Asianet Suvarna News Asianet Suvarna News

ಬೇಡಿಕೆ ಈಡೇರಿಸಿದರೆ ಮಾತ್ರ ಚಿತ್ರಪ್ರದರ್ಶನ..!

ಸರ್ಕಾರದ ಎದುರಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿರುವ ಪ್ರದರ್ಶಕರ ಮಹಾಮಂಡಳ| ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ: ಓದುಗೌಡರ| ಚಿತ್ರಮಂದಿರಗಳನ್ನು ಇಂಡಸ್ಟ್ರೀ ಎಂದು ಪರಿಗಣಿಸಿ ತೆರಿಗೆ, ವಿದ್ಯುತ್‌ ಬಿಲ್‌ಗಳಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ| 

Movie Theatres not Yet Opened in Hubballi Dharwad grg
Author
Bengaluru, First Published Oct 17, 2020, 11:13 AM IST
  • Facebook
  • Twitter
  • Whatsapp

ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.17): ಸಿನಿರಸಿಕರಿಗೆ ಇದು ಬೇಸರದ ಸುದ್ದಿ. ಕೋವಿಡ್‌ ಅನ್‌ಲಾಕ್‌ನಿಂದ ಚಿತ್ರಮಂದಿರ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದರೂ ಸಿಂಗಲ್‌ ಸ್ಕ್ರೀನ್‌ಗಳು ಸದ್ಯಕ್ಕೆ ಪ್ರಾರಂಭವಾಗುವುದಿಲ್ಲ. ಸರ್ಕಾರದ ಮುಂದೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಕೆಲವೊಂದಿಷ್ಟು ಬೇಡಿಕೆಗಳನ್ನು ಇಟ್ಟಿದೆ. ಆ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಚಿತ್ರಮಂದಿರ ತೆರೆಯುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದೆ ಮಹಾಮಂಡಳ. ಈ ಕಾರಣದಿಂದಾಗಿ ಸದ್ಯಕ್ಕಂತೂ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಚಿತ್ರಮಂದಿರಗಳ ಮಾಲೀಕರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದಲ್ಲಿ ಸುಮಾರು 500 ಸದಸ್ಯರಿದ್ದಾರೆ. ಗದಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಮಹಾಮಂಡಳದಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತಿತರರ ಜಿಲ್ಲೆಗಳ ಚಿತ್ರಮಂದಿರಗಳ ಮಾಲೀಕರಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಚಿತ್ರಮಂದಿರಗಳ ಮಾಲೀಕರು ಮಾತ್ರವಿಲ್ಲ. ಆದರೆ ಮಾಲ್‌ಗಳಲ್ಲಿರುವ ಮಲ್ಟಿಫ್ಲೆಕ್ಸ್‌ಗಳಲ್ಲಿ (ಸ್ಕ್ರೀನ್‌) ಚಿತ್ರಪ್ರದರ್ಶನಕ್ಕೆ ಯಾವುದೇ ತೊಂದರೆಯಿಲ್ಲ. ಅಲ್ಲಿ ನಿರಾಂತಕವಾಗಿ ಚಿತ್ರಪ್ರದರ್ಶನ ನಡೆಯಲಿದೆ.

ಏನೇನು ಬೇಡಿಕೆ?:

ಕೊರೋನಾದಿಂದಾಗಿ ಎಲ್ಲ ಚಿತ್ರಮಂದಿರಗಳು ಬಂದ್‌ ಆಗಿದ್ದವು. ಇದೀಗ ಅನ್‌ಲಾಕ್‌ 5.0ರ ಅನ್ವಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಇದೇ ವೇಳೆ ಚಿತ್ರಮಂದಿರಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವವರೆಗೂ ಚಿತ್ರಮಂದಿರಗಳನ್ನು ತೆರೆಯುವುದಿಲ್ಲ. ಚಿತ್ರಪ್ರದರ್ಶನ ಮಾಡುವುದಿಲ್ಲ ಎಂದು ಮಹಾಮಂಡಳ ಸ್ಪಷ್ಟಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದೆ.

ಕೋವಿಡ್‌ ನಿಯಮಗಳೇ ಬಾಗಿಲು ತೆರೆಯಲು ಅಡ್ಡಿ: ಧಾರವಾಡದಲ್ಲಿ ಚಿತ್ರಮಂದಿರ ಓಪನ್‌ ಇಲ್ಲ..!

ಸರ್ಕಾರ ಚಿತ್ರಮಂದಿರಗಳ ಪರವಾನಗಿ ನವೀಕರಣ ಶುಲ್ಕವನ್ನು ಸಿಕ್ಕಾಪಟ್ಟೆಹೆಚ್ಚಿಸಿದೆ. ಮೊದಲು 5 ಸಾವಿರ ಚದರ ಮೀಟರ್‌ ಚಿತ್ರಮಂದಿರಕ್ಕೆ ಐದು ವರ್ಷಕ್ಕೆ . 5 ಸಾವಿರ ನವೀಕರಣ ಶುಲ್ಕ ತುಂಬುತ್ತಿದ್ದೆವು. ಈಗ ನವೀಕರಣದ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ. ಜತೆಗೆ . 1.25 ಲಕ್ಷ ವರೆಗೂ ಶುಲ್ಕ ವಿಧಿಸುವ ಕುರಿತು 2018ರಲ್ಲೇ ಸರ್ಕಾರ ಆದೇಶಿಸಿದೆ. ಇಷ್ಟೊಂದು ಹೇಗೆ ಎಂದು ಪ್ರಶ್ನಿಸಿದ್ದಕ್ಕೆ ಏನೋ ಸಮಸ್ಯೆಯಾಗಿದೆ. ಸರಿಪಡಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಆದೇಶ ಹೊರಡಿಸಿ ಎರಡು ವರ್ಷವಾದರೂ ಈ ವರೆಗೂ ಸರಿಪಡಿಸಿಲ್ಲ.

