ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ- ಭೈರತಿ ಸುರೇಶ್ ಸೂಚನೆ

 ರಾಜ್ಯದಲ್ಲಿ ಮಳೆ ಕಡಿಮೆ ಆಗಿದ್ದು, ಬರ ಘೋಷಣೆ ಆಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ದಿ ಮತ್ತು ನಗರ ಯೋಜನಾ ಸಚಿವ ಭೈರತಿ ಸುರೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

 Take action so that there is no shortage of drinking water  Bhairati Suresh advises snr

 ಮೈಸೂರು:   ರಾಜ್ಯದಲ್ಲಿ ಮಳೆ ಕಡಿಮೆ ಆಗಿದ್ದು, ಬರ ಘೋಷಣೆ ಆಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ದಿ ಮತ್ತು ನಗರ ಯೋಜನಾ ಸಚಿವ ಭೈರತಿ ಸುರೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರು ವಿಭಾಗಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳ ಪ್ರಗತಿ, ಕಂದಾಯ ವಿಷಯಗಳು, ಸಾರ್ವಜನಿಕ ಆರೋಗ್ಯ ಸೇವೆಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.

ಇನ್ನೂ ಮುಂದೆ ಮಳೆ ಆಗದೆ ಹೋದರೆ ಕೊಳವೆಬಾವಿಗಳಲ್ಲಿ ನೀರಿನ ಇಲ್ಡ್ ಕಡಿಮೆ ಆಗುತ್ತದೆ. ನೀರಿನ ಕೊರತೆ ಆಗುವ ಪದೇಶಗಳನ್ನು ಗುರುತಿಸಿ ನೀರಿನ ಪೂರೈಕೆಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಿಕೊಳ್ಳಿ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಗುರುತಿಸಿಕೊಳ್ಳಿ ಎಂದು ಅವರು ತಿಳಿಸಿದರು.

ಈಗಾಗಲೇ ಇರುವ ಆರ್ ಓ ಪ್ಲಾಂಟ್ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ರಿಪೇರಿ ಮಾಡಲಾಗದ ಸ್ಥಿತಿಗೆ ಇರುವ ಆರ್ ಓ ಪ್ಲಾಂಟ್ ತೆಗೆದು ಹೊಸ ಆರ್ ಒ ಪ್ಲಾಂಟ್ ಗಳನ್ನು ಸ್ಥಾಪಿಸಬೇಕು. ನೀರಿನ ಓವರ್ ಹೆಡ್ ಟ್ಯಾಂಕ್ ಗಳನ್ನು ವರ್ಷದಲ್ಲಿ ಎರಡು ಬಾರಿ ಕ್ಲೀನ್ ಮಾಡಿಸಬೇಕು ಎಂದರು.

ಇಂದಿರಾ ಕ್ಯಾಂಟೀನ್ ಗುಣಮಟ್ಟದ ಆಹಾರ

ಅಗತ್ಯ ಇರುವೆಡೆ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ವಹಿಸಿ. ಇಂದಿರಾ ಕ್ಯಾಂಟೀನ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ಮೇನು ನೀಡಲಾಗಿದೆ. ಅಧಿಕಾರಿಗಳು ಆಗಾಗ ಭೇಟಿ ನೀಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು.

ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ. ಇದರಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇಲ್ಲ. ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವುದು ನಮ್ಮ ಗುರಿಯಾಗಿದೆ. ಯಾವ ಏಜೆನ್ಸಿ ಅವರು ಗುಣಮಟ್ಟದ ಆಹಾರ ನೀಡುವುದಿಲ್ಲ ಅವರನ್ನು ತೆಗೆದು ಹಾಕಿ, ಬ್ಲಾಕ್ ಲೀಸ್ಟ್ ಗೆ ಸೇರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ತಿಳಿಸಿದರು.

ಇಂದಿರಾ ಕ್ಯಾಂಟಿನ್ ಗಳಲ್ಲಿ ಸ್ಥಳೀಯ ಆಹಾರ ಪದ್ಧತಿಗೆ ಅನುಗುಣವಾಗಿ ಮೆನು ಬದಲಾಯಿಸಿಕೊಳ್ಳಿ. ಮಂಗಳೂರು ಭಾಗದಲ್ಲಿ ಕುಸುಲಕ್ಕಿ, ಮಂಗಳೂರು ಬನ್ ರೀತಿ ಆಹಾರಗಳನ್ನು ನೀಡಿ. ಇಂದಿರಾ ಕ್ಯಾಂಟೀನ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.

ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಪೌರಕಾರ್ಮಿಕರಿಗೆ ಸೇಫ್ಟಿ ಪರಿಕರಗಳನ್ನು ವಿತರಿಸಬೇಕು. ಸಕಾಲದಲ್ಲಿ ಅವರಿಗೆ ಸಂಬಳ ನೀಡಬೇಕು ಎಂದು ಅವರು ಹೇಳಿದರು.

ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಅಜಯ್ ನಾಗಭೂಷಣ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಗೆ ಜಾಗ ಇಲ್ಲದೆ ಇದ್ದರೆ ಮೊಬೈಲ್ ಕ್ಯಾಂಟೀನ್ ಗೆ ಅವಕಾಶ ಇದೆ. ಇಂದಿರಾ ಕ್ಯಾಂಟೀನ್ ಗಳಲ್ಲಿ ಬೆಳಗ್ಗೆ 150 ಗ್ರಾಂ, ಮಧ್ಯಾಹ್ನ ಹಾಗೂ ಸಂಜೆ 250 ಗ್ರಾಂ ಬೇಯಿಸಿದ ಆಹಾರವನ್ನು ನೀಡಬೇಕು ಎಂದರು.

ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 16 ಇಂದಿರಾ ಕ್ಯಾಂಟಿನ್ ಗಳು ಇದ್ದು, ಇನ್ನೂ 13 ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಜಾಗ ಗುರುತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನೂ 10 ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ವರದಿಯನ್ನು ಸಲ್ಲಿಸಲಾಗುವುದು. ಚಾಮುಂಡಿಬೆಟ್ಟ, ಅರಮನೆ ಹಾಗೂ ಮೈಸೂರು ಝೂ ನಲ್ಲಿ ಮೊಬೈಲ್ ಕ್ಯಾಂಟೀನ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಡಿಸೆಂಬರ್ ನಂತರ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕಿ ಮಂಜುಶ್ರೀ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್ ಮೊದಲಾದವರು ಇದ್ದರು.

ಉಳ್ಳಾಲದ ದರ್ಗಾ ಬಳಿ ಹೆಚ್ಚಿನ ಜನ ಸಂದಣಿ ಇದ್ದು, ಇಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಕ್ರಮ ವಹಿಸಿ. ಹಲವು ಕಡೆ ಹೊಸದಾಗಿ ಆರಂಭವಾದ ಅಂಗಡಿಗಳಲ್ಲಿ ತೆರಿಗೆ ವಸೂಲು ಮಾಡುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ವಸೂಲಾತಿ ಗುರಿಯನ್ನು ಸಾಧಿಸಬೇಕು.

- ರಹೀಂ ಖಾನ್, ಪೌರಾಡಳಿತ ಮತ್ತು ಹಜ್ ಸಚಿವರು

Latest Videos
Follow Us:
Download App:
  • android
  • ios