ಮೈಸೂರು(ಅ.31):  ಪರವಾನಗಿ ಶುಲ್ಕ ಸೇರಿ ಪುನರ್‌ ಪರಿಶೀಲಿಸುವುದು ಸೇರಿ ವಿವಿಧ ಬೇಡಿಕೆ ಈಡೇರದೆ, ಶೇ.75ರಷ್ಟು ಸೀಟು ಭರ್ತಿ ಮಾಡಲು ಅವಕಾಶ ನೀಡದೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌.ಓದುಗೌಡರ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌ನಿಂದಾಗಿ ಥಿಯೇಟರ್‌ ಉದ್ಯಮಕ್ಕೆ ಅಂದಾಜು .5 ಸಾವಿರ ಕೋಟಿ ನಷ್ಟವಾಗಿದೆ. ಕೋವಿಡ್‌ನಿಂದಾಗಿ ಸಿಂಗಲ್‌ ಸ್ಕ್ರೀನ್‌ ಪ್ರದರ್ಶಕರು ಎದುರಿಸುತ್ತಿರುವ ಸವಾಲು, ಸಮಸ್ಯೆಯನ್ನು ರಾಜ್ಯ ಸರ್ಕಾರ ಪರಿಹರಿಸಬೇಕು, ಪ್ರದರ್ಶಕರ ಬೇಡಿಕೆ ಈಡೇರದೆ ರಾಜ್ಯದಲ್ಲಿ ಚಿತ್ರಪ್ರದರ್ಶನ ಆರಂಭಿಸುವುದಿಲ್ಲ ಎಂದು ಹೇಳಿದರು.

ನವೀಕರಣ ಶುಲ್ಕ ಪುನರ್‌ ಪರಿಶೀಲಿಸಿ:

ಚಿತ್ರಮಂದಿರದ ಪರವಾನಗಿ ನವೀಕರಣವನ್ನು 3 ವರ್ಷಕ್ಕೊಮ್ಮೆ ಮಾಡಿಕೊಂಡು ಬರುತ್ತಿದ್ದು, 2018ರಿಂದ ಐದು ವರ್ಷಕ್ಕೆ ಪರವಾನಗಿ ನೀಡಲಾಗುತ್ತಿದೆ. ಸದ್ಯ ನವೀಕರಣ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಮೊದಲು ಸಾವಿರ ಇದ್ದ ಶುಲ್ಕ ಈಗ 5 ಸಾವಿರಕ್ಕೇರಿದೆ. ಇದರಿಂದಾಗಿ ಒಂದು ಚಿತ್ರಮಂದಿರದ ಒಟ್ಟು ಚದರಡಿಗೆ 12 ಲಕ್ಷ ಶುಲ್ಕ ಭರಿಸಬೇಕಾಗುತ್ತದೆ. ಕೂಡಲೇ ಪರವಾನಗಿ ನವೀಕರಣ ಶುಲ್ಕವನ್ನು ಪುನರ್‌ ಪರಿಶೀಲಿಸಬೇಕು. ಚಿತ್ರಮಂದಿರಕ್ಕೆ ‘ವಾಣಿಜ್ಯ ಉದ್ದೇಶ’ದ ಬದಲು ‘ಕೈಗಾರಿಕಾ ವಲಯ’ಕ್ಕೆ ಅನ್ವಯವಾಗುವ ವಿದ್ಯುತ್‌ ದರ ನಿಗದಿ ಮಾಡಿ ತೆರಿಗೆ ಹೊರೆ ಇಳಿಸಬೇಕು. ಚಿತ್ರಮಂದಿರಗಳಿಗೆ ವಿಧಿಸುತ್ತಿರುವ ಅವೈಜ್ಞಾನಿಕ ಕಟ್ಟಡ ತೆರಿಗೆಯ ಕುರಿತೂ ಗಮನಹರಿಸಬೇಕು. ನಿರ್ಮಾಪಕರು- ಪ್ರದರ್ಶಕರೊಂದಿಗೆ ಸಮಸ್ಯೆಗಳ ಕುರಿತು ಸರ್ಕಾರ ಮುಕ್ತ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಸಿದರೆ ಮಾತ್ರ ಚಿತ್ರಪ್ರದರ್ಶನ..!

ಲಾಕ್‌ಡೌನ್‌ ಅವಧಿಯಲ್ಲಿ ಹಲವು ಚಿತ್ರಮಂದಿರಗಳ ಪರವಾನಗಿ, ಪರ್ಮಿಟ್‌ಗಳ ಅವಧಿ ಕೊನೆಗೊಂಡಿದೆ. ಮುಂದಿನ 1 ವರ್ಷದವರೆಗೆ ಪರವಾನಗಿಗಳ ಸ್ವಯಂ ನವೀಕರಣದ ಅಗತ್ಯವಿದೆ. ಒಂದು ವೇಳೆ ರಿಯಾಯಿತಿ, ಅನುಮತಿಗಳು ದೊರೆತು ಸರ್ಕಾರದ ಸೂಚಿಸಿರುವಂತೆ ಶೇ.50 ರಷ್ಟು ಸೀಟುಗಳ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ತೆರೆದರೂ ಸಮಸ್ಯೆ. ಕೋವಿಡ್‌ ನಡುವೆ ಹಲವು ಸಮಸ್ಯೆಗಳೊಂದಿಗೆ ಚಿತ್ರಮಂದಿರ ತೆರೆದರೆ ಮುಂದೆ ಚಿತ್ರಮಂದಿರಗಳಿಗೆ ಶಾಶ್ವತವಾಗಿ ಬಾಗಿಲು ಹಾಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಮಂಡಲದ ಉಪಾಧ್ಯಕ್ಷ ಎಂ.ಆರ್‌.ರಾಜಾರಾಮ್‌, ಕಾರ್ಯದರ್ಶಿ ಉಮೇಶ್‌ ಕಾರಂತ್‌, ಮೈಸೂರು ವಲಯದ ಅಧ್ಯಕ್ಷ ಅಜಿತ್‌ ಕುಮಾರ್‌ ಇದ್ದರು.