ಅಪಘಾತ-ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕು
ನಗರದ ವಿವಿಧ ರಸ್ತೆಗಳಲ್ಲಿ ವ್ಯಾಪಾರಸ್ಥರು ಪುಟ್‌ಪಾತ್ ಆಕ್ರಮಿಸಿಕೊಂಡು ವ್ಯಾಪಾರ ಮಾಡುವುದರಿಂದ ಪಾದಚಾರಿಗಳಿಗೆ ತೊಂದರೆಯಾಗಿ ರಸ್ತೆಗಳ ಮೇಲೆ ಬರುವುದರಿಂದ ಅಪಘಾತ ಹೆಚ್ಚುತ್ತಿದ್ದು, ಪುಟ್‌ಪಾತ್ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿರುವುದು, ತಡವಾಗಿಯಾದರೂ ಜ್ಞಾನೋದಯವಾದಂತಿದೆ ಎಂದು ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು:ನಗರದ ವಿವಿಧ ರಸ್ತೆಗಳಲ್ಲಿ ವ್ಯಾಪಾರಸ್ಥರು ಪುಟ್‌ಪಾತ್ ಆಕ್ರಮಿಸಿಕೊಂಡು ವ್ಯಾಪಾರ ಮಾಡುವುದರಿಂದ ಪಾದಚಾರಿಗಳಿಗೆ ತೊಂದರೆಯಾಗಿ ರಸ್ತೆಗಳ ಮೇಲೆ ಬರುವುದರಿಂದ ಅಪಘಾತ ಹೆಚ್ಚುತ್ತಿದ್ದು, ಪುಟ್‌ಪಾತ್ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿರುವುದು, ತಡವಾಗಿಯಾದರೂ ಜ್ಞಾನೋದಯವಾದಂತಿದೆ ಎಂದು ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಪಾದಚಾರಿ ಮಾರ್ಗಗಳನ್ನು ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವ ವಿಚಾರ ಸಂಬಂಧಿಸಿದ ಅಧಿಕಾರಿಗಳು-ಜನಪ್ರತಿನಿಧಿಗಳ ಗಮನಕ್ಕೆ ಇದುವರಗೂ ಬಾರದಿರುವುದು ದುರದೃಷ್ಟಕರ.
ಇದಕ್ಕೆ ಕಾರಣ ಈ ಅಧಿಕಾರಿಗಳು-ಜನಪ್ರತಿನಿಧಿಗಳು ಪಾದಚಾರಿಗಳಲ್ಲ! ಸರ್ಕಾರದ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಾ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಅಧಿಕಾರ ಚಲಾಯಿಸುವ ಅಧಿಕಾರಿಗಳ ಕಣ್ಣಿಗೆ ಪಾದಚಾರಿಗಳ ಕಷ್ಟದ ಅರಿವಾಗುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ಹೃದಯ ಭಾಗವಾದ ಕೆ.ಆರ್. ವೃತ್ತದ ಪಾದಚಾರಿ ಮಾರ್ಗದಿಂದ ಸಯ್ಯಾಜಿ ರಾವ್ ರಸ್ತೆಯ ಉದ್ದಕ್ಕೂ ಇರುವ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳು ಸಂಚರಿಸಲು ಸಾಧ್ಯವೇ ಇಲ್ಲ.
ಪಾದಚಾರಿ ಮಾರ್ಗವನ್ನು ಅಕ್ರಮವಾಗಿ ಆಕ್ರಮಿಸಿ ವ್ಯಾಪಾರ ಮಾಡುವ ಅಕ್ರಮಾದಿತ್ಯರಿಂದ ಕಪ್ಪಕಾಣಿಕೆ ಸ್ವೀಕರಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮನಃಪರಿವರ್ತನೆಯಾಗದೆ ಈ ಸಮಸ್ಯೆ ಬಗೆಹರಿಯದು.
ನಗರದ ಹಲವೆಡೆ ನಗರ ಪಾಲಿಕೆ ಅಧಿಕಾರಿಗಳೇ ಪಾದಚಾರಿ ಮಾರ್ಗವನ್ನು ಸಮತಟ್ಟು ಮಾಡಿ ಸಾಹುಕಾರರ ಕಾರುಗಳು ನಿಲ್ಲಲು ಅನುಕೂಲ ಮಾಡಿಕೊಟ್ಟಿದ್ದಾರೆ. ನ್ಯಾಯಾಲಯದ ಪಕ್ಕ ಇರುವ ಟೆನ್ನಿಸ್ ಕೋರ್ಚ್ ಎದುರು ಇರುವ ಪಾದಚಾರಿ ಮಾರ್ಗ ಈ ಅಧಿಕಾರಿಗಳ ಇಂತಹ ಬೇಜವಾಬ್ದಾರಿಗೆ ಬಲಿಯಾಗಿದೆ ಎಂದು ತಿಳಿಸಿದ್ದಾರೆ.
