ಚಿಲುಮೆ ಕೇಸ್‌ನಲ್ಲಿ ಮಾಜಿ ಡೀಸಿಗೆ ಇಲ್ಲ ಬೇಲ್‌: ಬಂಧನ ಭೀತಿ ಶುರು

‘ಚಿಲುಮೆ’ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಮತ್ತು ಸಂಸ್ಥೆಯ ಸಿಬ್ಬಂದಿಯಾದ ಜ್ಯೋತಿಲಕ್ಷ್ಮಿ ಮತ್ತು ಕೆಂಪೇಗೌಡ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಗರದ 66ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ. 

There is no bail for former DC in Chilume case gvd

ಬೆಂಗಳೂರು (ಡಿ.09): ‘ಚಿಲುಮೆ’ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಮತ್ತು ಸಂಸ್ಥೆಯ ಸಿಬ್ಬಂದಿಯಾದ ಜ್ಯೋತಿಲಕ್ಷ್ಮಿ ಮತ್ತು ಕೆಂಪೇಗೌಡ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಗರದ 66ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ. ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಈ ಮೂವರು ಸಲ್ಲಿಸಿದ್ದ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ಸಿ.ಆರ್‌.ಹೇಮಂತ್‌ ಕುಮಾರ್‌ ಅವರ ಪೀಠ ಆದೇಶಿಸಿದೆ. 

ಇದರೊಂದಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಅವರಿಗೆ ಅವರಿಗೆ ಬಂಧನ ಭೀತಿ ಹೆಚ್ಚಾಗಿದೆ. ಪ್ರಕರಣ ಸಂಬಂಧ ವಿವರಣೆ ನೀಡಲು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳೆದ ವಾರ ಜಿಲ್ಲಾಧಿಕಾರಿ ಕೆ.ಶ್ರಿನಿವಾಸ್‌ ಅವರಿಗೆ ಹಲಸೂರು ಗೇಟ್‌ ಠಾಣಾಧಿಕಾರಿ ನೋಟಿಸ್‌ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗದ ಶ್ರಿನಿವಾಸ್‌ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಡಿ.2ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ವಿಚಾರಣೆ ಪೂಣಗೊಳಿಸಿ ಡಿ.7ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಗುರುವಾರ ಪ್ರಕಟಿಸಿದೆ.

Bengaluru: ಚಿಲುಮೆ ಕೇಸಲ್ಲಿ ಅಮಾನತು ಪ್ರಶ್ನಿಸಿ ಹೈಕೋರ್ಟ್‌ಗೆ ಮಾಜಿ ಡೀಸಿ ಅರ್ಜಿ

ಅಮಾನತು ತಡೆಗೆ ಹೈಕೋರ್ಟ್‌ ನಕಾರ: ಇದೇ ವೇಳೆ ಪ್ರಕರಣ ಸಂಬಂಧ ಕೆ.ಶ್ರೀನಿವಾಸ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ಗುರುವಾರವೂ ನಿರಾಕರಿಸಿದೆ. ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಕೆ. ಶ್ರೀನಿವಾಸ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರ ಅಮಾನತು ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. 

ಬಳಿಕ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚಿಸಿ, ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು. ಇದೇ ಪ್ರಕರಣದಲ್ಲಿ ಅಮಾನತುಗೊಂಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್‌. ರಂಗಪ್ಪ ಸಹ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಮಾನತು ಆದೇಶ ರದ್ದತಿಗೆ ಕೋರಿರುವ ರಂಗಪ್ಪ ಅವರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಶುಕ್ರವಾರಕ್ಕೆ ಮುಂದೂಡಿದೆ.

