ಮಂಗಳೂರು(ಫೆ.26): ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಮನೆಯೊಂದಕ್ಕೆ ಕಳ್ಳನೋರ್ವ ಒಳನುಗ್ಗಿ ಬೀಗದ ಕೀಗಳನ್ನು ಜಾಲಾಡಿಸಿ ಯಜಮಾನನ ಕೈಗೆ ಸಿಕ್ಕಿಬಿದ್ದ ಸ್ವಾರಸ್ಯಕರ ಘಟನೆ ನಡೆ​ದಿದೆ. ಉದ್ಯಮಿ ಸುದರ್ಶನ್‌ ಮನೆಯಲ್ಲಿ ಕಳವು ಯತ್ನ ನಡೆ​ದಿದೆ.

ಸುಮಾರು 24 ಅಡಿ ಎತ್ತರದ ಮನೆಯ ಛಾವಣಿಯನ್ನೇರಿ ಅಲ್ಲಿಂದ ಛಾವಣಿಯ ಹಂಚುಗಳನ್ನು ತೆಗೆದು ನೆಲ ಮಹಡಿಗೆ ಬಂದಾತ ನಡು ಕೋಣೆಯಲ್ಲಿನ ಟಿವಿ ಸ್ಟ್ಯಾಂಡ್‌ ಜಾಲಾಡಿಸಿ ಮನೆಯಲ್ಲಿನ ಬೀಗದ ಕೀಗೊಂಚಲನ್ನು ಪಡೆದಿದ್ದಾನೆ. ಬಳಿಕ ನಡುಕೋಣೆಯಲ್ಲಿದ್ದ ದಿವಾನದಲ್ಲಿ ಕಳ್ಳ ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಆರು ಗಂಟೆ ಸುಮಾರಿಗೆ ಮನೆಯ ಯಜಮಾನನ ಬೆತ್ತದೇಟಿಗೆ ಎಚ್ಚರಗೊಂಡು ಪೊಲೀಸ್‌ ವಶನಾಗಿದ್ದಾನೆ.

ಬಸ್‌ನಲ್ಲೇ ಎದೆನೋವು: ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

ಮಲ​ಗಿ​ದಾ​ತ ಕಳ್ಳ ಎಂದು ದೃಢಪಟ್ಟಬಳಿಕ ಆತನಿಗೆ ಏಟು ನೀಡಿ ಎಬ್ಬಿಸಿದಾಗ ಆತನ ಕೈಯಲ್ಲಿ ಮನೆಯ ಬೀಗದ ಕೀ ಗಳು ಪತ್ತೆಯಾಗಿದೆ. ಮಹಡಿ ಛಾವಣಿಯಿಂದ ಕೆಳಗಿಳಿದ ಕಳ್ಳನಿಗೆ ನಡು ಕೋಣೆಯಿಂದ ಮನೆಯ ಹೊರಗಡೆ ಹೋಗಲು ಬಾಗಿಲಿಗೆ ಹಾಕಲಾದ ಚಿಲಕ ಸರಿಸಿದರೆ ಸಾಕಿತ್ತು.

ಸುಲಲಿತವಾಗಿ ಮನೆಯಿಂದ ಹೊರಗೆ ಹೋಗಬಹುದಾಗಿತ್ತು. ಸುಲಭ ಅವಕಾಶಗಳಿದ್ದಾಗಲೂ ಅದನ್ನು ಮಾಡದೆ ಆತ ನಿದ್ರಿಸಿ​ರು​ವುದು ವಿಸ್ಮಯ ಮೂಡಿಸಿದೆ. ದೈವಿ ಶಕ್ತಿಯ ಪ್ರಭಾವದಿಂದ ಇದು ನಡೆದಿದೆ ಎಂದು ಮಾಲೀ​ಕರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಸುದರ್ಶನ್‌ ಅವರ ದೈವದ ಗುಡಿಯೊಳಕ್ಕೂ ಬೇರೊಬ್ಬ ಕಳ್ಳ ನುಗ್ಗಿದ್ದ. ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೆ ಅಲ್ಲೇ ಸುತ್ತುತ್ತಾ ಪೊಲೀಸರ ವಶನಾದ ಪ್ರಕರಣ ನಡೆದಿತ್ತು.