ರೋಣ(ಮೇ.20): ಕೊರೋನಾ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್‌ ನಿಯಮದಿಂದ ಕಳೆದ 55 ದಿನಗಳಿಂದ ರಸ್ತೆಗಿಳಿಯದ ಸಾರಿಗೆ ಬಸ್‌ಗಳು, ಲಾಕ್‌ಡೌನ್‌ ಸಡಿಲಿಕೆಯಿಂದ ಮಂಗಳವಾರ ರಸ್ತೆಗಳಿದಿದ್ದು, ಪ್ರಯಾಣಿಕರಿಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್‌ ವ್ಯವಸ್ಥೆ, ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿತ್ತು. ಆದರೆ, ರೋಣ ಘಟಕದಿಂದ ರಸ್ತೆಗಿಳಿದ ಯಾವುದೊಂದು ಸಾರಿಗೆ ಬಸ್‌ಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಬಸ್‌ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಭಯದಲ್ಲಿ ಸಂಚರಿಸುವಂತಾಯಿತು.

ರೋಣ ಘಟಕದಿಂದ ನರಗುಂದ, ಗುಡೂರ, ಗಜೇಂದ್ರಗಡ, ನವಲಗುಂದ, ಗದಗ, ಬಾದಾಮಿ, ಕೊಣ್ಣೂರ, ಹೊಳೆಆಲೂರ ಭಾಗಗಳಿಗೆ ಸಂಚರಿಸಲು ಒಟ್ಟು 28 ಬಸ್‌ ಗಳನ್ನು ರಸ್ತೆಗಿಳಿಸಲಾಗಿತ್ತು. ಆದರೆ, ಯಾವದೇ ಬಸ್‌ ನಲ್ಲಿ ಪ್ರವೇಶಿಸುವ ಪ್ರಯಾಣಿಕರಿಗೆ ಸಾರಿಗೆ ಇಲಾಖೆಯಿಂದ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಿರುವದಿಲ್ಲ. ಇದರಿಂದ ಬಸ್‌ ನಲ್ಲಿ ಸಂಚರಿಸುವ ಪ್ರಯಾಣಿಕರು ಭಯದಲ್ಲಿ ಸಂಚರಿಸುವ ಪರಸ್ಥಿತಿ ನಿರ್ಮಾಣವಾಗಿತ್ತು.

ಸಾರಿಗೆ ಸಂಚಾರ ಆರಂಭ: ಜನರಿಲ್ಲದೆ ಬಣಗುಡುತ್ತಿರುವ ಬಸ್‌

ಈ ಕುರಿತು ರೋಣ ಘಟಕ ವ್ಯವಸ್ಥಾಪಕ ವಿಜಯ ಕಾಗವಾಡೆ ಅವರನ್ನು ಸಂಪರ್ಕಿಸಿದ್ದಲ್ಲಿ, ರೋಣ ಬಸ್‌ ನಿಲ್ದಾಣದಲ್ಲಿ ಪ್ರಯಾಣಕರಿಗೆ ಕೈ ತೊಳೆದುಕೊಳ್ಳಲು ಸೋಪ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಲ್ದಾಣದಲ್ಲಿಯೇ ಪ್ರಯಾಣಕರು ಕೈ ತೊಳೆದುಕೊಂಡು ಬಸ್‌ ಪ್ರವೇಶಿಸಬೇಕು. ಜೊತೆಗೆ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್‌ ಮೂಲಕ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎನ್ನುತ್ತಾರಂತೆ. ಆದರೆ, ಕೇಂದ್ರ ನಿಲ್ದಾಣದಿಂದ ಹೊರಟ ಬಸ್‌ ಬೇರೊಂದು ಗ್ರಾಮದ ನಿಲ್ದಾಣದಿಂದ ಬಸ್‌ ಏರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್‌ ತಪಾಸಣೆ, ಕೈ ಸ್ವಚ್ಛಗೊಳಿಸಲು ವ್ಯವಸ್ಥೆ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಇಲ್ಲ. ಬಸ್‌ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಾಟಾಚಾರಕ್ಕೆ ಎಂಬಂತೆ ಘಟಕ ವ್ಯವಸ್ಥಾಪಕರು ವ್ಯವಸ್ಥೆ ಕಲ್ಪಿಸಿದ್ದು ಎಷ್ಟರ ಮಟ್ಟಿಗೆ ಸರಿ ? ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಬಸ್‌ ನಲ್ಲಿಯೇ ಸ್ಯಾನಿಟೈಸರ್‌ ಮತ್ತು ಆರೋಗ್ಯ ತಪಾಸಣೆ ಸ್ಕ್ರೀನಿಂಗ್‌ ಯಂತ್ರ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಮೂಲಕ ಪ್ರತಿ ಬಸ್‌ ನಲ್ಲಿ ನಿರ್ವಾಹಕರಿಗೆ ಸ್ಕ್ರೀನಿಂಗ್‌ ಯಂತ್ರ ಮತ್ರು ಸ್ಯಾನಿಟೈಸರ್‌ ನೀಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ಈ ಬಗ್ಗೆ ರೋಣ ಸಾರಿಗೆ ಘಟಕದ ವ್ಯವಸ್ಥಾಪಕ ವಿಜಯ ಕಾಗವಾಡ, ರೋಣ ಘಟಕದಿಂದ ಒಟ್ಟು 26 ಬಸ್‌ ಗಳನ್ನು ಬಿಡಲಾಗಿದೆ. ಚಾಲಕ ಮತ್ತು ನಿರ್ವಾಹಕರಿಗೆ ಮಾಸ್ಕ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸ್ಯಾನಿಟೈಸರ್‌ ಬಾರದಿದ್ದರಿಂದ ಮಂಗಳವಾರ ಸಮಸ್ಯೆಯಾಗಿದೆ. ಬುಧವಾರದಿಂದ ಪ್ರತಿಯೊಂದು ಬಸ್‌ ನಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಒದಗಿಸಲಾಗುವುದು. ನಿರ್ವಾಹಕರ ಬಳಿ ಸ್ಯಾನಿಟೈಸರ್‌ ನೀಡಿ, ಬಸ್‌ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಲಾಗುವದು ಎಂದು ತಿಳಿಸಿದ್ದಾರೆ.