ಸಂಪತ್‌ ತರೀಕೆರೆ

ಬೆಂಗಳೂರು(ಅ.13): ನಾಡಪ್ರಭು ಕೆಂಪೇಗೌಡ ಬಡಾವಣೆ ಮಧ್ಯದಲ್ಲಿ ಸುಮಾರು 465 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಮೀಟರ್‌ ಅಗಲದ ಬೃಹತ್‌ ರಸ್ತೆ ಕಾಮಗಾರಿಗೆ ಭೂ ಹಸ್ತಾಂತರ ವಿವಾದ ಅಡ್ಡಿಯಾಗಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ತಲೆನೋವಾಗಿ ಪರಿಣಮಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಮೈಸೂರು ರಸ್ತೆ- ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.77 ಕಿ.ಮೀ ಉದ್ದದ 100 ಮೀಟರ್‌ ಅಗಲದ ರಸ್ತೆ ನಿರ್ಮಾಣಕ್ಕಾಗಿ ಬಿಡಿಎ ವಿವಿಧ ಹಳ್ಳಿಗಳಿಂದ 321.10 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಈವರೆಗೆ ಕೇವಲ 252.35 ಎಕರೆ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದಿದ್ದು, 68.15 ಎಕರೆ ಭೂಮಿ ಹಸ್ತಾಂತರಕ್ಕೆ ಬಾಕಿ ಇದೆ.

ಇದಕ್ಕೆ ಸೂಲಿಕೆರೆ, ಕೆಂಚನಪುರ, ಚಲ್ಲಘಟ್ಟ, ಕನ್ನಳ್ಳಿ ಗ್ರಾಮದ ರೈತರು ನಮಗೆ ಪರಿಹಾರದ ಹಣ ಬೇಡ. 40/60ರ ಯೋಜನೆಯಂತೆ ಅಭಿವೃದ್ಧಿಪಡಿಸಿದ ಜಾಗ ಕೊಡಬೇಕು ಎಂದು ಪಟ್ಟು ಹಿಡಿದಿರುವುದು ಕಾರಣ. ಜತೆಗೆ ಈ ಯೋಜನೆಗೆ ಭೂಮಿ ಕೊಟ್ಟಿರುವ ರೈತರು, ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ (ಪಿಆರ್‌ಆರ್‌) ಈ ಹಿಂದೆ ಲಾರಿಗಳ ನಿಲ್ದಾಣವಾಗಿದ್ದ ಸೂಲಿಕೆರೆ ಬಳಿಯ 56 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಇದೀಗ ಅದನ್ನು ಪಿಆರ್‌ಆರ್‌ ಯೋಜನೆಯಿಂದ ಕೈಬಿಟ್ಟಿದ್ದು, ಆ ಭೂಮಿಯನ್ನೇ ಸರ್ಕಾರ ರೈತರಿಗೆ ಹಂಚಬೇಕು. ಅಲ್ಲಿವರೆಗೂ ಬಿಡಿಎ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬಿಡಿಎ ಸೈಟಲ್ಲಿದ್ದ 70000 ಅಕ್ರಮ ಮನೆಗಳಿಗೆ ಸಕ್ರಮ ಭಾಗ್ಯ

ಎಲ್ಲೆಲ್ಲಿ, ಎಷ್ಟೆಷ್ಟು ಭೂಮಿ ಬಾಕಿ?

ಯೋಜನೆಗಾಗಿ ಕಂಬಿಪುರ-7.15 ಎಕರೆ ಮತ್ತು ಮಾಚೋಹಳ್ಳಿಯಲ್ಲಿ 16.22 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕಿದ್ದು ಈ ಪೈಕಿ ಒಂದು ಅಡಿ ಜಾಗವನ್ನೂ ಕೂಡ ಬಿಡಿಎ ಈವರೆಗೆ ಸ್ವಾಧೀನಕ್ಕೆ ಪಡೆದಿಲ್ಲ. ಉಳಿದಂತೆ ಚಲ್ಲಘಟ್ಟ- 3.28 ಎಕರೆ, ಕೊಮ್ಮಘಟ್ಟ-2.25 ಎಕರೆ, ಸೂಲಿಕೆರೆ-8.70 ಎಕರೆ, ಕೆಂಚನಪುರ-15.39 ಎಕರೆ, ಕನ್ನಳ್ಳಿ- 3.30 ಎಕರೆ, ಸೀಗೇಹಳ್ಳಿ-6 ಎಕರೆ, ಕೊಡಿಗೆಹಳ್ಳಿ-4.35 ಎಕರೆ ಸೇರಿದಂತೆ ಒಟ್ಟು 68.15 ಎಕರೆ ಭೂಮಿ ಬಿಡಿಎಗೆ ಹಸ್ತಾಂತರವಾಗಬೇಕಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಡಿಎ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಾಮಗಾರಿ ಎರಡು ವರ್ಷ ವಿಳಂಬ!

