ಸಿಂಧನೂರು ನಗರದ ಜೀವನಾಡಿಯಾದ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ತುರ್ವಿಹಾಳ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಇನ್ನೂ ಮೂರು ತಿಂಗಳಿಗಾಗುವಷ್ಟು ಸಂಗ್ರಹವಿದೆ. ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
ರಾಯಚೂರು: ತುರ್ವಿಹಾಳ ಪಟ್ಟಣ ಸಮೀಪದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ಸಿಂಧನೂರು ನಗರದ ಜೀವಸೆಲೆಯಾಗಿದ್ದು, ಸದ್ಯ ಕೆರೆ ನೀರಿನ ಪ್ರಮಾಣ ಕುಸಿತಕಂಡು ನಾಗರಿಕರಿಗೆ ಆತಂಕ ತಂದೊಡ್ಡಿದೆ.
ಸದ್ಯ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ ಅಂದಾಜು ಒಂದೂವರೆಯಿಂದ ಎರಡು ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ಪ್ರಸ್ತುತ ತುರ್ವಿಹಾಳ ಕೆರೆಯಿಂದ ನೇರವಾಗಿ ನೀರನ್ನು ನಗರದ 31 ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದ ವೇಳೆ ತುರ್ವಿಹಾಳ ಕೆರೆ ಹಾಗೂ ನಗರದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿತ್ತು. ಬೇಸಿಗೆಯ ಕಾರಣ ದಿಂದ ನೀರಿನ ಬೇಡಿಕೆ ಹೆಚ್ಚಿ ನಗರದ ಕುಡಿಯುವ ನೀರಿನ ಕೆರೆ ಬೇಗನೆ ಖಾಲಿಯಾಗಿದ್ದು, ತುರ್ವಿಹಾಳ ಕೆರೆಯೇ ಆಸರೆಯಾಗಿದೆ.
ನೀರನ್ನು ಮಿತವಾಗಿ ಬಳಸಿ:
ಸದ್ಯ ಸಿಂಧನೂರು ಕೆರೆಯಲ್ಲಿ ನೀರು ಕಡಿಮೆ ಇರಬಹುದು, ಆದರೆ ತುರ್ವಿಹಾಳ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿದೆ. ಅಂದಾಜು ಇನ್ನೂ ಮೂರು ಇಲ್ಲವೇ ಮೂರುವರೇ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಈಗ ಪ್ರತಿ 8 ದಿನಕ್ಕೊಮ್ಮೆ ಆಯಾ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ನೀರಿನ ಕೊರತೆ ಮಾತ್ರ ಇಲ್ಲ. ಆದರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ನಗರಸಭೆಯ ಪೌರಾಯುಕ್ತ ಹೇಳುತ್ತಾರೆ.


