Asianet Suvarna News Asianet Suvarna News

ಇಲ್ಲಿ ನೀರು ನಿಲ್ಲೋದು ಇಲ್ಲ, ಇಂಗೋದು ಇಲ್ಲ!

  •  ಇಲ್ಲಿ ನೀರು ನಿಲ್ಲೋದು ಇಲ್ಲ, ಇಂಗೋದು ಇಲ್ಲ!
  • ಮೂಲ ಉದ್ದೇಶ ಮರೆತ ಕಿಂಡಿ ಅಣೆಕಟ್ಟುಗಳ ಕಥೆ- ವ್ಯಥೆ
  • ಉಪ್ಪಿನಂಗಡಿ ಭಾಗದಲ್ಲಿ ಕಿಂಡಿ ಅಣೆಕಟ್ಟುಗಳು ನೀರಿಲ್ಲದೆ ಬರಡಾಗಿ ಸೊರಗಿದೆ
The story of kindi dams whose original purpose was forgotten udupi rav
Author
First Published Nov 26, 2022, 8:34 AM IST

ವಿಶೇಷ ವರದಿ

 ಉಪ್ಪಿನಂಗಡಿ (ನ.26) : ಅನುದಾನ ನೀಡುವ ಇಲಾಖೆಗಳಿಗೆ ಇದರ ನಿರ್ವಹಣೆಯ ಹೊಣೆ ಇಲ್ಲ. ಈ ಕಾರಣಗಳಿಂದ ಇಲ್ಲಿ ನೀರು ನಿಲ್ಲೋದು ಇಲ್ಲ, ಇಂಗೋದು ಇಲ್ಲ! ಹೌದು, ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಸುವ ಮೂಲ ಉದ್ದೇಶದಿಂದ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳು ಆ ಬಳಿಕ ನಿರ್ವಹಣೆಯಿಲ್ಲದೆ ಸೊರಗಿ ನಿಷ್ೊ್ರಯೋಜಕವಾಗುತ್ತಿವೆ. ಉಪ್ಪಿನಂಗಡಿ ಭಾಗದಲ್ಲಿ ಅಂತಹ ಅನೇಕ ಕಿಂಡಿ ಅಣೆಕಟ್ಟುಗಳು ಮೂಲ ಉದ್ದೇಶ ಮರೆತಿದ್ದು, ನೀರಿಲ್ಲದೆ ಬರಡಾಗಿ ನಿಂತಿವೆ.

ನಾಲಾಯದ ಗುಂಡಿ: 40 ಎಕರೆ ಕೃಷಿ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯದ ಗುಂಡಿ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೋಟಿ ರು. ಹೆಚ್ಚಿನ ಮೊತ್ತದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ. 2019ರ ಡಿಸೆಂಬರ್‌ನಲ್ಲಿ ಇದು ಸಚಿವ ಮಾಧು ಸ್ವಾಮಿ ಅವರಿಂದ ಉದ್ಘಾಟನೆಗೊಂಡಿತ್ತು. ಈ ಸಂದರ್ಭ ಇದಕ್ಕೆ ಹಲಗೆ ಅಳವಡಿಸಿ ನೀರು ಶೇಖರಿಸಿದ್ದು ಬಿಟ್ಟರೆ, ಆ ಮೇಲೆ ನೀರು ಶೇಖರಣೆ ಮಾಡುವ ಕೆಲಸ ಇಲ್ಲಿ ನಡೆದಿಲ್ಲ. ಇದರಿಂದಾಗಿ ಈ ಕಿಂಡಿ ಅಣೆಕಟ್ಟು ಜೀಪು, ರಿಕ್ಷಾಗಳಂತಹ ವಾಹನಗಳನ್ನು ಹೋಗಲು ಸಂಪರ್ಕ ಸೇತುವಾಗಿ ಮಾತ್ರ ಬಳಕೆಯಾಗುತ್ತಿದೆ.

