Voters Data Theft Case: ಚಿಲುಮೆ: ನಾಲ್ವರು ಆರ್‌ಒಗಳ ಬಂಧನ

ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು ಚಿಲುಮೆ ಸಂಸ್ಥೆಗೆ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಓ) ಗುರುತಿನ ಚೀಟಿ ನೀಡಿದ ಆರೋಪದಡಿ ನಾಲ್ವರು ಮತದಾರರ ನೋಂದಣಾಧಿಕಾರಿ(ಆರ್‌ಓ)ಗಳನ್ನು ಶನಿವಾರ ಬಂಧಿಸಿದ್ದಾರೆ.

Four ROs Arrested for Voters Data Theft Case At Bengaluru gvd

ಬೆಂಗಳೂರು (ನ.27): ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು ಚಿಲುಮೆ ಸಂಸ್ಥೆಗೆ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಓ) ಗುರುತಿನ ಚೀಟಿ ನೀಡಿದ ಆರೋಪದಡಿ ನಾಲ್ವರು ಮತದಾರರ ನೋಂದಣಾಧಿಕಾರಿ(ಆರ್‌ಓ)ಗಳನ್ನು ಶನಿವಾರ ಬಂಧಿಸಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್‌ಓ ವಿ.ಬಿ.ಭೀಮಾಶಂಕರ, ಶಿವಾಜಿನಗರ ಕ್ಷೇತ್ರದ ಆರ್‌ಓ ಸುಹೇಲ್‌ ಅಹಮದ್‌, ಮಹದೇವಪುರ ಕ್ಷೇತ್ರದ ಆರ್‌ಓ ಚಂದ್ರಶೇಖರ್‌ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಆರ್‌ಓ ಮಹೇಶ್‌ ಬಂಧಿತರು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಾಲ್ವರು ಆರ್‌ಓಗಳಿಗೂ ನೋಟಿಸ್‌ ನೀಡಲಾಗಿತ್ತು. ಅದರಂತೆ ವಿಚಾರಣೆ ವೇಳೆ ನಾಲ್ವರು ಅಧಿಕಾರಿಗಳು ಚಿಲುಮೆ ಸಂಸ್ಥೆಗೆ ನಿಯಮಬಾಹಿರವಾಗಿ ಬಿಎಲ್‌ಓ ಗುರುತಿನ ಚೀಟಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ

ಬಿಬಿಎಂಪಿ ಕಂದಾಯ ಅಧಿಕಾರಿಗಳೂ ಆಗಿರುವ ಈ ನಾಲ್ವರು ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿದ್ದರು. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿಯಿಂದ ಷರತ್ತುಬದ್ಧ ಅನುಮತಿ ಪಡೆದಿದ್ದ ಚಿಲುಮೆ ಸಂಸ್ಥೆಗೆ ಈ ನಾಲ್ವರು ಅಧಿಕಾರಿಗಳು ಮುನ್ನೂರಕ್ಕೂ ಅಧಿಕ ಬಿಎಲ್‌ಓ ಗುರುತಿನ ಚೀಟಿಗಳನ್ನು ನೀಡಿದ್ದರು.

ಅಷ್ಟೇ ಅಲ್ಲದೆ, ಈ ನಾಲ್ವರು ಅಧಿಕಾರಿಗಳು ಸಾಕಷ್ಟು ಖಾಲಿ ಗುರುತಿನ ಚೀಟಿಗೂ ಸೀಲು ಮತ್ತು ಸಹಿ ಹಾಕಿ ನೀಡಿದ್ದರು. ಈ ಗುರುತಿನ ಚೀಟಿಗಳನ್ನು ದುರ್ಬಳಕೆ ಮಾಡಿಕೊಂಡು ಚಿಲುಮೆ ಸಂಸ್ಥೆಯ ಸಿಬ್ಬಂದಿ ಮತಕ್ಷೇತ್ರಗಳಲ್ಲಿ ಮತದಾರರ ಮನೆ ಮನೆಗೆ ತೆರಳಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ. ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗೆ ಬಿಎಲ್‌ಓ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ. ಆದರೂ ಈ ನಾಲ್ವರು ಆರ್‌ಓಗಳು ಚಿಲುಮೆ ಸಂಸ್ಥೆಗೆ ಬಿಎಲ್‌ಓ ಗುರುತಿನ ಚೀಟಿ ನೀಡಿದ್ದರು ಎನ್ನಲಾಗಿದೆ.

ಸಿಎಂ ಬೊಮ್ಮಾಯಿಗೆ ಧಮ್‌ ಇದ್ದರೆ ತನಿಖೆ ನಡೆಸಲಿ: ಡಿ.ಕೆ.ಶಿವಕುಮಾರ್‌

ಕಿಂಗ್‌ಪಿನ್‌ ಆಪ್ತನ ವಿಚಾರಣೆ: ಪ್ರಕರಣದ ಕಿಂಗ್‌ಪಿನ್‌ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ನ ಆಪ್ತ ಶಿವಕುಮಾರ್‌ ಎಂಬಾತನನ್ನು ಶನಿವಾರ ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಚಿಲುಮೆ ಸಂಸ್ಥೆಯ ಪರವಾಗಿ ಬಿಬಿಎಂಪಿ ಕಚೇರಿಗಳಿಗೆ ಓಡಾಡಿಕೊಂಡು ಗುರುತಿನ ಚೀಟಿ ಸಂಗ್ರಹಿಸಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಕುಮಾರ್‌ನನ್ನು ವಶಕ್ಕೆ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios