ಔರಾದ್‌ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಾಕಷ್ಟು ಕಡೆ ಬೆಳೆ ನಷ್ಟಕ್ಕೆ ಕಾರಣವಾಗುತ್ತಿರುವ ಬಸವನ (ಶಂಖದ) ಹುಳುವಿನ ಹತೋಟಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

ಔರಾದ್‌ (ಜು.17): ಔರಾದ್‌ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಾಕಷ್ಟು ಕಡೆ ಬೆಳೆ ನಷ್ಟಕ್ಕೆ ಕಾರಣವಾಗುತ್ತಿರುವ ಬಸವನ (ಶಂಖದ) ಹುಳುವಿನ ಹತೋಟಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್‌ ಅಧಿಕಾರಿಗಳಿಗೆ ಸೂಚಿಸಿದರು. ಔರಾದ ತಾಲೂಕಿನ ಏಕಂಬಾ ಗ್ರಾ.ಪಂ ಕಛೇರಿ ಆವರಣದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಬಸವನ ಹುಳು ನಿರ್ವಹಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅತೀವೃಷ್ಟಿಯಿಂದ ಬೆಳೆ ಹಾನಿಯಾಗುತ್ತಿರುವ ಕಾರಣ ರೈತರು ಈಗಾಗಲೇ ಸಮಸ್ಯೆಯಲ್ಲಿದ್ದಾರೆ. 

ಎಲ್ಲ ಬೆಳೆ ನಾಶಪಡಿಸುತ್ತಿರುವ ಬಸವನ ಹುಳುವಿನ ಕಾಟ ರೈತರಿಗೆ ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ. ಅದರಿಂದಾಗಿ ಸೋಯಾಬೀನ್‌, ತೊಗರಿ, ಉದ್ದು, ಹೆಸರು ಬೆಳೆದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬಸವನ ಹುಳು ಹತೋಟಿಗೆ ನಿರ್ವಹಣೆ ಕ್ರಮಗಳ ಬಗ್ಗೆ ತಿಳಿಹೇಳಬೇಕು. ಜಾಗೃತಿಯು ವ್ಯಾಪಕವಾಗಿ ನಡೆಯಬೇಕೆಂದರು. ಹೊಲದಲ್ಲಿರುವ ಎಲ್ಲ ಬಸವನ ಹುಳುಗಳನ್ನು ಒಂದೆಡೆ ಸೇರಿಸಿ ದಪ್ಪ ಉಪ್ಪನ್ನು ಸುರಿಯುವುದರಿಂದ ಅವು ಸಾವನಪ್ಪುತ್ತವೆ. ಅವುಗಳನ್ನು ಗುಂಡಿ ತೋಡಿ ಮುಚ್ಚುವುದರಿಂದ ಅದರ ಬಾಧೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಸಚಿವರು ರೈತರಿಗೆ ಸಲಹೆ ನೀಡಿದರು.

ಬೀದರ್‌: ಸಂತ್ರಸ್ತರೊಂದಿಗೆ ಸರ್ಕಾರವಿದೆ, ಪ್ರಭು ಚವ್ಹಾಣ್‌ ಅಭಯ

ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಮಾತನಾಡಿ, ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ ಸುಮಾರು 500 ಮೊಟ್ಟೆಇಡುವುದರಿಂದ ಇವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತದೆ. ಗಿಡದ ಎಲೆ, ದೇಟು, ಕಾಂಡ ಮತ್ತು ತೊಗಟೆಯನ್ನು ಕೆರೆದು ತಿನ್ನುವುದರಿಂದ ಬೆಳೆ ನಾಶವಾಗುತ್ತದೆ. ಬಸವನ ಹುಳುವಿನ ಹತೋಟಿಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆಯಿರುವುದರಿಂದ ರೈತರು ಜಾಗೃತೆ ವಹಿಸಬೇಕೆಂದರು.

ನನಗೂ ಹಾಲಿನ ಪೌಡರ್‌ಗೂ ಏನು ಸಂಬಂಧ?: ಸಚಿವ ಪ್ರಭು ಚವ್ಹಾಣ್‌

ಬಸವನ ಹುಳು ನಿರ್ವಹಣೆ: ಹೊಲದಲ್ಲಿ ಬಸವನ ಹುಳುಗಳನ್ನು ಒಂದೆಡೆ ಸೇರಿಸಿ ಅವುಗಳ ಮೇಲೆ ಉಪ್ಪು ಅಥವಾ ಬ್ಲೀಚಿಂಗ್‌ ಪುಡಿ ಹಾಕುವ ಮೂಲಕ ನಾಶಪಡಿಸಬಹುದು. ಮೆಟಾಲ್ಡಿಹೈಡ್‌ ಮಾತ್ರೆಗಳು, ಮಿಥೋಮಿಲ್‌ 40 ಎಸ್‌.ಪಿ ಕೀಟನಾಶಕದ ಬಳಸಿಯೂ ಬಸವನ ಹುಳು ಹತೋಟಿಗೆ ತರಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂಎಕೆ ಅನ್ಸಾರಿ ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಹೆಚ್‌, ಔರಾದ ತಹಸೀಲ್ದಾರ ಅರುಣಕುಮಾರ ಕುಲಕರ್ಣಿ, ಕೃಷಿ ಇಲಾಖೆ ಉಪ ನಿರ್ದೇಶಕ ಕೆಂಗೇಗೌಡ, ಔರಾದ ತಾ.ಪಂ ಅಧಿಕಾರಿ ಬೀರೇಂದ್ರ ಸಿಂಗ್‌, ತೋಟಗಾರಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.