ಗುಂಡ್ಲುಪೇಟೆಯ ಬಂಡೀಪುರ ಅರಣ್ಯದಲ್ಲಿ ಥರ್ಮಲ್ ಡ್ರೋನ್ ಬಳಸಿ ಅಕ್ರಮ ಬೇಟೆಗಾರನನ್ನು ನಾಡ ಬಂದೂಕು ಸಮೇತ ಬಂಧಿಸಲಾಗಿದೆ. ಎಸ್‌ಟಿಪಿಎಫ್ ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆಯು ಯಶಸ್ವಿಯಾದರೂ, ಬಂಧಿತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಪ್ರತಿಭಟನೆಗೆ ಕಾರಣವಾಗಿದೆ.
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ಭೀಮನಬೀಡು ಸಮೀಪದ ರಾಜ್ಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಗೆ ತೆರಳುತ್ತಿದ್ದವನನ್ನು ಎಸ್‌ಟಿಪಿಎಫ್ (Special Tiger Protection Force) ಸಿಬ್ಬಂದಿ ಥರ್ಮಲ್ ಡ್ರೋನ್ ಸಹಾಯದಿಂದ ಪತ್ತೆಹಚ್ಚಿ ಬಂಧಿಸಿರುವ ಘಟನೆ ನಡೆದಿದೆ. ಈ ಪ್ರಕರಣದ ಸಂಬಂಧ ಮದ್ದಯ್ಯನಹುಂಡಿ ಗ್ರಾಮದ ನಾಗೇಶ್ ಎಂಬಾತನನ್ನು ಸೋಮವಾರ ರಾತ್ರಿ ನಾಡ ಬಂದೂಕು ಸಮೇತ ವಶಕ್ಕೆ ಪಡೆಯಲಾಗಿದೆ.
ಡ್ರೋನ್ ಮೂಲಕ ಪತ್ತೆ, ಮನೆಗೂ ಹೋದ ತಂಡ
ಅರಣ್ಯ ಪ್ರದೇಶದಲ್ಲಿ ಅಕ್ರಮ ಬೇಟೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಎಸ್‌ಟಿಪಿಎಫ್ ಸಿಬ್ಬಂದಿ ಮುಂಚಿತವಾಗಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಥರ್ಮಲ್ ಡ್ರೋನ್ ಹಾರಿಸಿ ಅರಣ್ಯ ಪ್ರದೇಶವನ್ನು ನಿಗಾವಹಿಸಿಸುತ್ತಿದ್ದಾಗ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಅತಿಕ್ರಮವಾಗಿ ಅರಣ್ಯ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ.
ಗ್ರಾಮದ ನಾಗೇಶ್ ಹಾಗೂ ಮತ್ತೋರ್ವ ಭೀಮನಬೀಡು ಪ್ಲಾಂಟೇಶನ್ ಬಳಿ ಅತಿಕ್ರಮ ಪ್ರವೇಶಿಸಿದ್ದು, ಡ್ರೋನ್ ಮೂಲಕ ಅವರನ್ನು ಹಿಂಬಾಲಿಸಿದ ಸಿಬ್ಬಂದಿಗೆ, ಅವರಲ್ಲಿ ಒಬ್ಬನಾದ ನಾಗೇಶ್ ತನ್ನ ಗ್ರಾಮವಾದ ಮದ್ದಯ್ಯನಹುಂಡಿಯಲ್ಲಿರುವ ಮನೆಗೆ ಹೋಗಿರುವುದು ಪತ್ತೆಯಾಯಿತು. ಬಳಿಕ ಸಿಬ್ಬಂದಿ ಆತನ ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಲೋಡ್ ಮಾಡಿರುವ ನಾಡ ಬಂದೂಕು ಪತ್ತೆಯಾಗಿ, ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ಮುಂದುವರಿಕೆ
ಬಂಧಿತ ನಾಗೇಶ್‌ನನ್ನು ವಿಚಾರಣೆಗಾಗಿ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಕಚೇರಿಗೆ ಕರೆತರಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿ ಶಿವಕುಮಾರ್ ಅವರು ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ, ಥರ್ಮಲ್ ಡ್ರೋನ್ ಮೂಲಕ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ನಂತರ ಮನೆಗೆ ತೆರಳಿ ನಾಡ ಬಂದೂಕು ವಶಪಡಿಸಿಕೊಂಡಿದ್ದೇವೆ ಎಂದು ವಿವರಿಸಿದರು.
ಬಂಧಿತನ ಮೇಲೆ ಹಲ್ಲೆ ಆರೋಪ: ಕಚೇರಿ ಆವರಣದಲ್ಲಿ ಪ್ರತಿಭಟನೆ
ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಬಂಧಿತ ನಾಗೇಶ್ ಮೇಲೆ ಅರಣ್ಯ ಸಿಬ್ಬಂದಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಗುಂಡ್ಲುಪೇಟೆಯ ಎಸಿಎಫ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಗಳ ಮುಖಂಡ ಸುಭಾಷ್ ಮಾಡ್ರಹಳ್ಳಿ ಮಾತನಾಡಿ, “ತನಿಖೆ ಪೂರ್ಣಗೊಳ್ಳುವ ಮೊದಲು ಯಾರನ್ನೂ ತಪ್ಪಿತಸ್ಥ ಎಂದು ಗುರುತಿಸಬಾರದು. ಆದರೆ ಆರೋಪಿಯನ್ನು ಹಲ್ಲೆ ಮಾಡಿರುವುದು ಖಂಡನೀಯ. ತಕ್ಷಣವೇ ಸಂಬಂಧಿತ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಾಹಿತಿ ಮದ್ದಯ್ಯನಹುಂಡಿ ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಥರ್ಮಲ್ ಡ್ರೋನ್ ತಂತ್ರಜ್ಞಾನದ ಮೂಲಕ ಅಕ್ರಮ ಬೇಟೆಗಾರನನ್ನು ಪತ್ತೆಹಚ್ಚಿ ಬಂಧಿಸಿದ ಅರಣ್ಯ ಇಲಾಖೆ ಕ್ರಮ ಗಮನಾರ್ಹವಾದರೂ, ಬಂಧಿತನ ಮೇಲೆ ಹಲ್ಲೆ ಆರೋಪಗಳು ಹೊಸ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.


