Bengaluru: ಚಿಲುಮೆ ಕೇಸಲ್ಲಿ ಅಮಾನತು ಪ್ರಶ್ನಿಸಿ ಹೈಕೋರ್ಟ್‌ಗೆ ಮಾಜಿ ಡೀಸಿ ಅರ್ಜಿ
‘ಚಿಲುಮೆ’ ಸಂಸ್ಥೆಯಿಂದ ನಡೆದಿರುವ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಸಂಬಂಧ ತಮ್ಮನ್ನು ಸೇವೆಯಿಂದ ಅಮಾನತುಗೊಳಿಸಿದ ಸರ್ಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರು ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು (ಡಿ.07): ‘ಚಿಲುಮೆ’ ಸಂಸ್ಥೆಯಿಂದ ನಡೆದಿರುವ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಸಂಬಂಧ ತಮ್ಮನ್ನು ಸೇವೆಯಿಂದ ಅಮಾನತುಗೊಳಿಸಿದ ಸರ್ಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರು ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕೆ. ಶ್ರೀನಿವಾಸ್ ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಸದ್ಯ ಪ್ರಕರಣ ಸಂಬಂಧ ಮುಂದುವರೆಯದಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ (ಡಿ.7) ಮುಂದೂಡಿದೆ.
Voters Data Theft Case: ಚಿಲುಮೆ: ನಾಲ್ವರು ಆರ್‌ಒಗಳ ಬಂಧನ
ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ನಗರದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಪರಿಷ್ಕರಣೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕುರಿತು ಅರಿವು ಮೂಡಿಸುವುದು, ಮತದಾರರ ದತ್ತಾಂಶ ಪರಿಶೀಲಿಸುವುದು ಸೇರಿದಂತೆ ವಿವಿಧ ಚಟುವಟಿಕೆ ನಡೆಸಲು ಚಿಲುಮೆ ಶೈಕ್ಷಣಿಕ ಮತ್ತು ಸಾಂಸ್ಕೃತಿ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ಗೆ ಅನುಮತಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತರು 2022ರ ಆ.20ರಂದು ಆದೇಶಿಸಿದ್ದರು. ಆದರೆ, ಅರಿವು ಮೂಡಿಸುವ ಸೋಗಿನಲ್ಲಿ ಮತದಾರರ ದತ್ತಾಂಶ ಸಂಗ್ರಹಿಸವ ಮೂಲಕ ಅಕ್ರಮ ಎಸಗಿದ ಆರೋಪದ ಮೇಲೆ ಚಿಲುಮೆಗೆ ನೀಡಿದ ಅನುಮತಿಯನ್ನು 2022ರ ನ.2ರಂದು ರದ್ದುಪಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ
ಆದರೆ, ಕೇಂದ್ರ ಚುನಾವಣಾ ಆಯೋಗವು 2022ರ ನ.25ರಂದು ಬರೆದ ಪತ್ರ ಆಧರಿಸಿ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ 2022ರ ನ.26ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದೇಶ ಹೊರಡಿಸುವ ಮುನ್ನ ಸರ್ಕಾರ ಸರಿಯಾಗಿ ವಿವೇಚನೆ ಬಳಸಿಲ್ಲ. ಲಭ್ಯವಿರುವ ದಾಖಲೆ ಪರಿಶೀಲಿಸಿಲ್ಲ. ತಮಗೆ ಅವಕಾಶ ನೀಡಿ ಯಾವುದೇ ವಿವರಣೆ ಪಡೆದಿಲ್ಲ. ತಮ್ಮ ವಿರುದ್ಧದ ಆರೋಪಗಳು ದುರ್ನಡತೆಗೆ ಸಂಬಂಧಿಸಿದ ಆರೋಪವಲ್ಲ ಎಂಬುದನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಮಾನತು ಆದೇಶಕ್ಕೆ ತಡೆ ನೀಡಲು ಡಿ.1ರಂದು ನ್ಯಾಯಾಧೀಕರಣ ನಿರಾಕರಿಸಿದೆ. ಆದ್ದರಿಂದ ಸರ್ಕಾರದ ಆದೇಶದ ಅನ್ವಯ ಮುಂದಿನ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.