ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ
ಎರಡನೇ ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಮೈಸೂರು : ಎರಡನೇ ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ದೇವಿಯ ದರ್ಶನ ಪಡೆದು ಧನ್ಯತಾ ಭಾವ ತಾಳಿದರು. ಮುಂಜಾನೆ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ಸಾಲು ಗಟ್ಟಿನಿಂತಿದ್ದರು. ಭಕ್ತರು ಜಯಘೋಷ ಕೂಗುತ್ತ ಚಾಮುಂಡೇಶ್ವರಿಯ ದರ್ಶನ ಪಡೆದರು.
ಪ್ರತಿ ವಾರದಂತೆ ಮೊದಲಿಗೆ ದೇವಿಗೆ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಬೆಳಗ್ಗೆ 11ಕ್ಕೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಲಾಯಿತು.
ಇವತ್ತು ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಗುಲಾಬಿ ಬಣ್ಣದ ಸೀರೆಯನ್ನುಟ್ಟು ಸಿಂಹವಾಹಿನಿಯಾಗಿ, ವಿವಿಧ ಹೂವುಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು. ಅಮ್ಮನ ಉತ್ಸವ ಮೂರ್ತಿಗೆ ನೀಲಿ ಬಣ್ಣದ ಸೀರೆಯನ್ನುಡಿಸಲಾಗಿತ್ತು. ದೇವಸ್ಥಾನವನ್ನು ವಿವಿಧ ಬಗೆಯ ಹೂಗಳಿಂದ ಶೃಂಗರಿಸಲಾಗಿತ್ತು.
ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿತ್ತು. ಬಸ್ ಮಾರ್ಗವಲ್ಲದೆ ಮೆಟ್ಟಿಲುಗಳ ಮೂಲಕವು ಅಪಾರ ಸಂಖ್ಯೆಯ ಭಕ್ತರು ಬೆಟ್ಟೆಕ್ಕೆ ಆಗಮಿಸಿದರು.
ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ . 50, 100 ಹಾಗೂ 300 ಟಿಕೆಟ್‌ಗೆ ವಿಶೇಷ ದರ್ಶನದ ಸರತಿ ಸಾಲಿನಲ್ಲೂ ಹೆಚ್ಚು ಮಂದಿ ಕಂಡುಬಂದರು. ಮೊದಲ ವಾರಕ್ಕಿಂತ 2ನೇ ವಾರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಗಣ್ಯರಿಂದ ದೇವರ ದರ್ಶನ
2ನೇ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಶಾಸಕರಾದ ಜಿ.ಟಿ. ದೇವೇಗೌಡ, ಸೂರಜ್ ರೇವಣ್ಣ, ಮಾಜಿ ಸಚಿವ ಎಂಟಿಬಿ ನಾಗರಾಜ್, ನಟರಾದ ಡಾಲಿ ಧನಂಜಯ್, ಧನ್ವೀರ್ ಸೇರಿ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ದರ್ಶನ ಪಡೆದರು.
ಪ್ರಸಾದ ಹಂಚಿಕೆ
ಆಷಾಢ ಶುಕ್ರವಾರದ ಅಂಗವಾಗಿ ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರಿಗೆ ಕಳೆದ ವಾರದಂತೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಳೆದ 12 ವರ್ಷದಿಂದ ಪ್ರತಿ ವರ್ಷ 2ನೇ ಆಷಾಢ ಶುಕ್ರವಾರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿಸುವ ನಂಜನಗೂಡಿನ ಚಾಮುಂಡಿ ಟೌನ್‌ಷಿಪ್ ಹಾಗೂ ಕೊಯಮತ್ತೂರಿನ ದುರ್ಗಾ ಏಜೆನ್ಸಿಯ ಶಾಂತಿ ಮತ್ತು ತಂಬು ದಂಪತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 6.30ರಿಂದ ಆರಂಭವಾದ ಪ್ರಸಾದ ವಿತರಣೆ ಸಂಜೆ 7.30ರವರೆಗೂ ನಡೆಯಿತು.