ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆಯು ಸರ್ಕಾರಿ ಕ್ಯಾಂಟೀನ್‌ಗಳಿಂದ ಹಿಡಿದು 5-ಸ್ಟಾರ್ ಹೋಟೆಲ್‌ಗಳವರೆಗೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಮಹಾರಾಷ್ಟ್ರವನ್ನು ಅನುಸರಿಸುತ್ತಿಲ್ಲ, ಬದಲಾಗಿ ಕಬಾಬ್ ಬಣ್ಣ ನಿಷೇಧದಂತಹ ಕ್ರಮಗಳಿಂದ ದೇಶಕ್ಕೇ ನಾವೇ ಟ್ರೆಂಡ್‌ಸೆಟರ್ ಎಂದು ಎಫ್‌ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಮೇಲಿನ ಜಾರಿ ಕ್ರಮಗಳು ತೀವ್ರಗೊಂಡಿವೆ. ರಾಜ್ಯ ಸರ್ಕಾರದ ಪ್ರಮುಖ ಆಡಳಿತ ಕೇಂದ್ರವಾದ ವಿಧಾನಸೌಧ, ವಿಕಾಸಸೌಧ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ 'ಆರೋಗ್ಯ ಸೌಧ'ದ ಮೇಲೆಯೇ ಎಫ್‌ಡಿಎ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಮಹಾರಾಷ್ಟ್ರದ ಕಡಕ್ ಅಧಿಕಾರಿ ತುಕಾರಾಂ ಮುಂಡೆ ಅವರ ಜಾರಿ ಮಾದರಿಗೆ ಹೋಲಿಸಲಾಗುತ್ತಿದೆ. ಆದರೆ, ಈ ಹೋಲಿಕೆಯನ್ನು ಪೂರ್ಣವಾಗಿ ತಳ್ಳಿಹಾಕಿರುವ ಕರ್ನಾಟಕ ಎಫ್‌ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ, "ಕರ್ನಾಟಕವು ಯಾರ ದಾರಿಯನ್ನೂ ಅನುಸರಿಸುತ್ತಿಲ್ಲ, ಬದಲಾಗಿ ಆಹಾರ ಸುರಕ್ಷತೆಯಲ್ಲಿ ಇಡೀ ದೇಶಕ್ಕೇ ನಾವೇ ಟ್ರೆಂಡ್‌ಸೆಟರ್ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರಕ್ಕೂ ಮುನ್ನವೇ ದಾರಿ ತೋರಿಸಿದ ಕರ್ನಾಟಕ!

ಮಹಾರಾಷ್ಟ್ರದ ಇತ್ತೀಚಿನ ಕಾರ್ಯಾಚರಣೆಗಳಿಂದ ಕರ್ನಾಟಕ ಪ್ರೇರಿತವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಕೆ, ದೇಶದಲ್ಲೇ ಮೊದಲ ಬಾರಿಗೆ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಕರ್ನಾಟಕದ್ದು ಎಂದರು. ಕಬಾಬ್‌ಗಳು ಮತ್ತು ಪಾನಿಪುರಿಗಳಲ್ಲಿ ಅಪಾಯಕಾರಿ ಕೃತಕ ಬಣ್ಣಗಳ ಬಳಕೆಯನ್ನು ಮೊದಲು ಪತ್ತೆ ಹಚ್ಚಿ ನಿಷೇಧಿಸಿದ್ದು ಇದೇ ಕರ್ನಾಟಕ. ಈ ವಿಷಯವು ಸಂಸತ್ತಿನವರೆಗೂ ತಲುಪಿ, ದೇಶಾದ್ಯಂತ ಜಾರಿಯಾಗಲು ಕಾರಣವಾಯಿತು. ಅಷ್ಟೇ ಅಲ್ಲದೆ, ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳ ಬಳಕೆಯಿಂದಾಗುವ ಅಪಾಯವನ್ನು ಪತ್ತೆಹಚ್ಚಿದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದೆ. ಈ ಸಂಶೋಧನೆಯ ಆಧಾರದ ಮೇಲೆಯೇ ಎಫ್‌ಎಸ್‌ಎಸ್‌ಎಐ ರಾಷ್ಟ್ರೀಯ ಸಲಹೆಯನ್ನು ಜಾರಿಗೊಳಿಸಿತು.

ವಿಧಾನಸೌಧದಿಂದ ಹೈಪರ್ ಪ್ಯೂರ್, ಜೆಪ್ಟೋ ವರೆಗೆ ಕಡಕ್ ರೇಡ್!

ಇತ್ತೀಚಿನ ದಾಳಿಗಳಲ್ಲಿ ಎಫ್‌ಡಿಎ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ಸರ್ಕಾರಿ ಕಟ್ಟಡಗಳು: ವಿಕಾಸಸೌಧದ ಕ್ಯಾಂಟೀನ್‌ಗೆ ಬೀಗ ಜಡಿಯಲಾಗಿದೆ. ವಿಧಾನಸೌಧ ಸಂಕೀರ್ಣದೊಳಗಿನ ‘ಮಲ್ಲಿಗೆ ಊಟದ ಮನೆ’ ರೆಸ್ಟೋರೆಂಟ್‌ನಲ್ಲಿ ಜಿರಳೆಗಳು ಕಂಡುಬಂದ ಹಿನ್ನೆಲೆಯಲ್ಲಿ ಮುಚ್ಚಲು ಆದೇಶಿಸಲಾಗಿದೆ. ಮಾಗಡಿ ರಸ್ತೆಯ ‘ಆರೋಗ್ಯ ಸೌಧ’ ಕ್ಯಾಂಟೀನ್‌ನಲ್ಲಿ ಅವಧಿ ಮೀರಿದ ಇಡ್ಲಿ ರವೆ, ತೆಂಗಿನಕಾಯಿ ಪುಡಿ ಹಾಗೂ ಅಸಮರ್ಪಕ ಕೀಟ ನಿಯಂತ್ರಣ ಕಂಡುಬಂದಿದ್ದಕ್ಕೆ ನೋಟಿಸ್ ನೀಡಲಾಗಿದೆ.

