Asianet Suvarna News Asianet Suvarna News

Mandya ಕುಸಿದ ಎಳನೀರು ಧಾರಣೆ: ರೈತರಿಗೆ ಸಂಕಷ್ಟ

ಜಿಲ್ಲೆಯೊಳಗೆ ಭತ್ತ, ರಾಗಿ ಖರೀದಿ ಆರಂಭಗೊಳ್ಳದೆ ರೈತರು ಸಂಕಷ್ಟಎದುರಿಸುತ್ತಿರುವ ಸಮಯದಲ್ಲೇ ಎಳನೀರು ಧಾರಣೆಯೂ ತೀವ್ರಗತಿಯಲ್ಲಿ ಕುಸಿತಕ್ಕೊಳಗಾಗಿರುವುದು ಅನ್ನದಾತರ ಬದುಕನ್ನು ಪ್ರಪಾತಕ್ಕೆ ದೂಡಿದೆ.

tender Coconut price Falls Down in Market snr
Author
First Published Jan 22, 2023, 6:09 AM IST

 ಮಂಡ್ಯ ಮಂಜುನಾಥ

  ಮಂಡ್ಯ :  ಜಿಲ್ಲೆಯೊಳಗೆ ಭತ್ತ, ರಾಗಿ ಖರೀದಿ ಆರಂಭಗೊಳ್ಳದೆ ರೈತರು ಸಂಕಷ್ಟಎದುರಿಸುತ್ತಿರುವ ಸಮಯದಲ್ಲೇ ಎಳನೀರು ಧಾರಣೆಯೂ ತೀವ್ರಗತಿಯಲ್ಲಿ ಕುಸಿತಕ್ಕೊಳಗಾಗಿರುವುದು ಅನ್ನದಾತರ ಬದುಕನ್ನು ಪ್ರಪಾತಕ್ಕೆ ದೂಡಿದೆ.

ಉತ್ತರ ಭಾರತದಲ್ಲಿ ಶೀತ ಹೆಚ್ಚಿರುವ ಕಾರಣ ಏಷ್ಯಾದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆಎನಿಸಿರುವ ಮದ್ದೂರಿನ ಎಳನೀರು ಮಾರುಕಟ್ಟೆಯಲ್ಲಿ ಧಾರಣೆ ಕುಸಿತಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ಎಳನೀರು ಗಾತ್ರವನ್ನು ಆಧರಿಸಿ ಕನಿಷ್ಠ RS .19 ನಿಂದ  RS .23 ವರೆಗೆ ಮಾರಾಟವಾಗುತ್ತಿತ್ತು. ಇದೀಗ ಎಳನೀರು ಧಾರಣೆ  RS .16ಗೆ ಕುಸಿದಿರುವುದು ರೈತರು ನಷ್ಟಅನುಭವಿಸುವಂತಾಗಿದೆ.

ಮದ್ದೂರು ಎಳನೀರು ಮಾರುಕಟ್ಟೆಯಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೆಹಲಿಗೆ ಕಳುಹಿಸಲಾಗುತ್ತಿತ್ತು. ಮಹಾರಾಷ್ಟ್ರಕ್ಕೂ ಎಳನೀರನ್ನು ಕಳುಹಿಸಲಾಗುತ್ತಿತ್ತು. ಈಗ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಇತರೆ ಕಡೆಯಿಂದಲೂ ಬೇಡಿಕೆ ಕುಸಿದಿರುವುದರಿಂದ ಬೆಲೆಯೂ ಕುಸಿತಗೊಂಡಿದೆ.

ಚಳಿ ಹೆಚ್ಚು, ಬೇಡಿಕೆ ಕುಸಿತ:

ಸಾಮಾನ್ಯವಾಗಿ ನವೆಂಬರ್‌ನಿಂದ ಫೆಬ್ರವರಿಯವರೆಗೆ ಮಾರುಕಟ್ಟೆಗೆ ಬರುವ ಎಳನೀರು ಉತ್ತಮವಾಗಿದ್ದು, ಹೆಚ್ಚು ರುಚಿಕರವಾಗಿರುತ್ತದೆ. ಇದೇ ಸಮಯದಲ್ಲೇ ಉತ್ತರ ಭಾರತದಲ್ಲಿ ಶೀತ ಮಾರುತ, ಚಳಿಯ ತೀವ್ರತೆ ಹೆಚ್ಚಿರುವುದರಿಂದ ಎಳನೀರಿಗೆ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ಹೊಡೆತಕ್ಕೆ ಮರದಿಂದ ಈಚುಗಳು ಉದುರುವುದು ಮತ್ತು ಎಳನೀರಿನ ಇಳುವರಿಯೂ ಕುಸಿಯುವುದು ಸಾಮಾನ್ಯ ಸಂಗತಿಯಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಎಳನೀರಿಗೆ ದೇಶಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ, ಈ ವ್ಯಾಪ್ತಿಯಿಂದ ಬರುವ ಎಳನೀರು ಹೆಚ್ಚು ಸಿಹಿಯಾಗಿರುತ್ತದೆ. ಇದೀಗ ಉತ್ತಮ ಇಳುವರಿಯೊಂದಿಗೆ ಗಾತ್ರದಲ್ಲಿ ದೊಡ್ಡದಾದ ಎಳನೀರು ಮಾರುಕಟ್ಟೆಗೆ ಬರುತ್ತಿದ್ದರೂ ಬೇಡಿಕೆಯೇ ಇಲ್ಲದಂತಾಗಿದೆ.

