ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ‘ಟೈಂ’ ಸಮಸ್ಯೆ..!
ಸೆಲೆಬ್ರಿಟಿ ಕಲಾವಿದರಿಗೆ ಪ್ರೈಮ್ ಟೈಂ, ಸ್ಥಳೀಯರಿಗೆ ಬಿಸಿಲೇ ಗತಿ, ಪ್ರಚಾರ ಸಾಮಗ್ರಿಯಲ್ಲಿ ಸ್ಥಳೀಯರ ಹೆಸರು ಬಳಸಲು ಅಸಡ್ಡೆ?.
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.26): ಕಲ್ಯಾಣ ಕರ್ನಾಟಕ ಉತ್ಸವ ಮುಖ್ಯ ವೇದಿಕೆ ಸಂಗೀತ, ನೃತ್ಯ ಪ್ರದರ್ಶನಗಳಲ್ಲಿ ಸ್ಥಳೀಯರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಲಾಗಿದೆ ಎಂಬ ಆರೋಪ ಪುಂಖಾನುಪುಂಖವಾಗಿ ಕೇಳಿಬರುತ್ತಿವೆ. ಕಲ್ಯಾಣದ ಪ್ರತಿಭೆಗಳಿಗೆ ಈ ಉತ್ಸವ ವೇದಿಕೆಯಾಗಬೇಕು ಎಂದು ಆರಂಭದಿಂದಲೂ ಆಗ್ರಹಗಳಿದ್ದವು. ಬೇಡಿಕೆ ಪೂರೈಸಿದಂತೆಯೂ ಆಗಬೇಕು. ಸ್ಥಳೀಯರಿಗೆ ವೇದಿಕೆ ನೆರವೂ ಆಗಬಾರದು ಎಂಬಂತೆ ಮಾಡಿದ್ದಾರೆ.
ಮುಖ್ಯ ವೇದಿಕೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ಕಾರ್ಯಕ್ರಮ ಆರಂಭ. ವೇದಿಕೆ ಓಪನ್ ಏರ್ ಅಂದರೆ ಪ್ರೇಕ್ಷಕರು, ಸಭಿಕರೂ ಬಯಲಲ್ಲೇ ಕುಳಿತು ಆಲಿಸಬೇಕು. ಹೀಗಿರುವಾಗ ಕಲಬುರಗಿಯಲ್ಲೀಗ ಶಿವಶಿವ ಅನ್ನುವಂತೆ ರಣ ಬಿಸಿಲು. ಮುಖ್ಯ ವೇದಿಕೆಯಲ್ಲಿ ಕಲಾವಿದರು ಅದ್ಹೇಗೆ ತಮ್ಮ ಪ್ರದಶರ್‍ನ ನೀಡಬೇಕು? ಅದನ್ನು ಜನ ಹೇಗೆ ಆಲಿಸಬೇಕು? ನೋಡಬೇಕು ಎಂಬ ಪ್ರಶ್ನೆಗೆ ಉತ್ತರವೇ ನೀಡೋರಿಲ್ಲ!
KALABURAGI: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಾಧಕರಿಗೆ ಅವಮಾನ!
ಈ ಮುಖ್ಯ ಬಯಲು ವೇದಿಕೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾವಿದರ ಸಂಗೀತ, ಸಾಂಸ್ಕೃತಿಕ ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಗತಿಯೇ ಅನೇಕರನ್ನು ಕೆರಳಿಸಿದೆ. ಉತ್ಸವದ 3 ದಿನಗಳಲ್ಲಿ ನಿತ್ಯ 3 ರಿಂದ 4 ಗಂಟೆವರೆಗೆ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮೀಸಲಿಡಲಾಗಿದೆ. ಆದರೆ ಆಹ್ವಾನಿತ ಬಾಲಿವುಡ್, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗೆ ಮಾತ್ರ ಸಂಜೆ 7 ಗಂಟೆ ನಂರತವೇ ಸಮಯ ನೀಲಾಗಿದೆ. ಹೀಗಾಗಿ ಸ್ಥಳೀಯರಿಂದ ನಿಗದಿತ ಸಮಯದ ಬಗ್ಗೆ ಆಕ್ಷೇಪ ಕೇಳಿ ಬಂದಿದೆ.
ಮಾಲಾ ಕಣವಿ ಸುಗಮ ಸಂಗೀತ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕಲಬುರಗಿ ಮೇರು ಪ್ರತಿಭೆಯಾಗಿದ್ದರೂ ಇಂತಹ ಮಹಾನ್ ಕಲಾವಿದೆಯ ಸಂಗೀತಕ್ಕೆ ಮಟಮಟ ಮಧ್ಯಾಹ್ನ 4 ಗಂಟೆ ನಿಗದಿಪಡಿಸಿದ್ದಾರೆ. ಇದೇ ರೀತಿ ಬೀದರ್‌ನ ವೀರ ಸಮರ್ಥ ತಂಡವರಿಗೆ, ಸೀಮಾ ಪಾಟೀಲ್ ತಂಡಕ್ಕೂ ಇದೇ ಬಿಸಿಲಿನ ಸಮಯವನ್ನೇ ಹಂಚಿ ಕೈತೊಳೆದುಕೊಂಡಿದ್ದಾರೆಂದು ಸಂಗೀತ ಪ್ರಿಯರು ಆರೋಪಿಸುತ್ತಿದ್ದಾರೆ.
ಸೆಲೆಬ್ರಿಟಿಗಳಾದ ಓಡಿಶಾ ಡ್ಯಾನ್ಸ್ ತಂಡ, ವಿಜಯ ಪ್ರಕಾಶ ತಂಡ, ಸಲೀಮ್ ಸುಲೇಮಾನ್ ತಂಡ, ಅರ್ಜುನ ಜನ್ಯ ತಂಡ, ಸಾನ್ ಮುಂಬೈ, ಮುಂಬೈ ಡ್ಯಾನ್ಸಸ್, ಅನನ್ಯ ಭಟ್ ತಂಡ, ಪ್ರಹ್ಲಾದ್ ಆಚಾರ್ಯ ತಂಡ ಹಾಗೂ ಸೋನು ನಿಗಮ್ ತಂಡಕ್ಕೆ ಸಂಜೆಯ ಇಳಿ ಹೊತ್ತು 7 ಗಂಟೆಯಾದ ನಂತರವಷ್ಟೇ ಸಮಯ ನೀಡಿ ಅನುಕೂಲ ಮಾಡಲಾಗಿದೆ. ಸ್ಥಳೀಯರಿಗೆ ಬಿಸಿಲಿನ ಸಮಯ ಹೊರಗಿನವರಿಗೆ ತಂಪಾದ ಬೇಳೆ ನಿಗದಿ ಎಷ್ಟುಸರಿ ಎಂಬುದು ಪ್ರಜ್ಞಾವಂತರು, ಸ್ಥಳೀಯ ಸಂಗೀತ ಪ್ರಿಯರು, ಕಲಾವಿದರ ಪ್ರಶ್ನೆಯಾಗಿದೆ.
Kalyana Karnataka Utsav 2023: ಕಲ್ಯಾಣ ಕರ್ನಾಟಕದ ಗತ ವೈಭವದ ವಾರಸುದಾರರಾಗಿ ಎಂದು ಸೇಡಂ ಕರೆ
ಸ್ಥಳೀಯ ಕಲಾವಿದರ ಹೆಸರು, ಪೋಟೋ ಇಲ್ಲ ?
ಉತ್ಸವಕ್ಕಾಗಿ ವಾಟ್ಸಪ್ ಕರಪತ್ರ ಪ್ರಚಾರ ಸಾಮಗ್ರಿಗಳಲ್ಲಿಯೂ ಸ್ಥಳೀಯರು ಕಡೆಗಣನೆ ಆಗಿದ್ದಾರೆ. ಉತ್ಸವದ ಕಲೆ, ಸಂಗೀತ ಸಮಾರಂಭಕ್ಕಾಗಿ ಸಿದ್ಧಪಡಿಸಿರುವ ಲೋಗೋದಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್ ಕಲಾವಿದರ ಭಾವಚಿತ್ರಗಳನ್ನೆಲ್ಲ ಬಳಸಲಾಗಿದೆ. ಆದರೆ, ಸ್ಥಳೀಯ ಯಾರೊಬ್ಬರ ಭಾವಚಿತ್ರ ಕೂಡಾ ಗುಂಪಿನಲ್ಲಿಲ್ಲ! ಇದೂ ಸಹ ಸ್ಥಳೀಯರ ನಿರಾಸೆಗೆ ಕಾರಣವಾಗಿದೆ.
ಪ್ರೋತ್ಸಾಹ ಕೊರತೆಯಿಂದಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರತಿಭೆಗಳು ಇಲ್ಲದಂತಾಗಿರುವುದು. ಇಲ್ಲಿ ವೇದಿಕೆ ಕೊಟ್ಟು, ಅವರಿಗೂ ಅದ್ಧೂರಿಯಾಗಿ ಸೆಲೆಬ್ರಿಟಿಗಳ ಜೊತೆಗೆ ಪ್ರಚಾರ ನೀಡಲು ಸಂಘಟಕರಿಗೆ ಯಾಕೆ ಆಗಲಿಲ್ಲ? ಎಂದು ಜನ ಕೇಳುತ್ತಿದ್ದಾರೆ.