Asianet Suvarna News Asianet Suvarna News

ಹುಲಿಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಬಿಡಿಗಾಸು ನೀಡದ ರಾಜ್ಯ ಸರ್ಕಾರ: ಆರೋಪ

ಸಮೀಪದ ಹುಲಿಗಿ ಗ್ರಾಮಕ್ಕೆ ರೈಲ್ವೆ ಮೇಲ್ಸೇತುವೆ ಮಂಜೂರಾಗಿ ಮೂರು ವರ್ಷಗಳು ಕಳೆದರೂ ಇನ್ನುವರೆಗೆ ರಾಜ್ಯ ಸರ್ಕಾರವು ಮೇಲ್ಸೇತುವೆ ನಿರ್ಮಾಣಕ್ಕೆ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ.

The state government did not provide money for Huligi railway flyover work at munirabad rav
Author
First Published Aug 13, 2023, 8:05 PM IST

ಎಸ್‌.ನಾರಾಯಣ

ಮುನಿರಾಬಾದ್‌ (ಆ.13) :  ಸಮೀಪದ ಹುಲಿಗಿ ಗ್ರಾಮಕ್ಕೆ ರೈಲ್ವೆ ಮೇಲ್ಸೇತುವೆ ಮಂಜೂರಾಗಿ ಮೂರು ವರ್ಷಗಳು ಕಳೆದರೂ ಇನ್ನುವರೆಗೆ ರಾಜ್ಯ ಸರ್ಕಾರವು ಮೇಲ್ಸೇತುವೆ ನಿರ್ಮಾಣಕ್ಕೆ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ.

ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಅದಕ್ಕೆ ತಗಲುವ ವೆಚ್ಚದಲ್ಲಿ ರೈಲ್ವೆ ಇಲಾಖೆ ಅರ್ಧದಷ್ಟುವೆಚ್ಚ ಭರಿಸಬೇಕು. ಸಂಬಂಧಪಟ್ಟರಾಜ್ಯ ಸರ್ಕಾರವು ಮಿಕ್ಕ ಅರ್ಧದಷ್ಟುವೆಚ್ಚ ಭರಿಸುವ ಪದ್ಧತಿ ಇದೆ.

ಹುಲಿಗಿ ಮೇಲ್ಸೇತುವೆ ನಿರ್ಮಾಣಕ್ಕೆ .40 ಕೋಟಿ ವೆಚ್ಚವಾಗಲಿದೆ. ಕಳೆದ ಎರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆಯು ತನ್ನ ಪಾಲಿನ .20 ಕೋಟಿ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದುವರೆಗೂ ಹುಲಿಗಿ ಗ್ರಾಮದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಂದು ಪೈಸೆ ಬಿಡಿಗಾಸನ್ನೂ ಮಂಜೂರು ಮಾಡಿಲ್ಲ. ಇದರಿಂದ ಹುಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ನಾಲ್ಕು ತಾಸು ಕಾದರೂ ನಿಲ್ಲಿಸದ ಬಸ್‌: ಬೇಸರದಿಂದ ಕಲ್ಲೆಸೆದ ಮಹಿಳೆ..!

ಹುಲಿಗಿಯಲ್ಲಿ ಹುಲಿಗೆಮ್ಮ ದೇವಸ್ಥಾನವಿದೆ. ದೇವಿದರ್ಶನ ಪಡೆಯಲು ಇದೇ ರೈಲ್ವೆ ಗೇಟ್‌ ಮಾರ್ಗವಾಗಿ ದೇಗುಲಕ್ಕೆ ತೆರಳಬೇಕಿದೆ. ದೇವಿ ದರ್ಶನ ನಂತರ ಮತ್ತೆ ಇದೇ ರೈಲ್ವೆ ಗೇಟ್‌ ಮೂಲಕ ತಮ್ಮ ಊರಿಗಳಿಗೆ ವಾಪಸಾಗಬೇಕಿದ್ದು, ಮೇಲ್ಸೇತುವೆ ತೀರಾ ಅಗತ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ಮೇಲ್ಸೇತುವೆ ಏಕೆ ಬೇಕು?:

ಇತ್ತೀಚಿನ ದಿನಗಳಲ್ಲಿ ಹುಲಿಗೆಮ್ಮ ದೇವಿ ದರ್ಶನ ಮಾಡಲು ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಕನಿಷ್ಠ 30ರಿಂದ 40ಸಾವಿರ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆಯಂದು ಭಕ್ತರ ಸಂಖ್ಯೆ ಒಂದು ಲಕ್ಷ ದಾಟುತ್ತದೆ.

