ನನ್ನ ವಿಧಾನಸಭಾ ಕ್ಷೇತ್ರ ಗಡಿಭಾಗದ ಹಿಂದುಳಿದ ತಾಲೂಕು ಆಗಿದ್ದು ಇದನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದ ಪ್ರಭು ಚವ್ಹಾಣ್
ಬೀದರ್(ಜು.16): ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ಸೋಯಾ ಸೇರಿ ಹಲವಾರು ಬೆಳೆಗಳು ನಾಶವಾಗಿದ್ದು, ಸರ್ಕಾರದಿಂದ ಪರಿಹಾರ ನೀಡಲಾಗುವುದು. ಹಾಗಾಗಿ ರೈತರು ಭಯಪಡಬೇಕಾಗಿಲ್ಲ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಭಯ ನೀಡಿದರು. ಶುಕ್ರವಾರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದರು. ಔರಾದ್ ತಾಲೂಕಿನಲ್ಲಿ ಮಳೆಯಿಂದಾಗಿ ಶೇ. 70ರಿಂದ 80ರಷ್ಟು ಹಾನಿಯಾಗಿದ್ದು, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಹಾನಿಯ ವರದಿ ಮಾಡಿ ಅವರಿಗೆ ಪರಿಹಾರ ನೀಡಲಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಧಿಯಿಂದಲೂ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 127 ಮನೆಗಳು ಹಾನಿಗೊಳಗಾಗಿದ್ದು, ಅವರಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ರುಪಾಯಿಗಳ ಚೆಕ್ ನೀಡಲಾಗುತ್ತಿದೆ, ಪೂರ್ತಿಯಾಗಿ ಬಿದ್ದ ಮನೆಗಳಿದ್ದರೆ ಗ್ರಾಮ ಪಂಚಾಯಿತಿ ವತಿಯಿಂದ ಅವರಿಗೆ ಹೊಸ ಮನೆಗಳನ್ನು ಕಟ್ಟಿಸಿಕೊಡಲಾಗುತ್ತದೆ. ನನ್ನ ವಿಧಾನಸಭಾ ಕ್ಷೇತ್ರ ಗಡಿಭಾಗದ ಹಿಂದುಳಿದ ತಾಲೂಕು ಆಗಿದ್ದು ಇದನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು.
ವಿಷಾನಿಲ ಸೋರಿಕೆ: ಮೃತ ಕಾರ್ಮಿಕನ ಮೇಲೆ ಗೂಬೆ ಕೂರಿಸಿದ ತನಿಖಾ ತಂಡ..!
ಹೊಲಗಳಲ್ಲಿ ನೀರು:
ಜನರು ಆತಂಕಪಡಬೇಕಾಗಿಲ್ಲ. ನಿಮ್ಮೊಂದಿಗೆ ನಾವಿದ್ದು ತಮ್ಮ ಯಾವುದೇ ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ನನ್ನ ಗಮನಕ್ಕೆ ತರಬೇಕೆಂದು ಹೇಳಿ, ಕ್ಷೇತ್ರದ ಮೂವತ್ತು ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದು, ಅದರ ಹಾನಿಯನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ ಎಂದರು.
ಕೆಲವೊಂದು ಹೊಲಗಳಲ್ಲಿ ನೀರು ತುಂಬಿ ಅವು ಚಿಕ್ಕ ಕೆರೆಯಂತೆ ಕಾಣುತ್ತಿವೆ ಮತ್ತು ಹೊಲಗಳಲ್ಲಿರುವ ಬೆಳೆಗಳು ನೀರಿನಲ್ಲಿ ನಿಂತು ಬಸವನ ಹುಳುಗಳು ಸೋಯಾಬಿನ್ ಇತರೆ ಬೆಳೆಗಳಿಗೆ ಹಾನಿಯುಂಟು ಮಾಡಿರುವುದರಿಂದ ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಲೂಕಿನಲ್ಲಾದ ಈ ಹಾನಿಯ ಕುರಿತು ವರದಿ ನೀಡಲು ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ, ಔರಾದ್ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಚವ್ಹಾಣ್‌ರಿಂದ ಕ್ಷೇತ್ರ ಪ್ರದಕ್ಷಿಣೆ
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿಗೊಳಗಾದ ಔರಾದ್ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್ ಅವರು ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು.
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ಫಲಾನುಭವಿಗಳ ಮನೆ ಹಾಗೂ ಇತರೆ ಹಾನಿಗಳ ಚೆಕ್‌ಗಳನ್ನು ಸಚಿವರು ವಿತರಿಸಿ ಅವರಿಗೆ ನಿಮ್ಮೊಂದಿಗೆ ನಾವಿದ್ದೇವೆ. ಭಯಪಡುವ ಅಗತ್ಯವಿಲ್ಲ ಎಂದು ಜನರಿಗೆ ಆತ್ಮವಿಶ್ವಾಸ ತುಂಬಿದರು.
ಬೀದರ್: ಶಾಲಾ ಕೋಣೆ ಕುಸಿತ, ತಪ್ಪಿದ ಭಾರೀ ಅನಾಹುತ
ಇದೇ ವೇಳೆ ಠಾಣಾಕುಶನೂರ, ನಿಡೋದಾ, ಹಾಲಹಳ್ಳಿ, ಸಂಗಮ, ಸಾವಳಿ, ಹೊಳಸಮುದ್ರ, ಡಿಗ್ಗಿ, ಕಮಲನಗರ, ಮುರ್ಕಿ, ಹಂದಿಕೇರಾ, ದಾಬಕಾ ಸೇರಿದಂತೆ ಔರಾದ್ (ಬಿ) ಮತ್ತು ಕಮಲನಗರ ತಾಲೂಕಿನ ನಾನಾ ಗ್ರಾಮಗಳಿಗೆ ಸಚಿವರು ಭೇಟಿ ನೀಡಿ ಬೆಳೆ, ಆಸ್ತಿಪಾಸ್ತಿ ಹಾನಿಯ ಪರಿಶೀಲನೆಯ ಜೊತೆಗೆ ಸಾರ್ವಜನಿಕರ ಅಹವಾಲು ಆಲಿಸಿದರು. ಇನ್ನು 2021-22ನೇ ಸಾಲಿನ ಜೆಜೆಎಂ ಯೋಜನೆಯಡಿಯಲ್ಲಿ ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ 474 ಮನೆಗಳಿಗೆ ಎಫ್‌ಎಚ್‌ಟಿಸಿ ಅಳವಡಿಸುವ 1 ಕೋಟಿ ರು. ಕಾಮಗಾರಿಗೆ ಪಶು ಸಂಗೋಪನೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್, ಔರಾದ್ (ಬಿ) ತಹಸೀಲ್ದಾರ ಅರುಣಕುಮಾರ ಕುಲಕರ್ಣಿ, ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ, ಕೃಷಿ ಇಲಾಖೆ ಉಪ ನಿರ್ದೇಶಕ ಕೆಂಗೇಗೌಡ, ಔರಾದ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರ ಸಿಂಗ್, ಕಮಲನಗರ ಇಓ ಸೈಯ್ಯದ್ ಫಜಲ್ ಮಹಮ್ಮೂದ್, ಕೃಷಿ ಸಹಾಯಕ ನಿರ್ದೇಶಕ ಎಂ.ಡಿ ಅನ್ಸಾರಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
