ಕಿಯೆವ್(ಫೆ.15): ಅಪರೂಪದ ಆನುವಂಶಿಕ ಪ್ರೊಜೆರಿಯಾ ಕಾಯಿಲೆಯಿಂದ ಬಳಲುತ್ತಿದ್ದ ಉಕ್ರೇನ್’ನ ಎಂಟು ವರ್ಷದ ಬಾಲಕಿ ಅನ್ನಾ ಸಕಿಡಾನ್ ವೃದ್ಧಾಪ್ಯದಿಂದ ಅಸುನೀಗಿದ್ದಾಳೆ.

ಅನ್ನಾ ಸಕಿಡಾನ್ 8 ವರ್ಷದ ಬಾಲಕಿಯಾಗಿದ್ದರೂ ಆಕೆಯ ಜೈವಿಕ ಆಯಸ್ಸು 80ರ ಆಸುಪಾಸಿನಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅನ್ನಾ ಸಕಿಡಾನ್ ಕೇವಲ ಕಳೆದ ತಿಂಗಳಷ್ಟೇ ತನ್ನ ಎಂಟನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. 

ಅಕಾಲಿಕ ವಯಸ್ಸಾದ ಸ್ಥಿತಿಗೆ ತಲುಪಿದ್ದ ಆಂತರಿಕ ಅಂಗಗಳ ವೈಫಲ್ಯದಿಂದ ಅನ್ನಾ ಸಕಿಡಾನ್ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 

ಅನ್ನಾ ಸಕಿಡಾನ್ ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದ್ದ ಫೌಂಡೇಶನ್ ಆಫ್ ಉಕ್ರೇನಿಯನ್ ಮುಖ್ಯಸ್ಥ ಟಿಮೊಫೆ ನಾಗೋರ್ನಿ ಕೂಡ ಅನ್ನಾ ಸಕಿಡಾನ್ ಸಾವಿಗೆ ದು:ಖ ವ್ಯಕ್ತಪಡಿಸಿದ್ದಾರೆ. 

ಪ್ರೊಜೆರಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಒಂದು ವರ್ಷ ಎಂದರೆ ಎಂಟರಿಂದ ಹತ್ತು ವರ್ಷಗಳಿಗೆ ಸಮಾನವಾಗಿರುತ್ತದೆ. ಆದ್ದರಿಂದ ಆಕೆಯ ನಿಜವಾದ ವಯಸ್ಸು ಈಗ 80 ದಾಟಿತ್ತು ಎನ್ನಲಾಗಿದೆ. 

ಸಾಮಾನ್ಯವಾಗಿ ಪ್ರೊಜೆರಿಯಾ ರೋಗಿಗಳು ಪಾರ್ಶ್ವವಾಯುವಿನಿಂದ ಸಾಯುತ್ತಾರೆ. ಅದರಂತೆ ಮೂಳೆಗಳ ಸವೆಯುವಿಕೆಗೆ ತುತ್ತಾದ ಅನ್ನಾ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 

ಅನ್ನಾ ಹುಟ್ಟಿದಾಗಲೇ ಆಕೆಗೆ ಆನುವಂಶಿಕ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ ಇರುವುದು ಪತ್ತೆಯಾಗಿತ್ತು ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. 

ಏನಿದು ಪ್ರೊಜೆರಿಯಾ?:
ಪ್ರೊಜೆರಿಯಾ ರೋಗವನ್ನು ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್, ಪ್ರೊಜೆರಿಯಾ ಅಥವಾ ಎಚ್‌ಜಿಪಿಎಸ್ ಎಂತಲೂ ಕರತೆಯುತ್ತಾರೆ. ಇದು ಅಪರೂಪದ  ಮಾರಣಾಂತಿಕ ಆನುವಂಶಿಕ ಕಾಯಿಲೆಯಾಗಿದೆ.

ಎಳೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಮಾರಕ ರೋಗ ಅವರನ್ನು ಅಕಾಲಿಕ ವೃದ್ಯಾಪಕ್ಕೆ ದೂಡುವುದಲ್ಲದೇ ಅವರ ಪ್ರಾಣವನ್ನು ತೆಗೆಯುತ್ತದೆ. ಇದನ್ನು ಮೊದಲು ಇಂಗ್ಲೆಂಡ್‌ ವೈದ್ಯರಾದ ಡಾ. ಜೊನಾಥನ್ ಹಚಿನ್ಸನ್ 1886ರಲ್ಲಿ ಹಾಗೂ ತದನಂತರ ಡಾ. ಹೇಸ್ಟಿಂಗ್ಸ್ ಗಿಲ್ಫೋರ್ಡ್ 1897 ಮೊದಲ ಬಾರಿಗೆ ವಿವರಿಸಿದರು. 

ಪ್ರೊಜೆರಿಯಾ ರೋಗ 20 ಮಿಲಿಯನ್ ಜನರ ಪೈಕಿ ಒಬ್ಬರಿಗೆ ಬರುತ್ತದೆ ಎಂದು ಅಂದಾಜಿಸಲಾಗಿದ್ದು, ಸದ್ಯ ಇಡೀ ವಿಶ್ವದಲ್ಲಿ ಸುಮಾರು 160 ಮಕ್ಕಳು ಈ ಭಯಾನಕ ರೋಗದಿಂದ ನರಳುತ್ತಿದ್ದಾರೆ.