Namma Metro: ಏರ್‌ಪೋರ್ಟ್ ಮೆಟ್ರೋ ಮಾರ್ಗ ಚುರುಕು
ಬೆಂಗಳೂರು ಮಹಾನಗರವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಮತ್ತು ಐಟಿ ಹಬ್ ಹೊರ ವರ್ತುಲ ರಸ್ತೆ ಗುಂಟ ಸಾಗುವ ಸಿಲ್ಕ್‌ಬೋರ್ಡ್-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ (2ಎ) ಮೆಟ್ರೋ ಕಾಮಗಾರಿ ವೇಗದಿಂದ ನಡೆಯುತ್ತಿದೆ.
ಬೆಂಗಳೂರು (ಸೆ.08): ಬೆಂಗಳೂರು ಮಹಾನಗರವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಮತ್ತು ಐಟಿ ಹಬ್ ಹೊರ ವರ್ತುಲ ರಸ್ತೆ ಗುಂಟ ಸಾಗುವ ಸಿಲ್ಕ್‌ಬೋರ್ಡ್-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ (2ಎ) ಮೆಟ್ರೋ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಸಂಪೂರ್ಣವಾಗಿ ಮೇಲ್ಮಟ್ಟದಲ್ಲಿ (ಎಲಿವೇಟೆಡ್) ಸಾಗುವ ಈ ಮಾರ್ಗದಲ್ಲಿ ಒಟ್ಟು 1678 ಮೆಟ್ರೋ ಕಂಬಗಳು ಬರಲಿದ್ದು, ಈಗಾಗಲೇ 159 ಕಂಬಗಳನ್ನು ಅಳವಡಿಸಲಾಗಿದೆ. ಉಳಿದ ಕಂಬಗಳ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿ ಇವೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಆರಂಭಗೊಂಡಿದ್ದ ಈ ಮಾರ್ಗದ ಮೆಟ್ರೋ ಕಾಮಗಾರಿಯಲ್ಲಿ ಪ್ರಮುಖವಾಗಿರುವ ಕಂಬಗಳ ಅಳವಡಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಅಳವಡಿಸಿರುವ ಕಂಬಗಳ ಪೈಕಿ 43 ಕಂಬಗಳಿಗೆ ಟೋಪಿ ಅಳವಡಿಸಲಾಗಿದೆ. 14 ಕಂಬಗಳಿಗೆ ಸ್ಪ್ಯಾನ್ (ಎರಡು ಕಂಬಗಳ ನಡುವೆ ಇರುವ ಗರ್ಡರ್) ಅಳವಡಿಕೆ ಕಾಮಗಾರಿ ನಡೆದಿದೆ. ಕೋಡಿಬೀಸನಹಳ್ಳಿ-ಟಿನ್ ಫ್ಯಾಕ್ಟರಿ ಮಧ್ಯೆಯ ಕಾಮಗಾರಿ ಉಳಿದ ಭಾಗಗಳಿಗಿಂತ ವೇಗವಾಗಿ ಸಾಗುತ್ತಿದೆ. ಈ ಭಾಗದಲ್ಲಿ ಬರುವ 259 ಕಂಬಗಳಲ್ಲಿ ಈಗಾಗಲೇ 70 ಕಂಬಗಳನ್ನು ಅಳವಡಿಸಲಾಗಿದ್ದು, 29 ಕಂಬಗಳಿಗೆ ಟೋಪಿ ಅಳವಡಿಸಲಾಗಿದೆ.