Udupi: ಮಹಿಳೆಯ ದೇಹದಿಂದ ವಿಶ್ವದ ಅತಿ ದೊಡ್ಡ ಕಿಡ್ನಿ ಸ್ಟೋನ್ ಹೊರ ತೆಗೆದ ಮಣಿಪಾಲದ ವೈದ್ಯರು

ಈ ಕಿಂಡಿ ಅಣೆಕಟ್ಟಿನ ಸುಮಾರು 300 ಮೀಟರ್‌ ದೂರದಲ್ಲಿ ಹಲವು ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಒಂದೆರಡು ವರ್ಷ ಅಲ್ಲಿ ನೀರು ಶೇಖರಿಸಿದ್ದು, ಬಿಟ್ಟರೆ ಇದೀಗ ಅದು ಕೂಡಾ ಕೇವಲ ಸ್ಮಾರಕಕ್ಕೆ ಸೀಮಿತವಾಗಿದೆ. ಇದರಿಂದ ಲಕ್ಷಾಂತರ ರು. ವ್ಯರ್ಥವಾಗಿದೆ.

ಕೆಮ್ಮಾರ: ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಕೆಮ್ಮಾರದ ನೆಕ್ಕರಾಜೆ ಬಳಿ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಕಿಂಡಿ ಅಣೆಕಟ್ಟು ಇದ್ದರೂ, ಅದಕ್ಕೆ ಹಲಗೆ ಅಳವಡಿಸುವ ಕಾರ್ಯವಾಗಲಿ ನಡೆಯುತ್ತಿಲ್ಲ. ಇದು ಸಂಪರ್ಕ ಸೇತುವಾಗಿಯೂ ಬಳಕೆಯಾಗುತ್ತಿಲ್ಲ. ಇದು ಸಂಪೂರ್ಣ ನಿಷ್ೊ್ರಯೋಜಕವಾಗಿದ್ದು, ಈಗ ಹೊಳೆ ನೀರಲ್ಲಿ ತೇಲಿ ಬಂದ ಮರಗಳು ಡಿಕ್ಕಿ ಹೊಡೆದು ಜಖಂಗೊಂಡಿದೆ. ಈ ಕಾಮಗಾರಿಗೆ ಹಲವು ಲಕ್ಷ ಖರ್ಚಾಗಿದೆಯಾದರೂ ಅಂತರ್ಜಲಕ್ಕೆ ಸಹಕಾರಿಯಾಗಿಲ್ಲ.

ಪಂಚೇರು: ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಪಂಚೇರು ಎಂಬಲ್ಲಿಯೂ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಇಲ್ಲೂ ನೀರು ಶೇಖರಿಸುವ ಕೆಲಸ ನಡೆಯುತ್ತಿಲ್ಲ. ಇದು ಹೊಳೆಗಡ್ಡವಾಗಿ ನಿಂತಿದ್ದರೂ, ಹೊಳೆ ನೀರು ಅದರ ಪಾಡಿಗೆ ಹರಿದು ಹೋಗುತ್ತಿದೆ. ಇದು ಸಂಪರ್ಕ ಸೇತುವೆಯಾಗಿ ಆ ಕಡೆ- ಈ ಕಡೆ ದಾಟಲು ಉಪಯೋಗವಾಗುತ್ತಿದೆ ಅನ್ನುವುದು ಸಮಾಧಾನ.

ಮಠ: ಮಠದ ನೈಕುಳಿ ಎಂಬಲ್ಲಿ ತೋಡೊಂದಕ್ಕೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಕೂಡಾ ಹಲಗೆ ಇಡುವ ಕಾರ್ಯ ನಡೆಯುತ್ತಿಲ್ಲ. ಇದೀಗ ಲಕ್ಷಾಂತರ ರು. ಸಾರ್ವಜನಿಕ ದುಡ್ಡು ಪೋಲಾಗಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ.

‘ಹರಿಯುವ ನೀರನ್ನು ನಿಲ್ಲಿಸಿ. ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳಿಂದ ಕೋಟಿ, ಲಕ್ಷದ ಲೆಕ್ಕದಲ್ಲಿ ಅನುದಾನ ನೀಡಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಅಲ್ಲೆಲ್ಲಾ ಒಂದೆರಡು ವರ್ಷ ಅದರ ಉದ್ದೇಶ ಈಡೇರಿದೆಯೇ ಹೊರತು ಆ ಮೇಲೆ ಅದು ಉಪಯೋಗ ಶೂನ್ಯವಾಗಿದೆ. ಇದಕ್ಕೆ ಮೂಲ ಕಾರಣ ನಿರ್ವಹಣೆಯ ಕೊರತೆ. ಇದರ ನಿರ್ವಹಣೆಯೆಂದರೆ ವರ್ಷಂಪ್ರತಿ ಹೊಳೆಯಲ್ಲಿ ಸ್ವಲ್ಪ ಮಟ್ಟಿನ ನೀರಿನ ಹರಿವು ಇರುವ ನವೆಂಬರ್‌- ಡಿಸೆಂಬರ್‌ ತಿಂಗಳಲ್ಲಿ ಇದಕ್ಕೆ ಹಲಗೆ ಜೋಡಿಸುವುದು. ಹಲಗೆಗಳ ಮಧ್ಯೆ ಮಣ್ಣು ಹಾಕುವುದು. ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯುವುದನ್ನು ಮಾಡುತ್ತಿಲ್ಲ.