ಟ್ರಾಫಿಕ್‌ ಜಾಮಲ್ಲಿ ಒದ್ದಾಡುವ ಭಕ್ತರು:

ಹುಲಿಗಿಯ ರೈಲ್ವೆ ಗೇಟ್‌ನ್ನು ಪ್ರತಿ 20 ನಿಮಿಷಕ್ಕೊಮ್ಮೆ ಬಾರಿ ಬಂದ್‌ ಮಾಡಲಾಗುತ್ತದೆ. ಆಗ ರೈಲ್ವೆ ಗೇಟ್‌ನ ಎರಡು ಬದಿಯಲ್ಲಿ ಸಹಸ್ರಾರು ಜನರು, ವಾಹನಗಳು ನಿಂತು ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಇದರಿಂದ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಹುಲಿಗಿ, ಸುತ್ತಮುತ್ತಲಿನ ಗ್ರಾಮಗಳ ಜನತೆ ಕೊಪ್ಪಳ, ಹೊಸಪೇಟೆಗೆ ತೆರಳಬೇಕಾದರೆ ಈ ರೈಲ್ವೆ ಗೇಟ್‌ ಮೂಲಕವೇ ಹಾದು ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ವಾಹನ ಸವಾರರು ಸಾಕಷ್ಟುಸಮಸ್ಯೆ ಅನುಭವಿಸುತ್ತಿದ್ದಾರೆ.

ಹುಲಿಗೆಮ್ಮದೇವಿ ದೇವಸ್ಥಾನವು ಸರ್ಕಾರದ ಅಧೀನದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಿದೆ. ವಾರ್ಷಿಕ ಆದಾಯವು .12 ಕೋಟಿ ಆಸುಪಾಸಿನಲ್ಲಿದೆ. ಇಂತಹ ಪ್ರಸಿದ್ಧ ದೇವಸ್ಥಾನಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಭಾಗ್ಯ ನೀಡುವ ನಿಟ್ಟಿನಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿರುವುದಕ್ಕೆ ಸಾರ್ವಜನಿಕರು, ಭಕ್ತರು ಆಕ್ರೋಶಗೊಂಡಿದ್ದಾರೆ.

ಹುಲಿಗಿ ಗ್ರಾಮದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದದಿಂದ ಬಿಡುಗಡೆಯಾಗಬೇಕಾಗಿದ್ದ ಹಣವನ್ನು ಸಂಬಂಧಪಟ್ಟಅಧಿಕಾರಿಗಳೊಂದಿಗೆ ಮಾತನಾಡಿ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವೆ.

-ರಾಘವೇಂದ್ರ ಹಿಟ್ನಾಳ್‌, ಶಾಸಕ

ಕಾರಹುಣ್ಣಿಮೆ ದಿನ ಹುಲಿಗೆಮ್ಮ ದರ್ಶನಕ್ಕೆ 1.5 ಲಕ್ಷ ಭಕ್ತರು! 

ಸರ್ಕಾರವು ಗ್ಯಾರಂಟಿ ಯೋಜನೆಗಳಲ್ಲಿ ತುಂಬ ಬಿಜಿಯಾಗಿದೆ. ಹುಲಿಗಿ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಣ ಮಂಜೂರಾತಿ ಮಾಡಬೇಕು.

-ಪ್ರಭುರಾಜ್‌ ಪಾಟೀಲ್‌, ಹುಲಿಗೆ ಗ್ರಾಮಸ್ಥ

 

Follow Us:
Download App:
  • android
  • ios