RS .16ಗೆ ಮಾರಾಟ:

ಪ್ರತಿ ದಿನ 30 ರಿಂದ 40 ಲಾರಿಗಳಷ್ಟುಎಳನೀರು ಮಾರುಕಟ್ಟೆಗೆ ಬಂದು ಸೇರುತ್ತಿದೆ. ಆ ಎಳನೀರನ್ನು ಪರವಾನಗಿ ಪಡೆದವರು, ಖರೀದಿದಾರರು ರೈತರಿಂದ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. .23ಗೆ ಮಾರಾಟವಾಗಬೇಕಿದ್ದ ಎಳನೀರನ್ನುRS .16ಗೆ ಕೊಟ್ಟು ರೈತರು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಮಾರುಕಟ್ಟೆಗೆ ಬಂದ ಎಳನೀರನ್ನು ವಾಪಸ್‌ ಕೊಂಡೊಯ್ಯಲಾಗದೆ, ಹೆಚ್ಚು ದಿನ ಇಡಲಾಗದೆ ಕೊಟ್ಟಷ್ಟುದರಕ್ಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಎಳನೀರನ್ನು ಎರಡು ದಿನ ಬಿಟ್ಟರೆ ಹುಳಿ ಬರುವ ಸಾಧ್ಯತೆಗಳಿರುವುದರಿಂದ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವೂ ಆಗಿದೆ.

ನಗರದಲ್ಲೂ .20ಗೆ ಮಾರಾಟ:

ಮಾರುಕಟ್ಟೆ ಯಿಂದ ಬೆಂಗಳೂರಿಗೆ ಕಡಿಮೆ ಪ್ರಮಾಣದಲ್ಲಿ ಎಳ ನೀರು ಪೂರೈಕೆಯಾಗುತ್ತಿದೆ. ಈ ಭಾಗದಲ್ಲೂ ಚಳಿ ಹೆಚ್ಚಿರುವುದರಿಂದ ಎಳನೀರಿನತ್ತ ಗ್ರಾಹಕರೂ ಮುಖ ಮಾಡುತ್ತಿಲ್ಲ. ಹೀಗಾಗಿ ಮಾರಾಟಗಾರರು ಪ್ರತಿ ಒಂದು ಎಳನೀರನ್ನುRS .20ಗೆ ಮಾರಾಟ ಮಾಡುತ್ತಿದ್ದಾರೆ. ಇದೇ ಎಳನೀರು ಬೇಸಿಗೆ ವೇಳೆ .40 ವರೆಗೆ ಏರಿಕೆಯಾಗಿರುತ್ತದೆ. ಹೀಗಾಗಿ ಮಾಚ್‌ರ್‍ ಆರಂಭದವರೆಗೂ ಎಳನೀರಿಗೆ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂಬ ಮಾತುಗಳು ಎಳನೀರು ಮಾರುಕಟ್ಟೆಅಧಿಕಾರಿಗಳಿಂದ ಕೇಳಿಬರುತ್ತಿದೆ.

ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿರುವುದರಿಂದ ಎಳನೀರಿಗೆ ಬೇಡಿಕೆ ಬರುತ್ತಿಲ್ಲ. ನಿತ್ಯ 40 ಲೋಡ್‌ ಎಳನೀರು ಮಾರುಕಟ್ಟೆಗೆ ಬರುತ್ತಿದೆ. ಅದನ್ನು ಉಳಿಸಿಕೊಳ್ಳದೆ ಕಳುಹಿಸಲಾಗುತ್ತಿದೆ. ಆದರೆ, ಪ್ರತಿ ಎಳನೀರು ಬೆಲೆ RS .16 ನಿಂದ RS .19 ವರೆಗೆ ಮಾತ್ರ ಇದೆ. ಸಾಮಾನ್ಯವಾಗಿ ಎಳನೀರು ಬೆಲೆ RS .19 ನಿಂದ RS .23 ವರೆಗೆ ಇರುತ್ತಿತ್ತು. ಈಗ ಕಡಿಮೆಯಾಗಿರುವುದರಿಂದ ರೈತರಿಗೆ ಸ್ವಲ್ಪ ಸಮಸ್ಯೆಯಾಗಿದೆ.

- ಸಂದೇಶ್‌, ಕಾರ್ಯದರ್ಶಿ, ಎಳನೀರು ಮಾರುಕಟ್ಟೆ, ಮದ್ದೂರು

Follow Us:
Download App:
  • android
  • ios