ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾರ್ ಅವರ ಮನವಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಂದಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮಂಡ್ಯ ಜನತೆಗೆ ಸಹಕಾರಿಯಾಗಲಿದೆ. ಹಾಗಾದ್ರೆ ಮಂಡ್ಯ ಜನರಿಗೆ ಸಿಎಂ ಡಿಕೆ ಶಿವಕುಮಾರ್ ನೀಡಿದ ಗುಡ್ನ್ಯೂಸ್ ಏನು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.
ಮಂಡ್ಯ: ಜಿಲ್ಲೆಯ ಜನರಿಗೆ ಅಗತ್ಯವಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಉಪ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಂಡ್ಯ ನಗರದಲ್ಲಿ 100 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆ ಉಪ ಕೇಂದ್ರ ಸ್ಥಾಪಿಸುವಂತೆ ಶಾಸಕ ಪಿ.ರವಿಕುಮಾರ್ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಉಪ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದರು.
ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತುರ್ತು ಚಿಕಿತ್ಸೆಗಾಗಿ ಮಂಡ್ಯದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಇದೆ. ತುರ್ತು ಸಂದರ್ಭಗಳಲ್ಲಿ ದೂರದ ಆಸ್ಪತ್ರೆಗೆ ಪ್ರಯಾಣಿಸುವ ಸಮಯದಲ್ಲೇ ಅಮೂಲ್ಯ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನುಡಿದರು
ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ಸ್ಥಳೀಯವಾಗಿಯೇ ದೊರೆಯಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗುವವರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ೧೦೦ ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ಉಪಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಪಿ.ರವಿಕುಮಾರ್ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿಗಾಗಿ ಕಾದು ಹೈರಾಣದ ಜನರು
ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜನರು ಮುಖ್ಯಮಂತ್ರಿ ಬರುವಿಕೆಗಾಗಿ ಕಾದು ಕಾದು ಸುಸ್ತಾದರು. ಸಮಾರಂಭ ಬೆಳಗ್ಗೆ 10ಕ್ಕೆ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗ್ಗೆ 11.45ಕ್ಕೆ ಪಿಇಎಸ್ ಹೆಲಿಪ್ಯಾಡ್ಗೆ ಬಂದಿಳಿದರು. ನಂತರ ನೇರವಾಗಿ ವೇದಿಕೆ ಕಾರ್ಯಕ್ರಮದತ್ತ ಆಗಮಿಸದೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ನಗರದ ಕೆರೆಯಂಗಳಕ್ಕೆ ತೆರಳಿದರು.
ಅಲ್ಲಿಯೂ ವೇದಿಕೆ ಕಾರ್ಯಕ್ರಮ ಒಂದು ಗಂಟೆ ಕಾಲ ನಡೆಯಿತು. ಅಲ್ಲಿಂದ ಮುಗಿಸಿಕೊಂಡು ಸಮಾರಂಭದ ವೇದಿಕೆಗೆ ಬಂದಾಗ 12.45 ಗಂಟೆಯಾಗಿತ್ತು. ಇದರಿಂದ ಜನರು ಕಾದು ಕಾದು ಹೈರಾಣಾಗಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರೂ ಬಸವಳಿದ್ದಿದ್ದರು. ಮುಖ್ಯಮಂತ್ರಿ ಭಾಷಣ ಮುಗಿಯುವಷ್ಟರಲ್ಲಿ ಮಧ್ಯಾಹ್ನ 2.15 ಗಂಟೆಯಾಗಿತ್ತು. ಆಗ ಸಾರ್ವಜನಿಕರು ಸಿಎಂ ಭಾಷಣ ಬಿಟ್ಟು ಊಟದತ್ತ ಮುಖ ಮಾಡಿದ್ದರು. ಸಮಾರಂಭ ಮುಗಿಯುವವರೆಗೂ ಜನರು ಯಾವ ಕಡೆಯಿಂದಲೂ ಹೊರಹೋಗದಂತೆ ಕಬ್ಬಿಣದ ಗೇಟ್ಗಳನ್ನು ಅಳವಡಿಸಿದ್ದರು. ಆದರೂ ಜನರು ಅದನ್ನು ಲೆಕ್ಕಿಸದೆ ಕಬ್ಬಿಣದ ಗೇಟ್ಗಳನ್ನು ಎತ್ತಿಟ್ಟು ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು.
ಊಟಕ್ಕಾಗಿ ನೂಕು ನುಗ್ಗಲು
ಒಂದೇ ಬಾರಿಗೆ ಆಯೋಜಕರು ಊಟ ವಿತರಿಸಲು ಮುಂದಾದರು. ಆಗ ಸಾರ್ವಜನಿಕರು ನುಗ್ಗಿದರು. ಇದರಿಂದ ಊಟದ ಕೌಂಟರ್ಗಳಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಊಟದ ಬಗ್ಗೆಯೂ ಜನರು ಅಸಮಾಧಾನ ಹೊರಹಾಕುತ್ತಾ ನಡೆಯುತ್ತಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಬಸ್ಗಳ ಮೂಲಕ ಸಾರ್ವಜನಿಕರು ಆಗಮಿಸಿದ್ದರು. ಬಸ್ಗಳು ಹೊರಟುಹೋಗುತ್ತವೆಂಬ ಕಾರಣಕ್ಕೆ ಆತುರಾತುರವಾಗಿ ಊಟ ತಿಂದು ಬಸ್ಗಳತ್ತ ತೆರಳಿದರು.
ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಎರಡೂ ಕಡೆ ಬ್ಯಾರಿಕೇಡ್ಗಳನ್ನು ಅಳವಡಿಸಿ ಸಂಚಾರ ಬಂದ್ ಮಾಡಲಾಗಿತ್ತು. ಹೊಳಲು ಸರ್ಕಲ್ ಕಡೆ ಹೋಗುವ ದಾರಿಯನ್ನೂ ಕೆಲ ಸಮಯದವರೆಗೆ ಬಂದ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಯಿತು. ಮಧ್ಯಾಹ್ನ 3.30ರ ಸಮಯಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ನಲ್ಲಿ ನಿರ್ಗಮಿಸಿದ ಬಳಿಕ ಸಂಚಾರ ವ್ಯವಸ್ಥೆ ಸುಗಮಗೊಂಡಿತು.






