ಮಂಡ್ಯ(ಫೆ.27): ನಾಲ್ಕು ವರ್ಷದ ಮಗು ಮನಸ್ವಿ ತಲಸೀಮಿಯಾ ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ರೋಗ ಬಾಧೆಯಿಂದ ಮಗುವಿಗೆ 15 ದಿನಕ್ಕೊಮ್ಮೆ ದೇಹದ ರಕ್ತವನ್ನು ಬದಲಾವಣೆ ಮಾಡಬೇಕು. ಮಗುವಿನ ಶಸ್ತ್ರಚಿಕಿತ್ಸೆಗೆ 20 ರಿಂದ 30 ಲಕ್ಷ ವೆಚ್ಚವಾಗಲಿದೆ. ಇದಕ್ಕಾಗಿ ದಾನಿಗಳು ಮಗುವಿನ ಸಹಾಯಕ್ಕೆ ನೆರವು ನೀಡಬೇಕು ಎಂದು ತಾಲೂಕಿನ ಹಾಡ್ಯ ಗ್ರಾಮದ ಸುಧಾಕರ್‌ ಮತ್ತು ಭಾವನಿ ದಂಪತಿ ಮನವಿ ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌ ಮತ್ತು ಭಾವನಿ, ಮಗುವಿನ ಆರೋಗ್ಯ ಸುಧಾರಣೆಗೆ ಚಿಕಿತ್ಸೆಗಾಗಿ ಸಾಕಷ್ಟುಹಣ ಖರ್ಚು ಮಾಡಿದ್ದೇವೆ. ಮಗಳು ಹಿಂಸೆ ಪಡುವುದನ್ನು ನೋಡುವುದು ಕಷ್ಟವಾಗಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ವೈದ್ಯರು ಸಲಹೆ ನೀಡಿದ್ದಾರೆ. ಮೇಜರ್‌ ಆಪರೇಷನ್‌ ಮಾಡಿಸಲು ಅಂದಾಜು 30 ಲಕ್ಷ ರು. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ದಾನಿಗಳು ಮಗುವಿನ ಸಹಾಯಕ್ಕೆ ಬರಬೇಕು ಎಂದು ಕೈ ಮುಗಿದು ವಿನಂತಿ ಮಾಡಿದರು.

8ರ ಆಯಸ್ಸಿಗೆ ಲೋಕ ಬಿಟ್ಟೆಯಾ?: ಪುಟ್ಟ ಕಂದನ ಬದುಕು ಕಸಿದ ಪ್ರೊಜೆರಿಯಾ!

ಮನಸ್ವಿ ಹುಟ್ಟಿದ 3 ತಿಂಗಳಿಗೆ ಈ ಕಾಯಿಲೆ ಕಾಣಿಸಿಕೊಂಡಿದೆ. ರೈತ ಕುಟುಂಬದಿಂದ ಬಂದ ನಾವು ಆರ್ಥಿಕವಾಗಿ ಅಷ್ಟೇನು ಪ್ರಬಲರಾಗಿಲ್ಲ. 15 ರಿಂದ 20 ದಿನಕ್ಕೊಮ್ಮೆ ಮನಸ್ವಿಗೆ ಇದ್ದಕ್ಕಿದ್ದಂತೆ ರಕ್ತ ಕಡಿಮೆಯಾಗುತ್ತದೆ. ಇದಕ್ಕೆ ಪ್ರತಿ 15 ದಿನಕ್ಕೊಮ್ಮೆ 4 ರಿಂದ 5 ಸಾವಿರ ವೆಚ್ಚ ತಗುಲುತ್ತಿದೆ. ಅಸ್ಥಿ ಮಜ್ಜೆಯನ್ನು ಟ್ರಾನ್ಸ್‌ಪ್ಲೆಂಟ್‌ ಮಾಡುವುದೊಂದೇ ಪರಿಹಾರ ಎಂದು ವೈದ್ಯರು ಸೂಚಿಸಿರುವುದಾಗಿ ತಿಳಿಸಿದರು.

ಬೆಂಗಳೂರಿನ ಎಚ್‌.ಸಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಇದುವರೆಗೂ ಸುಮಾರು 5 ಲಕ್ಷ ರು.ಗಳು ಖರ್ಚಾಗಿದೆ. ಇನ್ನು ಮುಂದೆ ನಾರಾಯಣ ಕ್ಯಾನ್ಸರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನಿಸಿದ್ದೇವೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಬಂದಿದೆ. ಇನ್ನು ಹೆಚ್ಚಿನ ಹಣ ಬೇಕಾಗಿರುವುದರಿಂದ ದಾನಿಗಳು ನಮ್ಮ ಮಗುವಿಗೆ ಸಹಾಯ ನೀಡಬೇಕು ಎಂದು ಸುಧಾಕರ್‌ ಕೋರಿದರು.

ಈ ಸಲ ಕಪ್‌ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ

ಮಂಡ್ಯ ತಾಲೂಕು ಹೊಳಲು ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಪತ್ನಿ ಪಿ.ಕೆ.ಭವಾನಿ, ಪುತ್ರಿ ಮನಸ್ವಿ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲಾಗಿದೆ. ಅಕೌಂಟ್‌ ನಂಬರ್‌ 39024499683, ಐಎಫ್‌ಎಸ್‌ಸಿ ಕೋಡ್‌ ಸಂಖ್ಯೆ: ಎಸ್‌ಬಿಐ ಎನ್‌0040326. ಸಹಾಯ ಮಾಡುವ ದಾನಿಗಳು ಈ ಖಾತೆಗೆ ಹಣ ಕಳಿಸಬಹುದು. ಹೆಚ್ಚಿನ ವಿವರಕ್ಕೆ 9538716450 ಸಂಪರ್ಕಿಸಬಹುದು.