ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಪ್ರದೇಶವನ್ನು ವಿಭಜಿಸಿ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ವಿರೋಧಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಈ ವಿಭಜನೆಯಿಂದ ಕೇರಳಕ್ಕೆ ವಾರ್ಷಿಕ 1,600 ಕೋಟಿ ರೂ. ನಷ್ಟವಾಗಲಿದ್ದು, ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ತಿರುವನಂತಪುರಂ: ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಪ್ರದೇಶವನ್ನು ವಿಭಜಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಕಾಂಗ್ರೆಸ್ ಶಾಸಕ ರಮೇಶ್ ಪಿಶಾರಡಿ ಮಂಡಿಸಿದ ನಿರ್ಣಯವನ್ನು ಅಂಗೀಕರಿಸುವ ಮೂಲಕ, ವಿಭಾಗವನ್ನು ಅದರ ಮೂಲ ಸ್ಥಿತಿಗೆ ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿತು. ಪ್ರಸ್ತಾವನೆ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಾತನಾಡಿ, ವಿಭಜನೆಯು ರಾಜ್ಯದ ರೈಲ್ವೆ ಅಭಿವೃದ್ಧಿ ಸಾಧ್ಯತೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ಅಥವಾ ಕೇರಳದ ಸಂಸದರಿಗೆ ತಿಳಿಸದೆ ರೈಲ್ವೆ ಸಚಿವಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ಅಕ್ಟೋಬರ್‌ 1 ರಿಂದ ಮೈಸೂರು ವಿಭಾಗ

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಪ್ರದೇಶವನ್ನು ವಿಭಜಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಗೊಳಿಸಲಾಗಿದೆ. ಮಂಗಳೂರು ರೈಲು ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದು ಆಡಳಿತಾತ್ಮಕ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಹೊಸ ವ್ಯಾಪ್ತಿಯಡಿ ರೈಲುಗಳ ಸಂಚಾರ, ನಿರ್ವಹಣಾ ಚಟುವಟಿಕೆಗಳು, ಸುರಕ್ಷತಾ ಕ್ರಮಗಳು ಹಾಗೂ ಇತರ ರೈಲ್ವೆ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಸುಗಮವಾಗಿ ಮುಂದುವರಿಯುವಂತೆ ಮೈಸೂರು ವಿಭಾಗ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ. ಅಕ್ಟೋಬರ್‌ 1 ರಿಂದ ಮೈಸೂರು ವಿಭಾಗಕ್ಕೆ ಮಂಗಳೂರು ಪ್ರದೇಶ ಸೇರ್ಪಡೆಯಾಗಿದೆ/

ವಿಧಾನಸಭೆಯಲ್ಲಿ ವಿಷಯ ಮಂಡಿಸಿದ ಪಾಲಕ್ಕಾಡ್ ಶಾಸಕ ಶಫಿ ಪಿಶಾರಡಿ, ಪಾಲಕ್ಕಾಡ್ ರೈಲ್ವೇ ವಿಭಾಗಕ್ಕೆ ಮಂಗಳೂರು ಪ್ರದೇಶವೇ ಆರ್ಥಿಕ ಬೆನ್ನೆಲುಬಾಗಿತ್ತು. ಈ ವಿಭಾಗವು ಪ್ರತಿದಿನ ಸುಮಾರು 2.75 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಅದರಲ್ಲಿ ಬಹುಪಾಲು ಆದಾಯವು ಮಂಗಳೂರು ವಲಯದ ಸರಕು ಹಾಗೂ ಪ್ರಯಾಣಿಕರ ಸೇವೆಯಿಂದಲೇ ಹರಿದುಬರುತ್ತಿತ್ತು. ಅಕ್ಟೋಬರ್ 1, 2026 ರಂದು ಮಂಗಳೂರು ವಲಯವು ಅಧಿಕೃತವಾಗಿ ಮೈಸೂರು ವಿಭಾಗದ ಪಾಲಾಗಿದೆ. ಇದರಿಂದ ಪಾಲಕ್ಕಾಡ್ ವಿಭಾಗದ ಶಕ್ತಿಯೇ ಕುಸಿದುಬಿದ್ದಂತಾಗಿದ್ದು, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ನೌಕರರ ಭವಿಷ್ಯ ಹಾಗೂ ಭತ್ಯೆಗಳ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ " ಎಂದು ಕಳವಳ ವ್ಯಕ್ತಪಡಿಸಿದರು.

1,600 ಕೋಟಿ ರೂ. ನಷ್ಟದ ಆರೋಪ

ಚರ್ಚೆಯಲ್ಲಿ ಪಾಲ್ಗೊಂಡ ಯುಡಿಎಫ್ ಹಾಗೂ ಎಲ್‌ಡಿಎಫ್ ಶಾಸಕರು, ಮಂಗಳೂರನ್ನು ಬೇರ್ಪಡಿಸಿರುವುದರಿಂದ ಕೇರಳ ರಾಜ್ಯಕ್ಕೆ ವಾರ್ಷಿಕವಾಗಿ ಸುಮಾರು 1,600 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಸಂಭವಿಸಲಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ಸತತವಾಗಿ ನಿರ್ಲಕ್ಷಿಸುತ್ತಿದೆ. ಯಾವುದೇ ಪೂರ್ವಭಾವಿ ಮಾತುಕತೆ ನಡೆಸದೆ ಏಕಪಕ್ಷೀಯವಾಗಿ ಇಂತಹ ನಿರ್ಧಾರಗಳನ್ನು ತಳೆಯುತ್ತಿರುವುದು ಕೇಂದ್ರದ ಸೌಹಾರ್ದಯುತ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಮತ್ತು ಆಡಳಿತ ಪಕ್ಷದ ನಾಯಕರು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಈ ವಿಚಾರವಾಗಿ ಕೇರಳ ವಿಧಾನಸಭೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ಒಟ್ಟಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ನಿಲುವಳಿ ಸೂಚನೆ ಅಂಗೀಕರಿಸಿದ್ದರೆ, ಅತ್ತ ಬಿಜೆಪಿ ಈ ನಿರ್ಣಯವನ್ನು ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ ಎಂದು ಲೇವಡಿ ಮಾಡಿದೆ.