Asianet Suvarna News Asianet Suvarna News

ಸ್ಥಗಿತವಾಯ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯನ್ನು ಸದ್ಯ ಕಾರವಾರದಲ್ಲಿ ನಿಲ್ಲಿಸಲಾಗಿದೆ. ಈ ಯೋಜನೆ ವಿರೋಧಿಸಿ ಇಲ್ಲಿನ ಮೀನುಗಾರರು ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.

temporary Break To Sagarmala Project in Uttara Kannada
Author
Bengaluru, First Published Jan 24, 2020, 12:44 PM IST
  • Facebook
  • Twitter
  • Whatsapp

ಬೆಂಗಳೂರು  [ಜ.24]:  ಕೇಂದ್ರ ಸರ್ಕಾರದ ‘ಸಾಗರ ಮಾಲಾ’ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮಧ್ಯಂತ ತಡೆ ನೀಡಿರುವ ಹೈಕೋರ್ಟ್‌, ಕಡಲ ತೀರದ ಮಧ್ಯೆ ನಿರ್ಮಿಸಿರುವ ದಾರಿ ಹಾಗೂ ಇತರೆ ನಿರ್ಮಾಣವನ್ನು ನೆಲಸಮ ಗೊಳಿಸಿ ಬಂದರು ಪ್ರದೇಶವನ್ನು ಹಿಂದಿನ ಯಥಾಸ್ಥಿತಿಗೆ ತರಬೇಕು ಎಂದು ತಾಕೀತು ಮಾಡಿದೆ. 

ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರವು ಪರಿಸರ ಅನುಮತಿ ಹಿಂಪಡೆದಿದ್ದರೂ ಮತ್ತು ಕಾಮಗಾರಿ ಕೈಗೊಳ್ಳದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚಿಸಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದರೂ ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಬೈತಖೋಲ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಗುರುವಾರ ಅರ್ಜಿಯ ಸಂಬಂಧ ಕೆಲ ಕಾಲ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಜತೆಗೆ, ಮುಂದಿನ ಆದೇಶದವರೆಗೆ ಕಾಮಗಾರಿ ಸಂಬಂಧ ಯಥಾಸ್ಥಿತಿ ಕಾಯ್ದು ಕೊಳ್ಳಬೇಕು. ಕಡಲ ತೀರದ (ಬೀಚ್‌) ಮಧ್ಯೆ ನಿರ್ಮಿಸಿರುವ ದಾರಿ ಹಾಗೂ ಇತರೆ ನಿರ್ಮಾಣವನ್ನು ನೆಲಸಮಗೊಳಿಸಿ ಬಂದರು ಪ್ರದೇಶವನ್ನು ಹಿಂದಿನ ಯಥಾಸ್ಥಿತಿಗೆ ತರಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

ಅಕ್ರಮ ಲೈಟ್ ಫಿಶಿಂಗ್ : 9 ಬೋಟ್ ಪೊಲೀಸರ ವಶಕ್ಕೆ..

ಅಲ್ಲದೆ, ಅರ್ಜಿಯಲ್ಲಿನ ಪ್ರತಿವಾದಿಗಳಾಗಿರುವ ಕರ್ನಾಟಕ ಕಡಲ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಖಾಸಗಿ ಸಂಸ್ಥೆಯಾದ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್$್ಸ ಪ್ರೈವೆಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಪಿಠ ಸೂಚಿಸಿತು. ಹಾಗೆಯೇ, ಕೇಂದ್ರ ಸರ್ಕಾರದ ಸಂಬಂಧಪಟ್ಟಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಲು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

ನನ್ನಿಂದ ಯಾವ ಖಾತೆಗೂ ಬೇಡಿಕೆ ಇಲ್ಲ : ಶಾಸಕ ಹೆಬ್ಬಾರ್..

ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ ಪರಿಸರ ಅನುಮತಿ ವಾಪಸ್‌ ಪಡೆದಿದ್ದರೂ ಹಾಗೂ ಕಾಮಗಾರಿ ಕೈಗೊಳ್ಳದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚಿಸಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದರೂ ಬಂದರ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ನ್ಯಾಯಪೀಠ ಇದೇ ವೇಳೆ ತರಾಟೆಗೆ ತೆಗೆದುಕೊಂಡಿತು.

ಪ್ರಕರಣ:

ರವೀಂದ್ರನಾಥ್‌ ಟ್ಯಾಗೂರ್‌ ಬೀಚ್‌ ಎಂದೂ ಹೆಸರುವಾಸಿಯಾಗಿರುವ ಕಾರವಾರ ಕಡಲು ಅರಬ್ಬಿ ಸಮುದ್ರದ ತೀರಕ್ಕೆ ಹೊಂದಿಕೊಂಡಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಪ್ರಾಣಿ ಮತ್ತು ಸಸ್ಯ ಸಂಕುಲ ಅಗಾಧ ಪ್ರಮಾಣದಲ್ಲಿ ನಾಶವಾಗಿ, ಪರಿಸರಕ್ಕೆ ತೀವ್ರ ಹಾನಿಯಾಗಲಿದೆ. ಕಾರವಾರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳ ಜೀವನದ ಮೇಲೆಯೂ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಹಾಗೆಯೇ, ಮೇಲಾಗಿ ವಾಣಿಜ್ಯ ಬಂದರು ವಿಸ್ತರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿ ಪಡೆದಿಲ್ಲ. ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರವು ನೀಡಿದ್ದ ಪರಿಸರ ಅನುಮತಿ ವಾಪಸ್‌ ಪಡೆದಿದೆ. ಇನ್ನೂ ಕಾಮಗಾರಿ ಕೈಗೊಳ್ಳದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚಿಸಿ ಬಳಿಕ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಆದರೂ ಕಾಮಗಾರಿ ಕೈಗೊಳ್ಳಲಾಗಿದೆ. ಆದ್ದರಿಂದ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಕಾರಾವಾರ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮುಂದುವರಿಸದಂತೆ ರಾಜ್ಯ ಒಳನಾಡು ಹಾಗೂ ಜಲಸಾರಿಗೆ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಬೇಕು ಅರ್ಜಿಯಲ್ಲಿ ಕೋರಲಾಗಿದೆ.

Follow Us:
Download App:
  • android
  • ios