ಚಿಲುಮೆ ಕೇಸಲ್ಲಿ ನನ್ನ ತಪ್ಪಿಲ್ಲ: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ ಮೇರೆಗೆ ಚುನಾವಣಾ ಪ್ರಕ್ರಿಯೆ ನಡೆಸಿದ್ದೇನೆ. ನಿಯಮಾನುಸಾರ ಆರ್‌ಓ ಹಾಗೂ ಚಿಲುಮೆ ಸಂಸ್ಥೆಗೆ ಕೆಲಸ ಹಂಚಿಕೆ ಮಾಡಿದ್ದು, ನಾನೇನು ತಪ್ಪು ಮಾಡಿಲ್ಲ ಎಂದು ತನಿಖಾಧಿಕಾರಿ ಮುಂದೆ ಐಎಎಸ್‌ ಅಧಿಕಾರಿ ರಂಗಪ್ಪ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಕಳವು ಪ್ರಕರಣ ಸಂಬಂಧ ನೋಟಿಸ್‌ ಹಿನ್ನಲೆಯಲ್ಲಿ ಎರಡನೇ ಬಾರಿಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಬುಧವಾರ ರಂಗಪ್ಪ ಹೇಳಿಕೆ ದಾಖಲಿಸಿದ್ದಾರೆ. ಬೆಳಗ್ಗೆ ವಿಚಾರಣೆಗೆ ಆಗಮಿಸಿದ್ದ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿ ಹಲಸೂರು ಗೇಟ್‌ ಠಾಣೆ ಪೊಲೀಸರು ಹೇಳಿಕೆ ಪಡೆದಿದ್ದಾರೆ. 

ತಮ್ಮ ಹೇಳಿಕೆಗೆ ಪೂರಕವಾಗಿ ಕೆಲವು ದಾಖಲೆಗಳನ್ನು ಪೊಲೀಸರಿಗೆ ರಂಗಪ್ಪ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ‘ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಹುದ್ದೆಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೆ. ನನ್ನದು ಮುಖ್ಯ ಆಯುಕ್ತರ ಸೂಚನೆ ಪಾಲಿಸುವುದು ಕರ್ತವ್ಯವಾಗಿತ್ತು. ಅವರ ನಿರ್ದೇಶನದಂತೆ ಚುನಾವಣಾ ಕಾರ್ಯಗಳನ್ನು ನೆರೆವೇರಿಸಿದ್ದೇನೆ. ಮತದಾರರ ಜಾಗೃತಿ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಸಹ ಮೇಲಿನ ಅಧಿಕಾರಿಗಳ ಸಲಹೆ ಮೇರೆಗೆ ಕಾರ್ಯನಿರ್ವಹಿಸಿದ್ದೇನೆ. ಅಂತೆಯೇ ಮತದಾರರ ನೊಂದಣಾಧಿಕಾರಿಗಳು (ಆರ್‌ಓ) ಹಾಗೂ ಚಿಲುಮೆ ಸಂಸ್ಥೆಗೆ ಕೆಲಸ ಹಂಚಿಕೆ ಮಾಡಿದ್ದೆ’ ಎಂದು ರಂಗಪ್ಪ ಹೇಳಿದ್ದಾರೆ ಎನ್ನಲಾಗಿದೆ. 

Voters Data Theft Case: ಚಿಲುಮೆ: ನಾಲ್ವರು ಆರ್‌ಒಗಳ ಬಂಧನ

‘ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಆಡಳಿತಾತ್ಮಕವಾಗಿ ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಹಿರಿಯ ಅಧಿಕಾರಿಗಳ ಅಭಿಪ್ರಾಯ ಸಹ ಇದೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಚಿಲುಮೆ ಸಂಸ್ಥೆಯ ಅಕ್ರಮದ ಬಗ್ಗೆ ತಿಳಿದ ಕೂಡಲೇ ನಾನು ಹಲಸೂರು ಗೇಟ್‌ ಠಾಣೆಗೆ ಸ್ವಯಂ ದೂರು ದಾಖಲಿಸಿದ್ದೇನೆ. ಇದಕ್ಕೆ ಅಗತ್ಯವಾದ ದಾಖಲೆಗಳನ್ನು ಕೂಡಾ ಸಲ್ಲಿಸಿದ್ದೇನೆ’ ಎಂದು ರಂಗಪ್ಪ ಅಲವತ್ತುಕೊಂಡಿರುವುದಾಗಿ ತಿಳಿದು ಬಂದಿದೆ. ಇದೇ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದ ಮೇರೆಗೆ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಹುದ್ದೆಯಲ್ಲಿದ್ದ ರಂಗಪ್ಪ ಅವರನ್ನು ಸರ್ಕಾರ ಅಮಾನತುಗೊಳಿಸಲಾಗಿದ್ದು, ಎರಡು ಬಾರಿಗೆ ಅವರು ಪೊಲೀಸರ ವಿಚಾರಣೆ ಎದುರಿಸಿದ್ದಾರೆ.

Latest Videos
Follow Us:
Download App:
  • android
  • ios