ಆನ್‌ಲೈನ್ & ಗೋದಾಮುಗಳು: ಹೊಸಕೋಟೆಯ ‘ಜೆಪ್ಟೋ’ಗೋದಾಮನ್ನು ತಪ್ಪು ಬ್ರ್ಯಾಂಡಿಂಗ್ ಹಾಗೂ ಅನೈರ್ಮಲ್ಯದ ಕಾರಣಕ್ಕಾಗಿ ಮೊಹರು ಮಾಡಲಾಗಿದೆ. ಸಕಲವಾರದ ‘ಹೈಪರ್‌ಪ್ಯೂರ್ ಬೈ ಜೊಮಾಟೊ’ ಸಂಸ್ಥೆಯಲ್ಲಿ ಮಾನ್ಯ ಪರವಾನಗಿ ಇಲ್ಲದ 146 ಕೆಜಿ ಕೋಳಿ ಮಾಂಸ, 300 ಕೆಜಿ ಅಕ್ಕಿ ಹಾಗೂ ಲೇಬಲ್ ಇಲ್ಲದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್: ಗೊಟ್ಟಿಗೆರೆಯ ಕೇಂದ್ರೀಯ ಇಂದಿರಾ ಕ್ಯಾಂಟೀನ್ ಅಡುಗೆಮನೆಯನ್ನು ಸೀಲ್ ಮಾಡಲಾಗಿದ್ದು, ಇತರೆ ಘಟಕಗಳಿಗೆ ನೋಟಿಸ್ ನೀಡಲಾಗಿದೆ.

5-ಸ್ಟಾರ್ ಹೋಟೆಲ್‌ಗಳು ಸ್ಕ್ಯಾನರ್‌ಗೆ ಬಂದಿದ್ದೇಕೆ?

ಇಷ್ಟು ದಿನ ಜಾರಿ ಕ್ರಮಗಳು ರಸ್ತೆಬದಿಯ ತಿನಿಸುಗಳಿಗೆ ಸೀಮಿತವಾಗಿದ್ದವು. ಆದರೆ, ಇತ್ತೀಚೆಗೆ 50 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಸಂಸ್ಥೆಗಳನ್ನು ರಾಜ್ಯ ಮಟ್ಟದ ಪರವಾನಗಿ ಅಡಿಯಲ್ಲಿ ತಂದ ನಂತರ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಸ್ಟಾರ್ ಹೋಟೆಲ್‌ಗಳ ಮೇಲೂ ಕಾರ್ಯಾಚರಣೆ ಆರಂಭವಾಯಿತು. ಪರಿಶೀಲನೆ ವೇಳೆ ಶೇ.30 ಕ್ಕಿಂತ ಕಡಿಮೆ ಹೋಟೆಲ್‌ಗಳು ನಿಯಮ ಪಾಲಿಸುತ್ತಿರುವುದು ಕಂಡುಬಂದು ಎಫ್‌ಡಿಎ ಅಧಿಕಾರಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಅಡುಗೆಯವರನ್ನು ಪ್ರತಿ ಆರು ತಿಂಗಳಿಗೊಮ್ಮೆ ಕ್ಷಯರೋಗ (TB) ತಪಾಸಣೆಗೆ ಒಳಪಡಿಸಬೇಕು ಹಾಗೂ ಅಡುಗೆ ವೇಳೆ ಉದ್ದ ಉಗುರು, ಗಡಿಯಾರ ಧರಿಸಬಾರದು ಎಂಬ ನಿಯಮಗಳನ್ನು ಹಲವರು ಗಾಳಿಗೆ ತೂರಿದ್ದರು.

ಬೀದಿ ಬದಿ ಆಹಾರವೇ ಸುರಕ್ಷಿತ!

ಕುತೂಹಲಕಾರಿ ವಿಷಯವೆಂದರೆ, ಐಷಾರಾಮಿ ಹೋಟೆಲ್‌ಗಳಿಗೆ ಹೋಲಿಸಿದರೆ ರಸ್ತೆಬದಿಯ ಆಹಾರ ಮಳಿಗೆಗಳು ಮತ್ತು ದರ್ಶಿನಿಗಳು ತಪಾಸಣೆಯಲ್ಲಿ ಉತ್ತಮ ಅಂಕ ಗಳಿಸಿವೆ! ವಿಧಾನಸೌಧ ಬಳಿಯ 36 ಫುಡ್ ಟ್ರಕ್‌ಗಳು ಹಾಗೂ ಹೊಸಕೋಟೆಯ ಬೆಳಗಿನ ಜಾವದ ಬಿರಿಯಾನಿ ಮಳಿಗೆಗಳ ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ. "ಆಹಾರ ಎಂಬುದು ನಮ್ಮ ಸಂಸ್ಕೃತಿಯಲ್ಲಿ 2,000 ವರ್ಷಗಳಿಂದ ಬೆಳೆದುಬಂದ ಭಾವನೆ, ಜಾರಿ ಕ್ರಮಗಳು ಅದಕ್ಕೆ ಬೆದರಿಕೆಯಾಗಬಾರದು" ಎಂದಿರುವ ಶ್ರೀನಿವಾಸ್ ಕೆ, ಗ್ರಾಹಕರು ಹೊರಗಿನ ಆಹಾರ ಸೇವನೆಯನ್ನು ತಿಂಗಳಿಗೆ ಎರಡು ಬಾರಿಗೆ ಸೀಮಿತಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.