ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು 'ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ' ಎಂದು ಬದಲಾಯಿಸಲಾಗಿದೆ. ಆದರೆ, ಹೊಸ ಹೆಸರಿನಲ್ಲಿ 'ಕರ್ನಾಟಕ' ಪದವನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ಯ ಹೆಸರು ಬದಲಾವಣೆಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಆದರೆ, ಈ ಮರುನಾಮಕರಣದಲ್ಲಿ ಸಂಸ್ಥೆಯ ಹೆಸರಿನಲ್ಲಿದ್ದ ‘ಕರ್ನಾಟಕ’ ಪದವನ್ನೇ ಕೈಬಿಟ್ಟು ‘ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ’ ಎಂದು ನಾಮಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಬದಲಾವಣೆಯ ಬೆನ್ನಲ್ಲೇ ವಾಯವ್ಯ ಕರ್ನಾಟಕ ಸಂಸ್ಥೆಗೂ ಹೊಸ ಹೆಸರು ನೀಡಬೇಕೆಂಬ ಬೇಡಿಕೆ ಕೇಳಿ ಬಂದಿತ್ತು. 2021ರಲ್ಲೇ ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. 2025ರ ಫೆಬ್ರವರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಠರಾವು ಅಂಗೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಶುಕ್ರವಾರ ಸರ್ಕಾರ ಈ ಆದೇಶ ಹೊರಡಿಸಿದೆ.
ಆದರೆ, ನಾಡಿನ ಹೆಸರನ್ನೇ ಕೈಬಿಟ್ಟು ಸಂಸ್ಥೆಗೆ ಮರುನಾಮಕರಣ ಮಾಡುವ ಔಚಿತ್ಯವೇನು? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಹೆಸರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಗೌರವವಿರಲಿ. ಆದರೆ, ಕರ್ನಾಟಕದ ಅಸ್ಮಿತೆಯೂ ಉಳಿಯಲಿ ಎಂಬ ಒತ್ತಾಯ ಕೇಳಿ ಬಂದಿದೆ. ನಿರ್ಲಕ್ಷ್ಯ ತೋರಿದಲ್ಲಿ ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.
ಹೆಸರಿಗೇಕೆ ಕೊಕ್?
ಸಂಸ್ಥೆಯ ವ್ಯಾಪ್ತಿ ಕೇವಲ ಕಿತ್ತೂರು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹು-ಧಾ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಸಾರಿಗೆ ವ್ಯವಸ್ಥೆಯನ್ನು ಇದು ನಿರ್ವಹಿಸುತ್ತದೆ. ಹೀಗಿರುವಾಗ ‘ಕಿತ್ತೂರು’ ಪ್ರದೇಶದ ಹೆಸರನ್ನು ಮುಂಚೂಣಿಗೆ ತಂದು, ಇಡೀ ರಾಜ್ಯವನ್ನು ಪ್ರತಿನಿಧಿಸುವ ‘ಕರ್ನಾಟಕ’ ಪದವನ್ನೇ ಕೈಬಿಟ್ಟಿರುವುದು ಎಷ್ಟು ಸಮಂಜಸ ಎಂಬ ಚರ್ಚೆ ಆರಂಭವಾಗಿದೆ. ನಾಡಿನ ಹೆಸರನ್ನು ಉಳಿಸಿಕೊಂಡೇ ರಾಣಿ ಚೆನ್ನಮ್ಮನ ಹೆಸರನ್ನೂ ಗೌರವಿಸುವ ಅವಕಾಶವಿದ್ದರೂ ಸರ್ಕಾರ ಅದನ್ನು ಏಕೆ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಹೆಸರು ಬದಲಾವಣೆಗೆ ₹10 ಕೋಟಿ ವೆಚ್ಚ!
ಮರುನಾಮಕರಣ ಕೇವಲ ಹೆಸರಿನ ಬದಲಾವಣೆಗೆ ಸೀಮಿತವಾಗಿಲ್ಲ. ಸಂಸ್ಥೆಯ 5,200 ಬಸ್, 176 ಬಸ್ ನಿಲ್ದಾಣ, 9 ವಿಭಾಗೀಯ ಕಚೇರಿ, 58 ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಚೇರಿಗಳ ನಾಮಫಲಕ ಬದಲಿಸಬೇಕಿದೆ. ಟಿಕೆಟ್, ವೇಬಿಲ್, ಸೀಲ್, ಕಡತ, ರಿಜಿಸ್ಟರ್, ಪರವಾನಗಿ, ದಾಖಲೆ ಮತ್ತು ಸಾಫ್ಟ್ವೇರ್ಗಳಲ್ಲೂ ಹೆಸರು ಬದಲಾವಣೆ ಅನಿವಾರ್ಯ. ಈ ಪ್ರಕ್ರಿಯೆಗೆ ಆರೆಂಟು ತಿಂಗಳು ಬೇಕಾಗಲಿದ್ದು, ₹9.96 ಕೋಟಿ ವೆಚ್ಚವಾಗಲಿದೆ.