ಹೊಂಡಾ ಗುಂಡಿ ರಸ್ತೆಯಲ್ಲೇ ಹೆರಿಗೆ: ಅಭಿವೃದ್ಧಿ ಹೊಂದಿದ ಉಡುಪಿಯಲ್ಲಿ ಇದೆಂಥಾ ಅವ್ಯವಸ್ಥೆ?

ಕಿಂಡಿ ಅಣೆಕಟ್ಟುಗಳಲ್ಲಿ ವಿವಿಧ ಇಲಾಖೆಗೆ ಒಳಪಟ್ಟಹಲವು ಕಿಂಡಿ ಅಣೆಕಟ್ಟುಗಳಿದ್ದು, ಆಯಾಯಾ ಇಲಾಖೆಗಳೇ ಅವುಗಳ ನಿರ್ವಹಣೆಗೆ ಗಮನ ಹರಿಸಬೇಕಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕಿಂಡಿ ಅಣೆಕಟ್ಟುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳು ಬಂದಿರುವುದು ನಿಜ. ಆದರೆ ಈ ಬಾರಿ ಇಲಾಖೆಯ ಅಧೀನದ ಕಿಂಡಿ ಅಣೆಕಟ್ಟುಗಳನ್ನು ಸಕಾಲದಲ್ಲೇ ಹಲಗೆ ಅಳವಡಿಸಿ ನೀರನ್ನು ನಿಲ್ಲಿಸಲು ಕ್ರಮ ಜರುಗಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಲೋಪಗಳೇನಾದರೂ ಉಂಟಾಗಿದ್ದರೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು.

ವಿಷ್ಣು ಕಾಮತ್‌, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌

ನಾಲಯದ ಗುಂಡಿ ಕಿಂಡಿ ಅಣೆಕಟ್ಟು ಸಣ್ಣ ನೀರಾವರಿ ಇಲಾಖಾಧೀನದಲ್ಲಿದ್ದು , ಸದ್ರಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಬಗ್ಗೆ ಇಲಾಖಾಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲಗೆ ಅಳವಡಿಸುವ ಕಾಮಗಾರಿಗೆ ತಕ್ಷಣಕ್ಕೆ ಅಗತ್ಯವಾದ ಹಣ ಒದಗಿಸುವ ಭರವಸೆ ನೀಡಿದ್ದಾರೆ. ಹಣ ಲಭಿಸಿದರೆ ಹಲಗೆ ಅಳವಡಿಸುವ ಕಾರ್ಯ ಬೇಗನೇ ನಡೆಸಲಾಗುವುದು

ಸುರೇಶ್‌ ಅತ್ರಮಜಲು ಗ್ರಾ. ಪಂ. ಸದಸ್ಯ

ನಾಲಯದ ಗುಂಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಸಂಬಂಧ ಸ್ಥಳೀಯರಲ್ಲಿ ಮಾತುಕತೆ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಚಾಲನೆಗೆ ಬರಲಿದೆ. ಆದರೆ ಪಂಚೇರು ಕಿಂಡಿ ಅಣೆಕಟ್ಟಿಗೆ ಅಳವಡಿಸಲು ಹಲಗೆಯನ್ನು ಹೊಸದಾಗಿ ಖರೀದಿಸಬೇಕಾಗಿರುವುದರಿಂದ ಕೊಟೇಷನ್‌ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಕೋಟೇಶನ್‌ ಪ್ರಕ್ರಿಯೆ ತೃಪ್ತಿಕರವಾಗಿ ನಡೆದರೆ ಪಂಚೇರು ಕಿಂಡಿ ಅಣೆಕಟ್ಟಿಗೂ ಈ ಬಾರಿ ಹಲಗೆ ಅಳವಡಿಸುವ ಕಾರ್ಯ ನಡೆಯುತ್ತದೆ.

ರಾಕೇಶ್‌, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌

Follow Us:
Download App:
  • android
  • ios