲ್ವೆ ಅಭಿವೃದ್ಧಿ ಎಂಬ ಪ್ರಶ್ನೆ ಎದ್ದಿದೆ. ಹಗಲು ರೈಲಿನಲ್ಲಿ ತೆರಳಿ ರಾತ್ರಿ ಬೆಂಗಳೂರು ತಲುಪಿದ ಬಳಿಕ ತಮ್ಮ ಗಮ್ಯಸ್ಥಾನಕ್ಕೆ ತೆರಳಲು ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕವೂ ಕೇಳಿಬರುತ್ತಿದೆ.

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ರೈಲ್ವೆ ಸಚಿವರನ್ನು ಭೇಟಿಯಾದ ಬೆನ್ನಲ್ಲೇ ವೇಳಾಪಟ್ಟಿ ಬದಲಾವಣೆ ಪ್ರಕಟವಾಗಿರುವುದರಿಂದ, ಈ ಭೇಟಿಗೂ ನಿರ್ಧಾರಕ್ಕೂ ಸಂಬಂಧವಿದೆಯೇ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ವೇಳಾಪಟ್ಟಿ ಬದಲಾಯಿಸದಂತೆ ಮನವಿ

ಪ್ರಸ್ತಾಪಿಸಿರುವ ಬದಲಾವಣೆಯನ್ನು ಮರುಪರಿಶೀಲಿಸಿ, ಈಗಿನ ಸಮಯವನ್ನೇ ಮುಂದುವರಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ರೈಲು ಸಂಖ್ಯೆ 16576 ಹಾಗೂ 16539/16540ರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಸಂಸದರು ಈ ಮನವಿ ಸಲ್ಲಿಸಿದ್ದಾರೆ. ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಯನ್ನು ಕೈಬಿಟ್ಟು ಹಿಂದಿನ ಸಮಯವನ್ನೇ ಮುಂದುವರಿಸಬೇಕು ಎಂದು ರೈಲ್ವೆ ಸಚಿವಾಲಯ ಹಾಗೂ ನೈಋತ್ಯ ರೈಲ್ವೆಗೆ ಚೌಟ ಮನವಿ ಮಾಡಿದ್ದಾರೆ.