ವಿಧಾನ ಪರಿಷತ್‌ (ಮಾ.16):  ಕೊಡಗು ಜಿಲ್ಲೆಯಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಕೊಲ್ಲಲು ಈಗಾಗಲೇ ಆದೇಶ ಮಾಡಲಾಗಿದ್ದು, ಹುಲಿ ಪತ್ತೆಗೆ 150ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಬಿಜೆಪಿಯ ಸುನೀಲ್‌ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ನರಹಂತಕ ಹುಲಿ ಹೊರತು ಪಡಿಸಿ ಬೇರೆ ಎರಡು ಹುಲಿ ಹಿಡಿಯಲಾಗಿದೆ, ಹುಲಿ ಹಿಡಿಯಲು ಅಧಿಕಾರಿಗಳು ಸೇರಿದಂತೆ 150 ಸಿಬ್ಬಂದಿ, ಹುಲಿ ಕೊಲ್ಲಲು ಶಾಪ್‌ರ್‍ ಶೂಟರ್‌ ನಿಯೋಜನೆ ಮಾಡಲಾಗಿದೆ. ಆದಷ್ಟುಬೇಗ ಹುಲಿ ಹಿಡಿಯಲಾಗುವುದು ಎಂದರು. ಜಿಲ್ಲೆಯ ಶಾಸಕರೊಬ್ಬರು ಹುಲಿ ಹತ್ಯೆಗೆ ಅನುಮತಿ ನೀಡಿದರೆ ಸ್ಥಳೀಯರೇ ಆ ಕೆಲಸ ಮಾಡುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ರೀತಿ ಯಾರೂ ಬೇಕಾದರೂ ಹುಲಿ ಹತ್ಯೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

'ಗುಂಡಿಕ್ಕಿ ಸಾಯಿಸಿ, ಆಮೇಲಿನ ಸಂಗತಿ ನಾವ್ ನೋಡಿಕೊಳ್ಳುತ್ತೇವೆ' ..

ಆಧುನೀಕರಣಕ್ಕೆ ಕ್ರಮ:  ರಾಜ್ಯದಲ್ಲಿ ಅರಣ್ಯ ರಕ್ಷಣೆ, ವನ್ಯಜೀವಿಗಳು ನಾಡಿಗೆ ಬರದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯ ಆಧುನೀಕರಣ ಮಾಡಬೇಕಾದ ಅಗತ್ಯತೆ ಇದೆ. ಅತ್ಯಾಧುನಿಕ ಉಪಕರಣ ಸೇರಿದಂತೆ ಹಲವು ಸೌಲಭ್ಯ ಕೊಡುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಇಟಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಅವುಗಳಿಗೆ ಬೇಕಾದ ನೀರು, ಆಹಾರ ಸಿಗಲು ಪೂರಕವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಸ್ತುತ ಶೇ.22.8ರಷ್ಟುಹಸಿರು ಪ್ರದೇಶವಿದ್ದು, ಇದನ್ನು ಶೇ.33ರಷ್ಟುಹೆಚ್ಚಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಈ ಗುರಿ ತಲುಪಲು ಅರಣ್ಯ ಬೆಳೆಸಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದರು.

- ನರಹಂತಕ ಹುಲಿ ಬಿಟ್ಟು ಇನ್ನೆರಡು ಹುಲಿ ಹಿಡಿದಿದ್ದಾರೆ: ಲಿಂಬಾವಳಿ