ಶಿರಗುಪ್ಪಿ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹4,000 ದರ ಘೋಷಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಮೊದಲ ಕಂತಾಗಿ ₹3,700 ಪಾವತಿಸಲಾಗುವುದು ಎಂದು ತಿಳಿಸಲಾಗಿದೆ. ಇದರಿಂದ ಜಿಲ್ಲೆಯ ಇತರೆ ಕಾರ್ಖಾನೆಗಳ ದರ ನಿಗದಿಯ ಬಗ್ಗೆ ರೈತರಲ್ಲಿ ಹೊಸ ಪ್ರಶ್ನೆಗಳು ಮೂಡಿವೆ.
ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿರುವ ಶಿರಗುಪ್ಪಿ ಶುಗರ್ ವರ್ಕ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯು 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಒಟ್ಟು ₹4,000 ದರ ಘೋಷಿಸುವ ಮೂಲಕ ಕಬ್ಬು ಬೆಳೆಗಾರರಿಗೆ ದೀಪಾವಳಿ ಹಬ್ಬದ ಸಿಹಿ ಸುದ್ದಿ ನೀಡಿದೆ. ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಅವರು ಅಧಿಕೃತ ಸುತ್ತೋಲೆ ಹೊರಡಿಸಿ, ಪತ್ರಿಕಾಗೋಷ್ಠಿಯಲ್ಲಿ ದರ ಘೋಷಿಸಿದರು. ಪ್ರಸಕ್ತ ಸಾಲಿನಲ್ಲಿ ಅತ್ಯಲ್ಪ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಬ್ಬಿನ ಬೆಳೆ ಪರಿಸ್ಥಿತಿ ಹಾಗೂ ಇಳುವರಿಯನ್ನು ಪರಿಶೀಲಿಸಿ, ಆಡಳಿತ ಮಂಡಳಿಯು ಕಂತುಗಳಲ್ಲಿ ದರ ಪಾವತಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ವಿವಿಧ ಹಂತಗಳಲ್ಲಿ 4 ಸಾವಿರ ರೂಪಾಯಿ ಪಾವತಿ
ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಾಗಿ ಪ್ರತಿ ಮೆಟ್ರಿಕ್ ಟನ್ಗೆ ₹3,700 ಪಾವತಿಸಲಾಗುವುದು. ಹಂಗಾಮು ಮುಕ್ತಾಯದ ಬಳಿಕ ಎರಡನೇ ಕಂತಿನಲ್ಲಿ ₹100 ಹಾಗೂ ಮುಂದಿನ ಹಂಗಾಮು ಆರಂಭಕ್ಕೂ ಮುನ್ನ ಸಕ್ಕರೆ ಮಾರಾಟ ದರ ₹50 ತಲುಪಿದಲ್ಲಿ ಮೂರನೇ ಕಂತಿನಲ್ಲಿ ₹200 ಪಾವತಿಸಲಾಗುವುದು. ಈ ಮೂಲಕ ಒಟ್ಟು ₹4,000 ದರ ನೀಡಲಾಗುವುದು ಎಂದು ಮಗೆಣ್ಣವರ ವಿವರಿಸಿದರು.
ಮತ್ತೊಂದೆಡೆ ಜಿಲ್ಲಾಡಳಿತ ಪ್ರಕಟಿಸಿರುವ ಕಬ್ಬಿನ ದರಪಟ್ಟಿಯನ್ನು ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳು ತಮ್ಮ ಸೂಚನಾ ಫಲಕಗಳಲ್ಲಿ ಅಳವಡಿಸಿವೆ. ನವೆಂಬರ್ 4ರಂದು ನಡೆದ ಸಭೆಯ ಒಪ್ಪಂದದಂತೆ ಮೊದಲ ಕಂತಿನಲ್ಲಿ ಪ್ರತಿ ಟನ್ಗೆ ₹3,500 ಪಾವತಿಸಬೇಕು. ಹಂಗಾಮು ಮುಕ್ತಾಯದ ಬಳಿಕ ಎರಡನೇ ಕಂತಿನಲ್ಲಿ ₹100 ಹೆಚ್ಚುವರಿಯಾಗಿ ನೀಡಬೇಕು. ಹೊಸ ಹಂಗಾಮು ಆರಂಭವಾಗುವ ಮೊದಲು ಸಕ್ಕರೆಯ ಸರಾಸರಿ ಮಾರುಕಟ್ಟೆ ದರದ ಆಧಾರದ ಮೇಲೆ ಅಂತಿಮ ಹೆಚ್ಚುವರಿ ಮೊತ್ತ ಪಾವತಿಸುವ ಸೂತ್ರ ರೂಪಿಸಲಾಗಿದೆ.
ಒಂದಿಷ್ಟು ಪ್ರಶ್ನೆಗಳು
ಜಿಲ್ಲಾಡಳಿತ ಪ್ರಕಟಿಸಿರುವ ದರಪಟ್ಟಿ ಹಾಗೂ ಶಿರಗುಪ್ಪಿ ಕಾರ್ಖಾನೆಯ ಪ್ರತ್ಯೇಕ ದರ ಘೋಷಣೆಯಿಂದ ರೈತರಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. ₹4,000 ದರ ನೀಡುವ ಸಾಮರ್ಥ್ಯ ಒಂದು ಕಾರ್ಖಾನೆಗೆ ಇದ್ದರೆ, ಜಿಲ್ಲೆಯ ಉಳಿದ ಕಾರ್ಖಾನೆಗಳೂ ರೈತರಿಗೆ ಅದೇ ರೀತಿಯ ದರ ನೀಡಲು ಸಾಧ್ಯವಿಲ್ಲವೇ? ಸಕ್ಕರೆಯ ಮಾರುಕಟ್ಟೆ ದರದ ಆಧಾರದ ಮೇಲೆ ಹೆಚ್ಚುವರಿ ಹಣ ಪಾವತಿಸುವ ಸೂತ್ರ ರೈತರಿಗೆ ಎಷ್ಟರಮಟ್ಟಿಗೆ ಅನುಕೂಲವಾಗಲಿದೆ? ಘೋಷಿತ ಮೊತ್ತ ರೈತರ ಕೈಗೆ ತಲುಪುವ ಸಮಯ ಯಾವುದು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.