ಇನ್ನೂ ಚಿತ್ರಮಂದಿರಗಳಿಗೆ ಸೂಪರ್‌ ಕಮರ್ಷಿಯಲ್‌ ಎಂದು ಪರಿಗಣಿಸಲಾಗಿದೆ. ಇದರಿಂದ ಆಸ್ತಿ ತೆರಿಗೆಯೂ ವಿಪರೀತ ಬರುತ್ತದೆ. ಇನ್ನೂ ಚಿತ್ರಮಂದಿರಗಳನ್ನು ಇಂಡಸ್ಟ್ರೀ ಎಂದು ಪರಿಗಣಿಸಿ ತೆರಿಗೆ, ವಿದ್ಯುತ್‌ ಬಿಲ್‌ಗಳಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ ಇದೆ. ಕೊರೋನಾ ಲಾಕ್‌ಡೌನ್‌ನಿಂದ ಏಳೆಂಟು ತಿಂಗಳು ನಾವು ಸಿನಿಮಾ ಪ್ರದರ್ಶನ ಮಾಡಿಲ್ಲ. ಇದರಿಂದ ನಾವು ನಷ್ಟದಲ್ಲೇ ಇದ್ದೇವೆ. ಎಲ್ಲ ರಂಗಗಳಿಗೂ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ ಚಿತ್ರಮಂದಿರಗಳಿಗೆ ಸಂಬಂಧಪಟ್ಟಂತೆ ಯಾವುದೇ ಬಗೆಯ ಪರಿಹಾರವಾಗಲಿ, ಪ್ಯಾಕೇಜ್‌ ಆಗಲಿ ಘೋಷಿಸಿಲ್ಲ. ನಮಗೂ ಪ್ಯಾಕೇಜ್‌ ಘೋಷಿಸಬೇಕು. ಇದರೊಂದಿಗೆ ಲಾಕ್‌ಡೌನ್‌ ವೇಳೆ ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗಿತ್ತು. ಈ ವೇಳೆ ಮಿನಿಮಮ್‌ ವಿದ್ಯುತ್‌ ಬಿಲ್‌ ನಾವು ಪಾವತಿಸಬೇಕಿದೆ. ಆದಕಾರಣ ನಾವು ಎಷ್ಟುವಿದ್ಯುತ್‌ ಬಿಲ್‌ ಬಳಸಿದ್ದೇವೋ ಅಷ್ಟನ್ನೇ ವಿದ್ಯುತ್‌ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮಹಾಮಂಡಳದ್ದು.

ನವೀಕರಣ ಶುಲ್ಕ, ವಿದ್ಯುತ್‌ ಬಿಲ್‌ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡಿದ್ದೇವೆ. ಅವುಗಳನ್ನು ಈಡೇರಿಸಿದರೆ ಮಾತ್ರ ಚಿತ್ರಪ್ರದರ್ಶನ ಮಾಡುತ್ತೇವೆ. ನಮ್ಮ ಸಂಘದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 500 ಚಿತ್ರಮಂದಿರಗಳ ಮಾಲೀಕರು ಸದಸ್ಯರಿದ್ದಾರೆ. ಎಲ್ಲೂ ಪ್ರದರ್ಶನ ಮಾಡಲ್ಲ ಎಂದು ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌. ಓದುಗೌಡರ ತಿಳಿಸಿದ್ದಾರೆ. 

ಚಿತ್ರ ಬಿಡುಗಡೆ ಮಾಡಬೇಕೆಂದರೆ ನಿರ್ಮಾಪಕರಿಗೆ ಅಡ್ವಾನ್ಸ್‌ , ಮಿನಿಮಮ್‌ ಗ್ಯಾರಂಟಿ ಅಥವಾ ನಾನ್‌ ರಿಫಂಡೇಬಲ್‌ ಅಮೌಂಟ್‌ ನೀಡಬೇಕು. ಈಗಿರುವ ಪದ್ಧತಿ ಕೈಬಿಟ್ಟು ಶೇಕಡಾವಾರು ಮಾದರಿ ಜಾರಿಗೊಳಿಸಬೇಕು. ಈ ಬೇಡಿಕೆಯೂ ಈಡೇರಬೇಕು ಎಂದು ಚಿತ್ರಪ್ರದರ್ಶಕರ ಮಹಾಮಂಡಳದ ಕಾರ್ಯದರ್ಶಿ ಉಮೇಶ ಕಾರಂತ ತಿಳಿಸಿದ್ದಾರೆ. 
 

Follow Us:
Download App:
  • android
  • ios