ಲಕ್ಷ್ಮೇಶ್ವರ(ಮೇ.20): ಕಳೆದ 55 ದಿನಗಳಿಂದ ಯಾವುದೇ ಬಸ್‌ ಸಂಚಾರವಿಲ್ಲದೆ ಬಣಗುಡುತ್ತಿದ್ದ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ಆರಂಭವಾಗಿ ನಿರ್ಜೀವವಾಗಿದ್ದ ನಿಲ್ದಾಣಕ್ಕೆ ಜೀವ ಕಳೆ ಬಂದಿತು.

ರಾಜ್ಯ ಸರ್ಕಾರದ ಆದೇಶದಂತೆ ಬಸ್‌ ಸಂಚಾರಕ್ಕೆ ಶರತ್ತು ಬದ್ಧ ಅನುಮತಿ ನೀಡಲಾಗಿದ್ದರಿಂದ ಮಂಗಳವಾರ ಬೆಳಗ್ಗೆ ಬಸ್‌ ನಿಲ್ದಾಣಂದಲ್ಲಿ ಬಸ್‌ಗಳಿಗೆ ಪೂಜೆ ಸಲ್ಲಿಸಿ ಹೂ ಮಾಲೆ ಹಾಕಿ, ಸಿಹಿ ಹಂಚಿ ಸಂಚಾರಕ್ಕೆ ಮುಕ್ತಗೊಳಿಸಿದ ದೃಶ್ಯ ಕಂಡು ಬಂದಿತು.

ಬಸ್‌ ಸ್ಟ್ಯಾಂಡ್‌ನೊಳಗೆ ಆಗಮಿಸುವ ವ್ಯಕ್ತಿಗಳ ದೇಹದ ಉಷ್ಣಾಂಶ ತಪಾಸಣೆ ಮಾಡಿದ ನಂತರ ಸ್ಯಾನಿಟೈಜರ್‌ ಹಾಕುವುದು ಮತ್ತು ಮಾಸ್ಕ್‌ ಧರಿಸುವ ಬಗ್ಗೆ ಗಮನ ಕೊಡಲಾಗಿತ್ತು. ಅಲ್ಲದೆ ಬಸ್‌ನಲ್ಲಿ ಸಂಚಾರ ಮಾಡುವ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಪ್ರಯಾಣಿಸುವ ಸ್ಥಳ, ವಯಸ್ಸು ಮತ್ತು ಮೊಬಾಯಿಲ್‌ ನಂಬರ್‌ ಬರೆದುಕೊಂಡು ಸಂಚಾರಕ್ಕೆ ಅನುಮತಿ ನೀಡುತ್ತಿದ್ದ ದೃಶ್ಯ ಕಂಡು ಬಂದಿತು.

ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಸಂಬಳವಿಲ್ಲದೆ ನರ್ಸ್‌ಗಳ ಪರದಾಟ..!

ಈ ಸಂದರ್ಭದಲ್ಲಿ ರೈತಪರ ಹೋರಾಟಗಾರ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಕೊರೋನಾ ತೊಲಗಲಿ ದೇಶ ಉಳಿಯಲಿ ಎಂಬ ಘೋಷಣೆ ಕೂಗಿ ಬಸ್‌ಗಳ ಚಾಲಕರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.
ಪಟ್ಟಣದಿಂದ ಹುಬ್ಬಳ್ಳಿ, ಗದಗ ಮತ್ತು ಹಾವೇರಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕೇವಲ 2-3 ಬಸ್‌ಗಳು ಹುಬ್ಬಳ್ಳಿ, ಗದಗ ಮತ್ತು ಹಾವೇರಿ ಕಡೆಗೆ ಮಾತ್ರ ಸಂಚಾರ ಮಾಡಿದವು. ಮಧ್ಯಾಹ್ನದ ವೇಳೆಗೆ ಜನರು ಬಸ್‌ಗಳತ್ತ ಮುಖ ಮಾಡದಿರುವುದು ಕಂಡು ಬಂದಿತು. ಕೊರೋನಾ ಸೋಂಕಿನ ಭಯದಿಂದ ಜನರು ಬಸ್‌ಗಳ ಸಂಚಾರಕ್ಕೆ ಅಷ್ಟಾಗಿ ಒಲವು ತೋರದೆ ಮನೆಯಲ್ಲಿ ಉಳಿದುಕೊಂಡರು. ಬಸ್‌ ನಿಲ್ದಾಣದಲ್ಲಿ ಬಸ್‌ಗಳು ನಿಂತಿದ್ದರೂ ಜನರು ಮಾತ್ರ ಅತ್ತ ಸುಳಿಯದೇ ಇದ್ದುದರಿಂದ ಸಂಚಾರ ವಿರಳವಾಗಿತ್ತು.

ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಘಟಕದ ವ್ಯವಸ್ಥಾಪಕ ಶೇಖರ ನಾಯ್ಕ, ಡಾ. ಗಿರೀಶ್‌ ಮರೆಡ್ಡಿ, ಬಾಬಣ್ಣ ವಡಕಣ್ಣವರ, ಅಂಗಡಿ, ದಂಡೀನ, ಶಿವಾನಂದ ಲಿಂಗಶೆಟ್ಟಿ ಇದ್ದರು.