ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಆ ಅಧಿಕಾರ ನೀಡಿದವರು ಯಾರು ಎಂದು ಮುಖಂಡರೋರ್ವರು ಪ್ರಶ್ನೆ ಮಾಡಿದ್ದಾರೆ. 

ಕೆ.ಆರ್‌. ನಗರ (ಡಿ.14): ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯಿದೆಗಳಿಂದ ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿಕೆ ನೀಡುವ ಅಧಿಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ನೀಡಿದವರು ಯಾರು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ಪ್ರಶ್ನಿಸಿದರು.

ಪಟ್ಟಣದ ಕೃಷ್ಣಮಂದಿರದಲ್ಲಿ ನಡೆದ ಕೆ.ಆರ್‌. ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಜನಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯತೀತ ತತ್ವ ಪ್ರತಿಪಾದಿಸುವ ಯಾವ ಅಂಶಗಳು ಜೆಡಿಎಸ್‌ ಪಕ್ಷದವರ ಬಳಿ ಉಳಿದಿವೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದರೆ ಉಳುವವನೆ ಭೂಮಿಯ ಒಡೆಯ, ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉಳ್ಳವನೆ ಭೂ ಮಾಲೀಕ. ಆದ್ದರಿಂದ ಮುಂದೆ ರೈತರು ಮತ್ತು ಜನರಿಗೆ ಯಾವ ಸರ್ಕಾರ ಬೇಕು ಎಂಬುದನ್ನು ಮತದಾರರು ತೀರ್ಮಾನಿಸಲಿ. ದೇಶದ ಅಭಿವೃದ್ಧಿಯಾಗಿ ಸಂವಿಧಾನದ ಆಶಯ ಈಡೇರಬೇಕಾದರೆ ಕಾಂಗ್ರೆಸ್‌ ಆಡಳಿತ ದೇಶಕ್ಕೆ ಅಗತ್ಯವಿದ್ದು, ಜನತೆ ಸ್ಥಳೀಯ ಸಂಸ್ಥೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.

ಆ ನಾಯಕನನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ : ಏನಿದು ಕುತೂಹಲದ ರಾಜಕೀಯ..? .

ಕಾಂಗ್ರೆಸ್‌ ಪಕ್ಷ ಎಂದು ಅಧಿಕಾರದ ಆಸೆಯಿಂದ ಇತರರ ಮನೆ ಬಾಗಿಲಿಗೆ ಹೋಗಿಲ್ಲಾ ಇದಕ್ಕೆ ಉದಾಹರಣೆ ಕಳೆದ ವಿದಾನಸಭಾ ಚುನಾವಣೆಯಲ್ಲಿ 80 ಸ್ಥಾನ ಪಡೆದ ನಾವು 37 ಸ್ಥಾನ ಗಳಿಸಿದ ಜೆಡಿಎಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಗಾಧಿಯನ್ನು ನೀಡಿದ್ದು. ಹಾಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರು ಪೈಪೋಟಿ ಮತ್ತು ದ್ವೇಷದ ರಾಜಕಾರಣಕ್ಕೆ ಅವಕಾಶ ನೀಡಬೇಡಿ ಎಂದು ಅವರು ಕೋರಿದರು.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಪಂ ಚುನಾವಣೆಯನ್ನು ಲಘುವಾಗಿ ಪರಿಗಣಿಸದೆ ಭವಿಷ್ಯದ ಎಲ್ಲಾ ಚುನಾವಣೆಗಳ ಗೆಲುವಿನ ಮೆಟ್ಟಿಲು ಎಂದು ಪರಿಗಣಿಸಿ ನಮ್ಮ ಪಕ್ಷದ ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಡಿ. ರವಿಶಂಕರ ಅವರ ಗೆಲುವಿಗೆ ಈಗಿನಿಂದಲೇ ದುಡಿಯಬೇಕು ಎಂದು ಅವರು ಕರೆ ನೀಡಿದರು.

ದೇಶದಲ್ಲಿ ರೈತ ದಂಗೆ ಆರಂಭ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮಾತನಾಡಿ, ದೇಶದಲ್ಲಿ ಸಿಪಾಯಿ ದಂಗೆಯ ನಂತರ ಈಗ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರೈತ ದಂಗೆ ಆರಂಭವಾಗಿದ್ದು, ಇದರ ಪರಿಣಾಮವನ್ನು ಆ ಪಕ್ಷ ಭವಿಷ್ಯದಲ್ಲಿ ಎದುರಿಸಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳ ಬಗ್ಗೆ ಜನರಲ್ಲಿ ಭ್ರಮ ನಿರಸನ ಆರಂಭವಾಗಿದ್ದು, ಅದು ಗ್ರಾಪಂ ಚುನಾವಣೆಯಲ್ಲಿ ಪ್ರಭಾವ ಬೀರಲಿದ್ದು, ಇದರ ಸದುಪಯೋಗವನ್ನು ಪಕ್ಷದ ಮುಖಂಡರು ಬಳಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತರಿಗೆ ಗ್ರಾಪಂ ಚುನಾವಣೆಯಲ್ಲಿ ಪ್ರಬಲ ಪ್ರತಿ ಸ್ಪರ್ಧಿಗಳು ಯಾರು ಇಲ್ಲ. ಹಾಗಾಗಿ ತತ್ವ ಮತ್ತು ಸಿದ್ಧಾಂತದ ಮೇಲೆ ಚುನಾವಣೆ ಎದುರಿಸುವ ನಾವು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್‌ಕುಮಾರ್‌ ರೈ, ಜಿಪಂ ಸದಸ್ಯ ಡಿ. ರವಿಶಂಕರ್‌, ತಾಪಂ ಅಧ್ಯಕ್ಷ ಜಯರಾಮೇಗೌಡ, ಮಾಜಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್‌, ಮುಖಂಡ ಶ್ರೀನಿವಾಸ್‌ ಮಾತನಾಡಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ, ಎಸ್‌.ಪಿ. ತಮ್ಮಯ್ಯ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಹಾಡ್ಯ ಪ್ರಸಾದ್‌, ಕೆ.ಆರ್‌.ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಸಾಲಿಗ್ರಾಮ ಬ್ಲಾಕ್‌ ಅಧ್ಯಕ್ಷ ಉದಯಶಂಕರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ರಮೇಶ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌.ಡಿ. ರಾಣಿ ಬಾಲಶಂಕರ್‌, ಲತಾ ರವಿಶಂಕರ್‌, ವಕ್ತಾರ ಸೈಯದ್‌ ಜಾಬೀರ್‌, ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಸದಸ್ಯರಾದ ಶಂಕರ್‌, ನಟರಾಜು, ಸಿದ್ದಿಕ್‌, ಜಿಪಂ ಮಾಜಿ ಸದಸ್ಯರಾದ ಜಿ.ಆರ್‌. ರಾಮೇಗೌಡ, ಜಯರಾಮೇಗೌಡ ಇದ್ದರು.