Asianet Suvarna News Asianet Suvarna News

ವೈಟ್‌ಫೀಲ್ಡ್‌-ಕೆ.ಆರ್‌.ಪುರದಲ್ಲಿ 15ರಿಂದ ಪರೀಕ್ಷಾರ್ಥ ಮೆಟ್ರೋ ರೈಲು ಓಡಾಟ

ಮೆಟ್ರೋ ನಿಗಮದ ನೇರಳೆ ಮಾರ್ಗದ ವಿಸ್ತರಿತ ಹೊಸ ಮಾರ್ಗ ವೈಟ್‌ಫೀಲ್ಡ್‌ ಮತ್ತು ಕೆ.ಆರ್‌.ಪುರದ ನಡುವೆ ಪ್ರಯೋಗಾರ್ಥ ಮೆಟ್ರೋ ಸಂಚಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಆಕ್ಟೋಬರ್‌ 15ರಿಂದ ಈ ಮಾರ್ಗದ ವಯಾಡಕ್ಟ್ ಮೇಲೆ ಹಾಕಲಾಗಿರುವ 750 ವೋಲ್ಟ್‌ ಡೀಸಿ ಥರ್ಡ್‌ ಮಾರ್ಗದಲ್ಲಿ ಪರೀಕ್ಷಾರ್ಥ ವಿದ್ಯುತ್‌ ಹರಿಸಲಾಗುವುದು ಎಂದು ಮೆಟ್ರೋ ನಿಗಮ ಪ್ರಕಟಣೆ ಹೊರಡಿಸಿದೆ.

Test run of Metro train at whitefield to KR puram from october 15th gvd
Author
First Published Oct 1, 2022, 6:23 AM IST

ಬೆಂಗಳೂರು (ಅ.01): ಮೆಟ್ರೋ ನಿಗಮದ ನೇರಳೆ ಮಾರ್ಗದ ವಿಸ್ತರಿತ ಹೊಸ ಮಾರ್ಗ ವೈಟ್‌ಫೀಲ್ಡ್‌ ಮತ್ತು ಕೆ.ಆರ್‌.ಪುರದ ನಡುವೆ ಪ್ರಯೋಗಾರ್ಥ ಮೆಟ್ರೋ ಸಂಚಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಆಕ್ಟೋಬರ್‌ 15ರಿಂದ ಈ ಮಾರ್ಗದ ವಯಾಡಕ್ಟ್ ಮೇಲೆ ಹಾಕಲಾಗಿರುವ 750 ವೋಲ್ಟ್‌ ಡೀಸಿ ಥರ್ಡ್‌ ಮಾರ್ಗದಲ್ಲಿ ಪರೀಕ್ಷಾರ್ಥ ವಿದ್ಯುತ್‌ ಹರಿಸಲಾಗುವುದು ಎಂದು ಮೆಟ್ರೋ ನಿಗಮ ಪ್ರಕಟಣೆ ಹೊರಡಿಸಿದೆ.

ಆದ್ದರಿಂದ ವೈಟ್‌ಫೀಲ್ಡ್‌- ಕೆ.ಆರ್‌.ಪುರ ಮಾರ್ಗದ ಮಧ್ಯೆ ಬರುವ ವೈಟ್‌ಫೀಲ್ಡ್‌ ಆರ್‌ಎಸ್‌ಎಸ್‌, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದೆಮಂಗಲ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್‌, ಗರುಡಾಚಾರ್‌ಪಾಳ್ಯ ಮತ್ತು ಮಹದೇವಪುರ ಮಾರ್ಗದಲ್ಲಿ 33 ಕೆವಿ ಕೇಬಲ್‌ಗಳನ್ನು ಮತ್ತು 750 ವೋಲ್ಟ್‌ ಡೀಸಿ ಥರ್ಡ್‌ ರೈಲುಗಳನ್ನು ಸ್ಪರ್ಶಿಸುವುದು ಮಾರಣಾಂತಿಕವಾಗಿ ಪರಿಣಾಮಿಸಬಹುದು ಎಂದು ಮೆಟ್ರೋ ನಿಗಮ ಎಚ್ಚರಿಕೆ ನೀಡಿದೆ. ಒಂದು ವೇಳೆ ಅನಧಿಕೃತ ಕೃತ್ಯದಿಂದ ಆಗುವ ಹಾನಿ, ಅಪಘಾತಕ್ಕೆ ಮೆಟ್ರೋ ನಿಗಮ ಜವಾಬ್ದಾರಿ ಆಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Namma Metro: ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಚುರುಕು

