ಶೂನ್ಯಪೀಠ ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರು ಯಾಕಾಗಬಾರದು? - ಬಿ.ಕಾಂತರಾಜ್
- ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರಾಗಲಿ ಬಿ.ಕಾಂತರಾಜ್ ಒತ್ತಾಯ.
- ಲಿಂಗಾಯತ ಸಮುದಾಯ ಬಾಂಧವರ ಸಭೆಗೆ ಠಕ್ಕರ್ ಕೊಟ್ಟ ಹಿಂದುಗಳಿದ ವರ್ಗದ ನಾಯಕರು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.1) : ಐತಿಹಾಸಿಕ ಪರಂಪರೆ ಹೊಂದಿರುವ ಮುರುಘಾಮಠ ಶೂನ್ಯಪೀಠ ಆಗಿರುವುದರಿಂದ ಇಲ್ಲಿ ಕೇವಲ ಒಂದು ಕೋಮಿನ ಜನರು ಏಕೆ ಪೀಠಾಧಿಪತಿಗಳಾಗಬೇಕು ? ಅನ್ಯ ಧರ್ಮದ ಜನರಿಗೂ ಪೀಠಾಧಿಪತಿಗಳಾಗಲು ಅವಕಾಶ ಮಾಡಿಕೊಡಿ ಎಂದು ನಾಯಕ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಆಗ್ರಹಿಸಿದ್ದಾರೆ.
ಪೀಠ ತ್ಯಾಗ ಮಾಡಲು ಮುರುಘಾ ಶ್ರೀ ನಕಾರ: ಲಿಂಗಾಯತ ಮುಖಂಡರ ಸಭೆ
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಶಿವಮೂರ್ತಿ ಮುರುಘಾ ಶರಣರು(Dr.Shivamoorthy Murugha Shree) ಪೋಕ್ಸೋ(POCSO) ಪ್ರಕರಣದಲ್ಲಿ ಬಂಧಿತರಾಗಿರುವುದರಿಂದ ಪೀಠ ತ್ಯಾಗ ಮಾಡಬೇಕು, ಇಲ್ಲವೇ ಸರ್ಕಾರ ಮುರುಘಾ ಮಠ(Murugha Mutt)ಕ್ಕೆ ಬೇರೆ ಪೀಠಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಗುರುವಾರ ನಿಜಲಿಂಗಪ್ಪ ಸ್ಮಾರಕ್ ಬಳಿ ಸಭೆ ನಡೆಸಿರುವುದು ಎಷ್ಟು ಸರಿ ? ಇದೇನು ಅವರ ಸ್ವಂತ ಆಸ್ತಿನಾ ಎಂದು ಪ್ರಶ್ನಿಸಿದ್ದಾರೆ.
ಮುರುಘಾ ಮಠ 'ಶೂನ್ಯಪೀಠ' ಎಂದೇ ಹೆಸರು ವಾಸಿಯಾಗಿದೆ. ಶೂನ್ಯಪೀಠಕ್ಕೆ ಶೂದ್ರರಾಗಿದ್ದ ಅಲ್ಲಮಪ್ರಭುಗಳು ಮುಖ್ಯಸ್ಥರನ್ನಾಗಿ ಬಸವಣ್ಣನವರು ಮಾಡಿದ್ದರು. ಬಸವಣ್ಣನವರ ತತ್ವಾದರ್ಶಗಳ ಮೇಲೆ ಶೂನ್ಯಪೀಠ ಮುನ್ನಡೆಯುತ್ತಿದೆ. ಆದರೆ ನಿನ್ನೆ ನಡೆದ ಸಭೆಯಲ್ಲಿ ಕೇವಲ ಒಂದು ಕೋನಮಿನ ಜನರು ಸಭೆ ಸೇರಿ ಪೀಠಾಧ್ಯಕ್ಷರ ಬದಲಾವಣೆಗೆ ಮುಂದಾಗಿದ್ದಾರೆ. ಅಲ್ಲದೆ ಶೂನ್ಯಪೀಠ ಎಂದೇ ಖ್ಯಾತಿ ಗಳಿಸಿರುವ ಮುರುಘಾ ಮಠಕ್ಕೆ ಶೂನ್ಯಪೀಠ ಎಂಬ ಹೆಸರನ್ನು ತೆಗೆದು 'ವೀರಶೈವ ಲಿಂಗಾಯತ ಮಠ' ಎಂದು ಹೆಸರನ್ನು ಬದಲಾವಣೆ ಮಾಡಲು ಮುಂದಾಗಿರುವುದು ಎಷ್ಟು ಸರಿ? ಮುರುಘಾಮಠ ಏನು ಇವರುಗಳ ಆಸ್ತಿಯೇ ? ಎಂದು ಪ್ರಶ್ನಿಸಿದ್ದಾರೆ.
