ಕೊಡಗಿನ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ: ನಿಟ್ಟುಸಿರು ಬಿಟ್ಟ ಜನತೆ

ದಕ್ಷಿಣ ಕೊಡಗಿನ ಲಕ್ಕುಂದ ಗ್ರಾಮದಲ್ಲಿ ಹುಲಿ ಕಳೇಬರ ಪತ್ತೆ| ಹೈಸೊಡ್ಲೂರು ಗ್ರಾಮದಲ್ಲಿ ಕಾರ್ಯಾಚರಣೆ ಸಂದರ್ಭ ಗುಂಡೇಟು ತಿಂದ ಹುಲಿಯ ಮೃತದೇಹ| ಹುಲಿಯ ಕೊರಳಿನ ಕೆಳಭಾಗಕ್ಕೆ ಗುಂಡು ತಾಗಿರುವ ಗುರುತು|  ಗುಂಡೇಟಿನಿಂದ ಹುಲಿ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿದೆ| 

Tiger Found Dead in Forest at Kodagu grg

ಗೋಣಿಕೊಪ್ಪ(ಮಾ.20): ದಕ್ಷಿಣ ಕೊಡಗಿನ ಲಕ್ಕುಂದ ಗ್ರಾಮದಲ್ಲಿ ಶುಕ್ರವಾರ ಹುಲಿ ಕಳೇಬರ ಪತ್ತೆಯಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಆನೆ ಕಂದಕದಲ್ಲಿ ಪತ್ತಯಾಗಿರುವ ಈ ಹುಲಿ 8 ವರ್ಷ ಅಂದಾಜು ಪ್ರಾಯದ ಗಂಡು ಹುಲಿ ಎಂದು ತಿಳಿದುಬಂದಿದೆ.

ಲಕ್ಕುಂದ ಗ್ರಾಮದ ಕೊಡಂದೇರ ರವಿ ಎಂಬುವವರ ತೋಟದ ಗಡಿಯಲ್ಲಿರುವ ಆನೆ ಕಂದಕದಲ್ಲಿ ಕಳೇಬರ ಕೊಳೆತ ಸ್ಥಿತಿಯಲ್ಲಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗೆ ಕೂಂಬಿಂಗ್‌ ಕಾರ್ಯಾಚರಣೆ ಸಂದರ್ಭ ವಾಸನೆ ಬರುತ್ತಿರುವುದನ್ನು ಪರಿಶೀಲನೆ ಮಾಡಿದಾಗ ಕಳೇಬರ ಪತ್ತೆಯಾಗಿದೆ. ಹೈಸೊಡ್ಲೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟು ತಿಂದು ಎಲ್ಲಿಯೂ ಕಾಣಿಸಿಕೊಳ್ಳದೆ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಇದೀಗ ಅದೇ ಹುಲಿ ಕಳೇಬರ ಪತ್ತೆಯಾಗಿರುವುದು ಅರಣ್ಯ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.

ಕೊಡಗಿನ ನರಭಕ್ಷಕ ಹುಲಿ ಕೊಲ್ಲಲು ಆದೇಶ : 150 ಸಿಬ್ಬಂದಿ

ಗುಂಡೇಟಿನ ಗುರುತು:

ಸಿಸಿಎಫ್‌ ತಾಕತ್‌ಸಿಂಗ್‌ ರಾಣಾವತ್‌ ಮಾತನಾಡಿ, ಹುಲಿಯ ಕೊರಳಿನ ಕೆಳಭಾಗಕ್ಕೆ ಗುಂಡು ತಾಗಿರುವ ಗುರುತುಗಳಿವೆ. ಗುಂಡೇಟಿನಿಂದ ಹುಲಿ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಜಾನುವಾರು ಹಾಗೂ ಜನರ ಮೇಲೆ ದಾಳಿ ನಡೆಸಿರುವ ಹುಲಿಯ ಮೈಮೇಲಿರುವ ಪಟ್ಟಿಗಳ ಮಾಹಿತಿ ಆಧರಿಸಿ ಲಕ್ಕುಂದ ಗ್ರಾಮದಲ್ಲಿ ಪತ್ತೆಯಾಗಿರುವ ಹುಲಿಯ ಕಳೇಬರದ ಮೇಲಿರುವ ಪಟ್ಟಿಗಳು ಒಂದೇ ರೀತಿ ಇದೆ ಎಂದು ಮಾಹಿತಿ ನೀಡಿದರು.

ಕೊಡಗು: ಮೂವರನ್ನು ಕೊಂದಿದ್ದು ಗಂಡು ಹುಲಿ..!

ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್‌ ಗೋಪಾಲ್‌ ಮಾತನಾಡಿ, ಹುಲಿಗೆ ಗುಂಡಿಕ್ಕಲು ಆದೇಶ ಬಂದ ನಂತರ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಹೈಸೊಡ್ಲೂರು ಗ್ರಾಮದಲ್ಲಿ ಗುಂಡು ಹಾರಿಸಿದ್ದರು. ಆದರೆ ಹುಲಿ ತಪ್ಪಿಸಿಕೊಂಡಿತ್ತು. ನಂತರ ಹುಲಿ ನಾಲ್ಕೇರಿ ಗ್ರಾಮದಲ್ಲಿ ಜಾನುವಾರು ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಾರಣದಿಂದ ಹುಲಿ ನಾಗರಹೊಳೆ ಭಾಗಕ್ಕೆ ಬಂದಿರಬುಹುದು ಎಂಬ ಅಂದಾಜಿನ ಮೇಲೆ ಕೂಂಬಿಂಗ್‌ ನಡೆಸುತ್ತಿದ್ದ ಸಂದರ್ಭ ಕಳೇಬರ ಪತ್ತೆಯಾಗಿದೆ. ಬೆಳ್ಳೂರು ಗ್ರಾಮದಲ್ಲಿ ಬಾಲಕನ್ನು ಬಲಿಡೆದು, ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿರುವ ಹುಲಿಗೆ ಹಾಗೂ ಲಕ್ಕುಂದ ಗ್ರಾಮದಲ್ಲಿ ಸಿಕ್ಕರುವ ಹುಲಿಯ ಕಳೇಬರದ ಮೇಲಿರುವ ಪಟ್ಟಿಗಳು ತಾಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡಾ.ಮುಜೀಬ್‌ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಹುಲಿ ಕಳೇಬರವನ್ನು ಸುಟ್ಟು ಹಾಕಲಾಯಿತು.
 

Latest Videos
Follow Us:
Download App:
  • android
  • ios