ಈ ಮಧ್ಯೆ ಪ್ರಯೋಗಾರ್ಥ ಸಂಚಾರಕ್ಕೆ ಪೀಣ್ಯಾದಿಂದ ವೈಟ್‌ಫೀಲ್ಡ್‌ಗೆ ಮೆಟ್ರೋ ರೈಲುಗಳನ್ನು ತರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ವೈಟ್‌ಫೀಲ್ಡ್‌ ಡಿಪೋದ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ. ವೈಟ್‌ಫೀಲ್ಡ್‌ ಡಿಪೋದಲ್ಲಿ ಸ್ವಲ್ಪ ಕಾಮಗಾರಿ ಬಾಕಿಯಿದ್ದು, ಅಕ್ಟೋಬರ್‌ನಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಿಇಎಂಎಲ್‌ ನಿರ್ಮಿಸಿರುವ 7 ಮೆಟ್ರೋಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಕೆ.ಆರ್‌.ಪುರದಿಂದ ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ವೈಟ್‌ಫೀಲ್ಡ್‌-ಕೆಂಗೇರಿ ಮೆಟ್ರೋ ಮಾರ್ಗ ವಾಣಿಜ್ಯ ಬಳಕೆಗೆ ಲಭಿಸುವ ನಿರೀಕ್ಷೆಯಿದೆ.

ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಹಳಿಯಲ್ಲಿ ಸಮಸ್ಯೆ: ನಮ್ಮ ಮೆಟ್ರೋ ನಿಗಮದ ನೇರಳೆ ಮಾರ್ಗದ ಕೆಂಗೇರಿ-ಮೈಸೂರು ರಸ್ತೆಯ ಹಳಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 12ರವರೆಗೆ ಮೆಟ್ರೋ ಸಂಚರಿಸದೇ ಪ್ರಯಾಣಿಕರು ತೊಂದರೆಗೀಡಾದರು. ತಾಂತ್ರಿಕ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಒಂದೇ ಹಳಿಯ ಮೇಲೆ ಮೆಟ್ರೋ ಓಡಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ದಿನ ನಿತ್ಯ 5ರಿಂದ 10 ನಿಮಿಷಕ್ಕೆ ಒಂದರಂತೆ ಓಡಾಡುತ್ತಿದ್ದ ಮೆಟ್ರೋ, ತಾಂತ್ರಿಕ ಸಮಸ್ಯೆಯಿಂದಾಗಿ 25ರಿಂದ 30 ನಿಮಿಷಕ್ಕೆ ಒಂದರಂತೆ ಓಡಾಡುತ್ತಿದ್ದವು. 

ಬೆಳಗ್ಗೆ 8.30ರಿಂದ 10ರವರೆಗೆ ಕಚೇರಿ ಸೇರಿದಂತೆ ವಿವಿಧ ಕಡೆಗೆ ಕೆಲಸಕ್ಕೆ ಹೋಗುವ ಜನರು ತೀವ್ರ ಸಮಸ್ಯೆಗೆ ಒಳಗಾದರು. ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗಿನ ಮೆಟ್ರೋ ಸೇವೆ ಅಬಾಧಿತವಾಗಿತ್ತು. ಮಧ್ಯಾಹ್ನ 12ಕ್ಕೆ ಸಮಸ್ಯೆ ಪರಿಹಾರಗೊಂಡ ನಂತರ ಕೆಂಗೇರಿ ಮತ್ತು ಮೈಸೂರು ರಸ್ತೆಯ ಮಧ್ಯೆಯ ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿತು.

ಮೊಬೈಲ್‌ನಲ್ಲೇ ಟಿಕೆಟ್‌ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿ

ಸರ್ಕಾರಕ್ಕೆ ಮೆಟ್ರೋ 3ನೇ ಹಂತದ ಡಿಪಿಆರ್‌ ಸಲ್ಲಿಕೆ: ನಮ್ಮ ಮೆಟ್ರೋ ನಿಗಮವು ತನ್ನ ಮೂರನೇ ಹಂತದ ಯೋಜನೆಯ ವಿಸ್ತ್ರತ ಯೋಜನಾ ವರದಿಯನ್ನು (ಡಿಪಿಆರ್‌) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರದ ಮಧ್ಯೆ 32.15 ಕಿ.ಮೀ., ಹೊಸಹಳ್ಳಿಯಿಂದ ಕಡಬಗೆರೆ ತನಕ 12.5 ಕಿ.ಮೀ. ಹೀಗೆ ಒಟ್ಟು 44.65 ಕಿ.ಮೀಗಳ ಮಾರ್ಗವನ್ನು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. 2028ರ ವೇಳೆಗೆ ಯೋಜನೆ ವೆಚ್ಚ .16,333 ಕೋಟಿಗೆ ತಲುಪಲಿದೆ. ಯೋಜನೆಗೆ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ ನೆರವಿನ ನಿರೀಕ್ಷೆಯನ್ನು ಮೆಟ್ರೋ ನಿಗಮ ಹೊಂದಿದೆ.

Follow Us:
Download App:
  • android
  • ios