ಸ್ಟಾರ್‌ ಬಿಲ್ಡರ್‌ ಆ್ಯಂಡ್‌ ಡೆವಲಪರ್‌ ಸಂಸ್ಥೆಗೆ 2018 ಮಾಚ್‌ರ್‍ 21ಕ್ಕೆ ಕಾಮಗಾರಿ ಆರಂಭಿಸಲು ಆದೇಶ ನೀಡಲಾಗಿದ್ದು 18 ತಿಂಗಳಲ್ಲಿ (2019 ಅಕ್ಟೋಬರ್‌ 20) ಯೋಜನೆ ಪೂರ್ಣಗೊಳಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಭೂಸ್ವಾಧೀನ ವಿವಾದ, ಕೋವಿಡ್‌-19 ಪಿಡುಗು ಮತ್ತು ಬಿಡಿಎ ಆರ್ಥಿಕ ಸಂಕಷ್ಟದಿಂದಾಗಿ ನಿಗದಿತ ಅವಧಿಗೆ ಯೋಜನೆ ಪೂರ್ಣಗೊಂಡಿಲ್ಲ. ಗುತ್ತಿಗೆ ಪಡೆದ ಸಂಸ್ಥೆಯು ಈವರೆಗೆ ಕೇವಲ ಶೇ.50ರಷ್ಟುಕಾಮಗಾರಿ ಮುಗಿಸಿದೆ ಎಂದು ಎನ್‌ಪಿಕೆಎಲ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸೂರ್ಯಕಿರಣ್‌ ಮಾಹಿತಿ ನೀಡಿದ್ದಾರೆ.

ನೂರು ಮೀಟರ್‌ ರಸ್ತೆಯಲ್ಲಿ 3 ಮುಖ್ಯ ಸೇತುವೆ (ಮೇಜರ್‌ ಬ್ರಿಡ್ಜ್‌), 8 ಬಾಕ್ಸ್‌ ಕಲ್ವಟ್ಸ್‌ರ್‍, 5 ವೃತ್ತಗಳು ಬರಲಿವೆ. ಅವುಗಳಲ್ಲಿ ಮುಖ್ಯ ಸೇತುವೆಗಳ ಕಾಮಗಾರಿ ಶೇ.35ರಿಂದ 40ರಷ್ಟುಆಗಿದ್ದು ಶೇ.60ರಷ್ಟುಬಾಕಿ ಇದೆ. ಬಾಕ್ಸ್‌ ಕಲ್ವಟ್ಸ್‌ರ್‍ಗಳಲ್ಲಿ ಒಂದು ಮಾತ್ರ ಪೂರ್ಣವಾಗಿದ್ದು 7ರ ಕಾಮಗಾರಿ ಆರಂಭಗೊಂಡಿಲ್ಲ. ಉಳಿದಂತೆ 100 ಮೀ. ರಸ್ತೆಯಲ್ಲಿ 10 ಮೀ. ಎರಡು ಮುಖ್ಯ ಮಾರ್ಗಗಳು(ಎಂಸಿಡಬ್ಲ್ಯೂ), ಎರಡು ಬದಿ ತಲಾ 7 ಮೀ. ಅಗಲದ ಸವೀರ್‍ಸ್‌ ರಸ್ತೆ, ಎರಡು ಕಡೆ 27.5 ಮೀ.ಅಗಲದ ಭೂದೃಶ್ಯ, ಎರಡು ಬದಿ 2 ಮೀ ಅಗಲದ ಫುಟ್‌ಪಾತ್‌, ತಲಾ 2 ಮೀ. ಅಗಲದ ಸೈಕಲ್‌ ಟ್ರಾಕ್‌, 3 ಮೀಟರ್‌ ವಿಭಜಕ ನಿರ್ಮಾಣಗೊಳ್ಳಲಿದೆ.

ಯೋಜನೆಗೆ ಭೂಮಿ ನೀಡಿದ ಕೆಲ ರೈತರು ಪರಿಹಾರದ ಬದಲು ಒಳ್ಳೆಯ ಜಾಗದಲ್ಲಿ ನಿವೇಶನ ಕೊಡಬೇಕು. ಆದರೆ ಬಿಡಿಎ ಬಳಿ ಜಾಗವೇ ಇಲ್ಲ. ಸೂಲಿಕೆರೆ ಬಳಿ ಇರುವ 56 ಎಕರೆ ಭೂಮಿಯನ್ನು ರೈತರಿಗೆ ನೀಡುವಂತೆ ಬೋರ್ಡ್‌ ನಿರ್ಣಯ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈವರೆಗೂ ಸರ್ಕಾರದಿಂದ ಉತ್ತರ ಬಂದಿಲ್ಲ. ಹೀಗಾಗಿ ರೈತರು ಕೂಡ ಸ್ವಾಧೀನದ ಭೂಮಿ ಹಸ್ತಾಂತರಿಸಿಲ್ಲ ಎಂದು ಕೆಂಪೇಗೌಡ ಲೇಔಟ್‌ನ ರೈತ ಮುಖಂಡ ಚನ್ನಪ್ಪ ತಿಳಿಸಿದ್ದಾರೆ. 

ಕೋವಿಡ್‌ 19 ಮತ್ತು ಭೂ ಹಸ್ತಾಂತರ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಸಿ ಯೋಜನೆ ಪೂರ್ಣಗೊಳಿಸಲಾಗುವುದು. ಪ್ರಸ್ತುತ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು 2021 ಡಿಸೆಂಬರ್‌ ಅಂತ್ಯದೊಳಗೆ ಯೋಜನೆ ಮುಕ್ತಾಯಗೊಳಿಸಲಾಗುವುದು ಎಂದು ಬಿಡಿಎ ಅಭಿಯಂತರ ಅಧಿಕಾರಿ ಬಿ.ಎ.ಶಿವಾನಂದ ಹೇಳಿದ್ದಾರೆ.