ಕುವೆಂಪುನಗರದ ಡಾ. ಹೆಡಗೇವಾರ್ ವೃತ್ತದಿಂದ ಎಂ. ಬ್ಲಾಕ್‌ಗೆ ಹೋಗುವ ನೃಪತುಂಗ ರಸ್ತೆಯ ಎಡ ಭಾಗದಲ್ಲಿದ್ದ ಪಾದಚಾರಿ ಮಾರ್ಗವನ್ನು ನಗರ ಪಾಲಿಕೆಯೇ ನಿರ್ನಾಮ ಮಾಡಿ ಅಪರಾಧ ಎಸಗಿದೆ. ಈ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಪ್ರತಿಕ್ಷಣವೂ ನಗರ ಪಾಲಿಕೆ, ಪೊಲೀಸ್ ಹಾಗೂ ಜಿಲ್ಲಾಡಳಿತವನ್ನು ಶಪಿಸುತ್ತಲೇ ಜೀವಭಯದಿಂದ ಸಂಚರಿಸುತ್ತಿದೆ.
ಕಾಯುವವನೇ ಕೊಲ್ಲುವವನಾದರೆ, ರಕ್ಷಕನೇ ಭಕ್ಷಕನಾದರೆ ಪಾದಚಾರಿಗಳನ್ನು ರಕ್ಷಿಸುವವರಾರು? ಪಾದಚಾರಿ ಮಾರ್ಗದ ಜಾಗವನ್ನು ನಗರ ಪಾಲಿಕೆಯೇ ಅಕ್ರಮಾದಿತ್ಯರ ಸುಪರ್ದಿಗೆ ನೀಡಿ ಪಾದಚಾರಿ ಮಾರ್ಗವನ್ನು ನಿರ್ನಾಮ ಮಾಡಿದರೆ, ಪಾದಚಾರಿಗಳು ರಸ್ತೆಗಿಳಿಯದಿರಲು ಸಾಧ್ಯವೇ?
ರಸ್ತೆಗಿಳಿದ ಪಾದಚಾರಿಗಳು ಅಪಘಾತ-ಅನಾಹುತಕ್ಕೀಡಾಗದಿರಲು ಸಾಧ್ಯವೇ? ಈ ಅಪಘಾತ-ಅನಾಹುತಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಹೊಣೆಯಲ್ಲವೇ?
ಬೇರೆಯವರು ದೌರ್ಜನ್ಯ ಎಸಗಿದರೆ ನಗರ ಪಾಲಿಕೆಗೆ ದೂರಬಹುದು. ಪಾಲಿಕೆಯೇ ದೌರ್ಜನ್ಯ ಎಸಗಿದರೆ ಯಾರಲ್ಲಿ ದೂರುವುದು? ದ್ವಿಚಕ್ರ ವಾಹನಗಳಲ್ಲಿ ಕಾಲೇಜಿಗೆ ಬಂದು ಹೋಗುವ ಅಪ್ರಾಪ್ತ ವಯಸ್ಸಿನ ಬಾಲಕರು ರಾಜಾರೋಷವಾಗಿ ಕಾಲೇಜುಗಳ ಎದುರೇ ಸಂಚರಿಸುತ್ತಿದ್ದರೂ ಕಾಲೇಜಿನ ಆಡಳಿತ ಮಂಡಳಿಯಾಗಲೀ ಪೊಲೀಸರಾಗಲೀ ಪೋಷಕರಾಗಲೀ ಎಚ್ಚೆತ್ತುಕೊಂಡಿಲ್ಲ. ಹೆಣ ಬೀಳುವವರೆಗೆ ಇವರಿಗೆ ಎಚ್ಚರವಾಗುವುದೇ ಇಲ್ಲ. ಕಾಲೇಜುಗಳ ಎದುರು ಸಾಲಾಗಿ ನಿಂತಿರುವ ದ್ವಿಚಕ್ರವಾಹನಗಳೇ ಇದಕ್ಕೆ ಸಾಕ್ಷಿ!
ಇದುವರೆಗೆ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿಗಳು ಕೂಪಮಂಡೂಕದಂತೆ ಕಾರ್ಯ ನಿರ್ವಹಿಸುತ್ತಿದ್ದರು. ಈಗಿನ ಜಿಲ್ಲಾಧಿಕಾರಿಗಳಾದರೂ ಎಚ್ಚೆತ್ತುಕೊಂಡಿದ್ದು ಒಳ್ಳೆಯ ಬೆಳವಣಿಗೆ. ಈ ಕೂಡಲೇ ಮೈಸೂರಿನ ಪಾದಚಾರಿ ಮಾರ್ಗಗಳನ್ನು ಅಕ್ರಮಾದಿತ್ಯರ ವಶದಿಂದ ಬಿಡುಗಡೆಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗಳು ಇಟ್ಟದಿಟ್ಟಹೆಜ್ಜೆಗೆ ಯಶಸ್ಸು ಸಿಗಲಿ ಎಂದು ಆಶಿಸಿದ್ದಾರೆ.
ಪಾದಚಾರಿ ಮಾರ್ಗವನ್ನು ಆಕ್ರಮಿಸಿದ ಅಕ್ರಮಾದಿತ್ಯರಿಂದ ಕಪ್ಪಕಾಣಿಕೆ ಪಡೆಯುತ್ತಾ ಅಕ್ರಮಕ್ಕೆ ನೀರೆರೆಯುತ್ತಿದ್ದ ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಮಾಡದ ಹೊರತು ಪಾದಚಾರಿಗಳಿಗೆ ಈ ಸಮಸ್ಯೆಯಿಂದ ಮುಕ್ತಿ ಇಲ್ಲ ಎಂದಿದ್ದಾರೆ.