ಬೆಂಗಳೂರು(ಅ.21): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಸತಿ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ಗಳನ್ನು ಪಡೆದಿರುವ ಫಲಾನುಭವಿಗಳು ಬಡ್ಡಿ ರಹಿತವಾಗಿ ಹಣ ಪಾವತಿಸಲು ಡಿ.31ರ ವರೆಗೆ ಕಾಲಾವಕಾಶ ನೀಡಿದೆ.

ನಗರದ ವಿವಿಧೆಡೆ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ 1, 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ಪಡೆದಿರುವ ಫಲಾನುಭವಿಗಳಿಗೆ ಈಗಾಗಲೇ ಹಂಚಿಕೆ ಪತ್ರ ವಿತರಿಸಲಾಗಿದೆ. ಆದರೆ, ಕೆಲವು ಫಲಾನುಭವಿಗಳು ಈ ವರೆಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಇಂತಹವರಿಗೆ ನೋಟಿಸ್‌ ನೀಡಲಾಗಿದ್ದು, ನಿಗದಿತ ಸಮಯದಲ್ಲಿ ಹಣ ಪಾವತಿಸದಿದ್ದರೆ ಬಡ್ಡಿ ವಿಧಿಸಲಾಗುತ್ತದೆ ಎಂದು ಸೂಚಿಸಲಾಗಿದೆ.

BDAಗೆ ತಲೆನೋವಾದ ಬೃಹತ್‌ ರಸ್ತೆ ಕಾಮಗಾರಿ ಭೂ ವಿವಾದ

ಆದರೆ, ಆ.28ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಫ್ಲ್ಯಾಟ್‌ ಪಡೆದು ಹಣ ಪಾವತಿಸದ ಫಲಾನುಭವಿಗಳಿಗೆ ಬಡ್ಡಿ ರಹಿತವಾಗಿ ಹಣ ಪಾವತಿಸಲು ಡಿ.31ರ ವರೆಗೆ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಇಲ್ಲಿಯವರೆಗೂ ಹಣ ಪಾವತಿಸಲು ಫಲಾನುಭವಿಗಳು ಡಿ.31ರೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ, ಫ್ಲ್ಯಾಟ್‌ನ ಹಂಚಿಕೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.