ಮುರುಘಾ ಮಠಕ್ಕೆ ಒಂದು ಕೋಮಿನ ಜನರು ಆಯ್ಕೆ ಮಾಡಿಕೊಂಡವರೆ ಪೀಠಕ್ಕೆ ಬರಬೇಕಾ? ಯಾಕೆ ಒಂದೇ ಕೋಮಿನವರು ಸ್ವಾಮೀಜಿ ಆಗಬೇಕು. ಬೇರೆ ಯಾರೂ ಆಗಬಾರದೇ? ಶೂನ್ಯಪೀಠ ಆಗಿರುವ ಮುರುಘಾಮಠಕ್ಕೆ ಬೇರೆ ಜನಾಂಗವರು ಪೀಠಾಧ್ಯಕ್ಷರಾಗಲು ಅವಕಾಶ ನೀಡುತ್ತದೆ. ಎಲ್ಲಾ ವರ್ಗದ ಜನರು ಪೀಠಾಧ್ಯಕ್ಷರಾಗಲಿ ಎಂದು ಒತ್ತಾಯಿಸಿದರು.
ಈ ಕುರಿತು ಶೀಘ್ರವೇ ಶ್ರೀಮುರುಘಾ ಪರಂಪರೆ ಕಲ್ಯಾಣ ಸಮಿತಿಯನ್ನು ರಚಿಸಿ ಎಲ್ಲಾ ವರ್ಗದವರನ್ನು ಸೇರಿಸಿ ಸಭೆ ನಡೆಸುವ ಮೂಲಕ ಪೀಠಾಧ್ಯಕ್ಷರ ನೇಮಕಕ್ಕೆ ಹೋರಾಟವನ್ನು ರೂಪಿಸಲಾಗುವುದು ಎಂದು ಹೇಳಿದ ಅವರು, ಮಠವನ್ನು ಕಟ್ಟಿರುವುದು ನಾಯಕ ಜನಾಂಗದವರು. ಆದರೂ ಸಹ ಎಲ್ಲಾ ವರ್ಗದವರಿಗೆ ಮಾನ್ಯತೆ ನೀಡುವುದು ಮುಖ್ಯವಾಗಿದೆ. ಇದರಲ್ಲಿ ಸರ್ಕಾರ ಅಥವಾ ನ್ಯಾಯಾಲಯ ಭಾಗಿಯಾಗುವ ಅವಶ್ಯಕತೆ ಇಲ್ಲ ಎಂದರು.
ಮುರುಘಾ ಮಠಕ್ಕಿರುವ ಶೂನ್ಯಪೀಠ ಹೆಸರನ್ನು ತೆಗೆದು ವೀರಶೈವ ಲಿಂಗಾಯತ ಪೀಠ ಎಂದು ಹೆಸರನ್ನು ಬದಲಾವಣೆ ಮಾಡುವ ಹೂನ್ನಾರವನ್ನು ಒಂದು ವರ್ಗದ ಜನರು ಮಾಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ. ಶೂನ್ಯಪೀಠ ಹೆಸರು ಬದಲಾವಣೆಗೆ ಮುಂದಾಗಿದ್ದಲ್ಲಿ ಸಂಘರ್ಷಕ್ಕೆ ನಾಂದಿ ಆಡಿದಂತೆ. ಆದ್ದರಿಂದ ಹೆಸರು ಬದಲಾವಣೆಯ ವಿಷಯವನ್ನು ಕೈ ಬಿಟ್ಟರೆ ಬಹಳ ಒಳ್ಳೆಯದು ಇಲ್ಲವಾದರೆ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಠದ ಸಿಬ್ಬಂದಿಗೆ ವೇತನ: ಮೆಮೋ ಸಲ್ಲಿಸಲು ಮುರುಘಾ ಶ್ರೀ ವಕೀಲರಿಗೆ ಹೈ ಕೋರ್ಟ್ ಸೂಚನೆ
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಆಧ್ಯಕ್ಷ ತಿಪ್ಪಣ್ಣ, ಲಿಂಗವ್ವ ನಾಗತಿಹಳ್ಳಿ ತಿಪ್ಪೇಸ್ವಾಮಿ, ವೀರಣ್ಣ ಯಾದವ್, ಜಯ್ಯಪ್ಪ, ಪಾಳೇಗಾರ್ ಕರಿಯಪ್ಪ, ಈ ಮಂಜುನಾಥ್ ಹಾಜರಿದ್ದರು.