ಶಾರೀರಿಕ, ಮಾನಸಿಕ ಕಾಯಿಲೆಗಳಿಗೆ ಇದುವೇ ರಾಮಬಾಣ
ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ದೂರಮಾಡಿ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಲು ಯೋಗ ಸಹಕಾರಿಯಾಗಲಿದೆ ಎಂದು ಯೋಗ ಗುರು ಅನಂತ್‌ಜೀ ಹೇಳಿದರು.
ತುಮಕೂರು : ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ದೂರಮಾಡಿ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಲು ಯೋಗ ಸಹಕಾರಿಯಾಗಲಿದೆ ಎಂದು ಯೋಗ ಗುರು ಅನಂತ್‌ಜೀ ಹೇಳಿದರು.
ಯೋಗ ವಿಸ್ಮಯ ಟ್ರಸ್ಟ್ , ತುಮಕೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ 10ರಿಂದ 17ರ ವರೆಗೆ ತುಮಕೂರು ವಿವಿ ಆವರಣದಲ್ಲಿ ನಡೆಯಲಿರುವ ‘ಉಚಿತ ಬೃಹತ್ ಯೋಗ ಶಿಬಿರ’ದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯುರ್ವೇದದಿಂದ ಆರೋಗ್ಯ ಎಂಬಂತೆ ಯಾವುದೇ ಔಷಧಿ, ಮಾತ್ರೆಗಳಿಲ್ಲದೆ ಕೇವಲ ಆಹಾರ ಶೈಲಿ, ಜೀವನ ಶೈಲಿ ಹಾಗೂ ನಿರ್ದಿಷ್ಟ ಯೋಗಾಸನ ಮತ್ತು ಪ್ರಾಣಾಯಾಮ ಮೂಲಕ ಮನೆಯಲ್ಲಿಯೇ ಶೇ.99ರಷ್ಟು ಕಾಯಿಲೆ ಗುಣಪಡಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಯೋಗ ಸಹಕಾರಿಯಾಗಲಿದೆ. 65 ಬಗೆಯ ಆಹಾರ ಪಥ್ಯಗಳನ್ನು ಅನುಸರಿಸಿ, ಆರೋಗ್ಯ ವೃದ್ಧಿಯ ಮಾರ್ಗವನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದರು.
ಹೃದಯ ಸಂಬಂಧಿ ಕಾಯಿಲೆಗಳಿಗೆ, ಬಿಪಿ, ಡಯಾಬಿಟೀಸ್, ಕೊಲೆಸ್ಟ್ರಾಲ್, ಮಲಬದ್ಧತೆ, ಗ್ಯಾಸ್ ಟ್ರಬಲ್, ಥೈರಾಯ್ಡ್, ಇರೆಗ್ಯುಲರ್ ಪಿರಿಯಡ್ಸ್, ಮೆನೋಪಾಸ್ ಡಿಸಾರ್ಡರ್, ಮಾನಸಿಕ ಖಿನ್ನತೆ, ಆಂಗ್ಸೈಟಿ, ಅಧಿಕ ತೂಕ, ಅಸ್ತಮ, ಬ್ರಾಂಕೈಟೀಸ್, ಸೈನಸ್, ಡಸ್ಟ್ಅಲರ್ಜಿ ಮುಂತಾದ ದೀರ್ಘಾವಧಿ ಮತ್ತು ಅಲ್ಪಾವಧಿ ಕಾಯಿಲೆಗಳಿಗೆ ಯೋಗಾಭ್ಯಾಸದಿಂದ ಮುಕ್ತಿ ದೊರೆಯುತ್ತದೆ ಎಂದು ತಿಳಿಸಿದರು.
ತುಮಕೂರಿನ ಜನತೆ ಕೈ ಜೋಡಿಸಿ ಮುಂದಿನ 5 ವರ್ಷದ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡರೆ ತುಮಕೂರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಉತ್ತಮ ಸಮಾಜ ನಿರ್ಮಾಣ ವಿದ್ಯಾರ್ಥಿಗಳಿಂದ ಸಾಧ್ಯ. ಅಂತಹ ಮನಸ್ಥಿತಿಯನ್ನು, ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳ ಮನಸಲ್ಲಿ ಬೆಳೆಸಲು ಯೋಗ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಲು, ಅಂಕಗಳನ್ನೂ ಮೀರಿದ ಆತ್ಮವಿಶ್ವಾಸ ರೂಪಿಸಲು ಯೋಗಾಭ್ಯಾಸ ನಿರಂತರವಾಗಬೇಕು ಎಂದು ತಿಳಿಸಿದರು.
ಯೋಗ ಶಿಬಿರ ಡಿ.10 ರಿಂದ 17 ರ ವರೆಗೆ ಬೆಳಿಗ್ಗೆ 5.30 ರಿಂದ 7.30ರ ವರೆಗೆ ವಿ.ವಿ. ಆವರಣದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ಪತ್ರಕರ್ತ ಎಸ್. ನಾಗಣ್ಣ, ಉದ್ಯಮಿಗಳಾದ ಡಾ.ಆರ್.ಎಲ್. ರಮೇಶ್ ಬಾಬು, ಎಚ್.ಜಿ. ಚಂದ್ರಶೇಖರ್, ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಪದ್ಮನಾಭ ಕೆ.ವಿ. ನಿರೂಪಿಸಿದರು. ಡಾ.ಎ.ಎಂ. ಮಂಜುನಾಥ ವಂದಿಸಿದರು.