Tumakuru: ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯಗೆ ಬೆದರಿಕೆ ಪತ್ರ
ನಾಡೋಜ, ಪ್ರಸಿದ್ಧ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪಗೆ ಬುದ್ದಿ ಹೇಳುವಂತೆ ಆಗ್ರಹಿಸಿ, ತಮಗೆ ಬೆದರಿಕೆ ಪತ್ರಗಳು ಬಂದಿರುವುದಾಗಿ ಲೇಖಕ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.
ತುಮಕೂರು (ಸೆ.22): ನಾಡೋಜ, ಪ್ರಸಿದ್ಧ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪಗೆ ಬುದ್ದಿ ಹೇಳುವಂತೆ ಆಗ್ರಹಿಸಿ, ತಮಗೆ ಬೆದರಿಕೆ ಪತ್ರಗಳು ಬಂದಿರುವುದಾಗಿ ಲೇಖಕ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು. ತುಮಕೂರಿನಲ್ಲಿ ಸಂಜೆ ಕನ್ನಡ ಭವನದಲ್ಲಿ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಪ್ರತಿಷ್ಠಾನದ ವತಿಯಿಂದ ಏರ್ಪಾಟಾಗಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಚಂದ್ರಶೇಖರ ಆಲೂರು, ಲಲಿತಾ ಸಿದ್ಧಬಸವಯ್ಯಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬರಗೂರು ರಾಮಚಂದ್ರಪ್ಪ ಹಿಂದೂಧರ್ಮ ವಿರೋಧಿಯಾಗಿದ್ದು, ಅವರಿಗೆ ಬುದ್ದಿ ಹೇಳುವಂತೆ ಒತ್ತಾಯಿಸಿ, ವ್ಯಾಕರಣ ದೋಷಗಳಿಂದ ಕೂಡಿದ ಕನ್ನಡದಲ್ಲಿ ಪತ್ರಗಳು ಬಂದಿರುವುದು ಪ್ರಜಾಪ್ರಭುತ್ವದ ಅಣಕವೇ ಸರಿ ಎಂದು ಹನುಮಂತಯ್ಯಆಕ್ರೋಶ ವ್ಯಕ್ತಪಡಿಸಿದರು.
ನನಗೆ ಬಂದಿರುವ ಈ ಬೆದರಿಕೆ ಪತ್ರಗಳು, ಪತ್ರದ ಹಿಂದಿನ ಉದ್ದೇಶ, ಪರಿಣಾಮಗಳು ಕಳವಳಕಾರಿಯಾದವು. ಈ ಬಗ್ಗೆ ಪ್ರಜ್ಞಾವಂತ ವಲಯ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಭಾರತ ವಿಶ್ವಗುರುವಾಗಲು ಕೆಲವೇ ಹೆಜ್ಜೆಗಳಷ್ಟೇ ಬಾಕಿಯಿವೆ ಎಂದು ಬಿಂಬಿಸಿ, ಪ್ರಜಾಪ್ರಭುತ್ವವನ್ನು ವಿಜೃಂಭಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಸಂವಿಧಾನಬದ್ದ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲದ ಉಸಿರುಗಟ್ಟಿದ ವಾತಾವರಣವಿದ್ದು, ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು. ಕಮ್ಯುನಿಸ್ಟ್, ಸಮಾಜವಾದಿ ಚಿಂತನೆಯ ಲೇಖಕರನ್ನು ಗೌರವಿಸುತ್ತಿದ್ದ ದೇಶದಲ್ಲಿ 75 ವರ್ಷದಲ್ಲೇ ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದ್ದು, ಕಮ್ಯುನಿಸ್ಟ್ ಚಿಂತನೆಯವರು ದೇಶದ್ರೋಹಿಗಳಲ್ಲ, ಸತ್ಯಪಕ್ಷಪಾತಿಗಳು. ಯುವಜನರು ದಿಕ್ಕು ತಪ್ಪಿದಂತೆ ಧರ್ಮ, ಜಾತಿ ಹೆಸರಲ್ಲಿ ಭಾವೋದ್ರಿಕ್ತರಾಗುತ್ತಿದ್ದಾರೆ.
ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ, ಮುಸ್ಲಿಂ ಭಾಂದವರಿಂದ ಪೂಜೆ
ನೆಹರು ಕಾಲದಲ್ಲಿ ಗುರುತಿಸಿ ಗೌರವಿಸುತ್ತಿದ್ದ ಸಮಾಜಮುಖಿ ಚಿಂತನೆಯ ಸಾಹಿತಿಗಳನ್ನು ಇಂದು ಜೈಲಿಗಟ್ಟಲಾಗುತ್ತಿದೆ. 85 ವರ್ಷದ ಚಿಂತಕ ವರವರರಾವ್ ಅವರನ್ನು ಎಡಪಂಥೀಯ ಸಿದ್ಧಾಂತ ಪ್ರತಿಪಾದಿಸುತ್ತಾರೆ ಎನ್ನುವ ಕಾರಣಕ್ಕೆ ಜೈಲಿಗೆ ಕಳುಹಿಸಲಾಯಿತು. ಅಂಬೇಡ್ಕರ್ ಸಂಬಂಧಿಯೂ ಆದ ಚಿಂತಕ ಆನಂದ್ ತೇಲ್ ಥಾಮ್ಟೆಅವರನ್ನು ಜಾಮೀನುರಹಿತವಾಗಿ ಬಂಧಿಸಿ ಎರಡು ವರ್ಷಗಳಾಗಿದ್ದು, ಸಂಸತ್‌ನಲ್ಲಿ ಈ ಬಗ್ಗೆ ಪ್ರಶ್ನಿಸಿದರೂ ಉತ್ತರ ಕೊಡುವವರಿಲ್ಲ. ನ್ಯಾಯಾಲಯಗಳಲ್ಲೂ ಈ ಪ್ರಶ್ನಾರ್ಹ ಅರ್ಜಿಗಳ ವಿಚಾರಣೆ ಕಡೆಯಲ್ಲಿ ನಡೆಯುತ್ತಿದೆ. ಸಬ್ಸಿಡಿ ಏಕೆ ಕೊಡಬೇಕೆಂಬ ವಿಚಾರವನ್ನು ಮೊದಲಿಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.
ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಅಧ್ಯಕ್ಷರು, ಗಾಂಧಿವಾದಿಗಳೂ ಆದ ಎಂ. ಬಸವಯ್ಯ, ಪ್ರತಿಷ್ಟಾನ ಮಂಡಳಿಯ ಉಪಾಧ್ಯಕ್ಷರಾದ ಪತ್ರಿಕೋದ್ಯಮಿ ಎಸ್. ನಾಗಣ್ಣ, ಶಾಂತಾ ಸಣ್ಣಗುಡ್ಡಯ್ಯ, ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಡು, ಸದಸ್ಯರಾದ ಎಂ.ಎಚ್. ನಾಗರಾಜು, ಪ್ರೊ.ಕೆ. ಚಂದ್ರಣ್ಣ, ಶ್ರೀತೀರ್ಥ, ಎಚ್.ವಿ. ಸುಗುಣ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಇತರರಿದ್ದರು. ಇದೇ ಸಂದರ್ಭದಲ್ಲಿ ಲಲಿತ ಪ್ರಬಂಧಕ್ಕಾಗಿ ಚಂದ್ರಶೇಖರ ಆಲೂರು, ಕಾವ್ಯಕ್ಕಾಗಿ ಲಲಿತಾ ಸಿದ್ಧಬಸವಯ್ಯನವರಿಗೆ ಸಣ್ಣಗುಡ್ಡಯ್ಯ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಣ್ಣಗುಡ್ಡಯ್ಯ ಅವರ ಬದುಕು-ಬರಹ ಕುರಿತು ಪಿಎಚ್‌ಡಿ ಮಹಾಪ್ರಬಂಧ ರಚಿಸಿರುವ ಡಾ. ವೈ.ಎಂ. ಪದ್ಮಜಾರನ್ನು ಸನ್ಮಾನಿಸಲಾಯಿತು.
ಪಾವಗಡ: ಸ್ಫೋಟಕ ಬಳಸಿ ಗ್ರಾಪಂ ಕಚೇರಿ ಧ್ವಂಸಕ್ಕೆ ಯತ್ನ
ಪ್ರಶಸ್ತಿ ಮೌಲ್ಯ ಹೆಚ್ಚಿದೆ: 1970ರ ದಶಕದಲ್ಲಿ ಮಾರ್ಕ್ಸ್ವಾದದ ಪ್ರಭಾವ ಸಾಹಿತಿಗಳ ಮೇಲೆ ಹೆಚ್ಚಾಯಿತು ಎಂದ ಎಲ್. ಹನುಮಂತಯ್ಯ ಅವರು ಎಚ್.ಜಿ.ಸಣ್ಣಗುಡ್ಡಯ್ಯ ಅವರು ಆಧುನಿಕ ತಲೆಮಾರಿನ ವಿಚಾರವಂತ ಸಾಹಿತಿಗಳ ಸಾಲಿಗೆ ಸೇರುತ್ತಾರೆ. ಸತ್ಯ, ವಾಸ್ತವತೆಯನ್ನು ನಿರ್ಭೀತಿಯಿಂದ ಪ್ರತಿಪಾದಿಸುತ್ತಿದ್ದ ಎಚ್.ಜಿ.ಸಣ್ಣಗುಡ್ಡಯ್ಯ ಅವರ ಪ್ರಶಸ್ತಿ ಇಬ್ಬರು ಸಂವೇದನಶೀಲ ಬರಹಗಾರರಾದ ಲಲಿತಾ ಸಿದ್ದಬಸವಯ್ಯ ಹಾಗೂ ಚಂದ್ರಶೇಖರ್ ಅಲೂರಿಗೆ ಟ್ರಸ್ಟ್ ಕೊಡಮಾಡಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿದೆ ಎಂದು ಬಣ್ಣಿಸಿದರು.