Namma Metro: ಮೆಟ್ರೋ ಯೋಜನೆಗೆ ಕಡಿದ ಮರಕ್ಕೆ ಪರ್ಯಾಯವಾಗಿ ನೆಟ್ಟ ಸಸಿ ಎಲ್ಲಿವೆ?: ಹೈಕೋರ್ಟ್
14 ಸ್ಪ್ಯಾನ್‌ಗಳನ್ನು ಅಳವಡಿಸಲಾಗಿದೆ. ಹೆಬ್ಬಾಳದಿಂದ ಏರ್‌ಪೋರ್ಟ್ ತನಕ 711 ಕಂಬಗಳನ್ನು ಹಾಕಬೇಕಿದ್ದು, ಈ ಪೈಕಿ 62 ಕಂಬಗಳನ್ನು ಅಳವಡಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಕೋಡಿಬೀಸನಹಳ್ಳಿ ಮಧ್ಯೆ332 ಕಂಬಗಳಲ್ಲಿ ಈಗಾಗಲೇ 20 ಕಂಬಗಳನ್ನು ಹಾಕಲಾಗಿದೆ. 14 ಕಂಬಗಳಿಗೆ ಟೋಪಿಯನ್ನು ಅಳವಡಿಸಲಾಗಿದೆ. ಟಿನ್ ಫ್ಯಾಕ್ಟರಿಯಿಂದ ಹೆಬ್ಬಾಳದ ಮಧ್ಯೆ 376 ಕಂಬಗಳಲ್ಲಿ ಕೇವಲ 7 ಕಂಬಗಳನ್ನು ಅಳವಡಿಸಲಾಗಿದೆ. ನೀಲಿ ಮಾರ್ಗದ 2ಎ ಲೈನ್ ಆದ ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಯವರೆಗಿನ ಕಾಮಗಾರಿ ಹೆಚ್ಚು ವೇಗವಾಗಿ ಸಾಗುತ್ತಿದೆ.
ಟಿನ್ ಫ್ಯಾಕ್ಟರಿಯಿಂದ ವಿಮಾನ ನಿಲ್ದಾಣದ ತನಕದ (2ಬಿ) ಕಾಮಗಾರಿ ತಡವಾಗಿ ಪ್ರಾರಂಭವಾಗಿದ್ದು, ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಹಾಗೆಯೇ ಈ ಭಾಗದಲ್ಲಿ ಭೂಮಿ ಹಸ್ತಾಂತರ ಮತ್ತು ಮರ ಕಡಿಯಲು ಅನುಮತಿ ಇನ್ನೂ ಬಾಕಿ ಇರುವುದು ಕೂಡ ಕಾಮಗಾರಿಯ ವೇಗಕ್ಕೆ ತುಸು ಅಡ್ಡಿಯಾಗಿದೆ. 2025ರೊಳಗೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಈ ಮಾರ್ಗ ಜನಸಾಮಾನ್ಯರ ಬಳಕೆಗೆ ಲಭ್ಯವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಟ್ರೋ ನಿಗಮಕ್ಕೆ ಗಡುವು ನೀಡಿದ್ದಾರೆ.
ಮೊಬೈಲ್‌ನಲ್ಲೇ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿ
ಟ್ರಾಫಿಕ್ ದಟ್ಟಣೆ ನಿವಾರಿಸುವ ಒತ್ತಡ: ಹೊರ ವರ್ತುಲ ರಸ್ತೆಯು ರಾಜ್ಯದ ಐಟಿ ಕಾರಿಡಾರ್ ಆಗಿದ್ದು ಮೆಟ್ರೋ ಕಾಮಗಾರಿಯಿಂದ ಟ್ರಾಫಿಕ್ ದಟ್ಟಣೆ ಆಗುತ್ತಿರುವುದು ಮತ್ತು ಮೆಟ್ರೋ ಸಂಪರ್ಕ ಇಲ್ಲದಿರುವುದರಿಂದ ಐಟಿ ಉದ್ಯೋಗಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿರುವುದರಿಂದ ಈ ಮಾರ್ಗವನ್ನು ಆದಷ್ಟುಬೇಗ ಪೂರ್ಣಗೊಳಿಸಿ ಜನ ಬಳಕೆಗೆ ಬಿಟ್ಟುಕೊಡಬೇಕು ಎಂಬ ಒತ್ತಡ ಬೆಂಗಳೂರು ಮೆಟ್ರೋ ನಿಗಮದ ಮೇಲಿದೆ.