Asianet Suvarna News Asianet Suvarna News

ನಿಮ್ಮ ಜಮೀನು ನಕ್ಷೆ ನೀವೇ ತಯಾರಿಸಲು ಸ್ವಾವಲಂಬಿ: ದೇಶದಲ್ಲೇ ಮೊದಲ ಬಾರಿ ಜಾರಿಗೆ ತಂದ ಕರ್ನಾಟಕ..!

ರೈತರು ತಮ್ಮ ಜಮೀನಿನ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಲು ಸ್ವಾವಲಂಬಿ ಆ್ಯಪ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. 

Swavalambi App to Prepare Your Land Map Yourself grg
Author
First Published Oct 7, 2022, 11:30 PM IST

ಬಾಗಲಕೋಟೆ(ಅ.07):  ರೈತರು ತಮ್ಮ ಜಮೀನಿನ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಲು ಸ್ವಾವಲಂಬಿ ಆ್ಯಪ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಇದು ದೇಶದಲ್ಲಿಯೇ ಮೊದಲ ಬಾರಿ ಜಾರಿಗೆ ತಂದ ಮೊದಲ ರಾಜ್ಯವಾಗಿದೆ ಎಂದು ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಮುಳಗುಂದ ತಿಳಿಸಿದ್ದಾರೆ.

ಮುಟೇನ್‌ ಪೂರ್ವ ನಕ್ಷೆ ಯೋಜನೆಯು ಕರ್ನಾಟಕ ರಾಜ್ಯಾದ್ಯಂತ ಪ್ರಾರಂಭವಾದಾಗಿನಿಂದ ಜನಸಾಮಾನ್ಯರಿಗೆ ತಮ್ಮ ಜಮೀನುಗಳ ಪೈಕಿ ಖರೀದಿ, ವಾಟ್ನಿ, ದಾನ ಪತ್ರ ಇತ್ಯಾದಿ ಹಕ್ಕು ಬದಲಾವಣೆ ವ್ಯವಹಾರಗಳಲ್ಲಿ ವ್ಯಾಜ್ಯ ರಹಿತ ಸೇವೆ ಸಲ್ಲಿಸುವಲ್ಲಿ ಭೂಮಾಪನ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬಳಸಿ ಸಾಕಷ್ಟುಮಾರ್ಪಾಡು ಮಾಡಿ ಸಾರ್ವಜನಿಕರ ಸೇವೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ತೊಂದರೆ ನೀಗಿಸುವ ನಿಟ್ಟಿನಲ್ಲಿ ಸ್ವಾವಲಂಬಿ ಅಪ್ಲಿಕೇಷನ್‌ ರೂಪಿಸಲಾಗಿದೆ.

ಮಲಪ್ರಭಾ ನದಿ ದಂಡೆಯ ರೈತರಿಗೆ ನಿಲ್ಲದ ಕಾಲುವೆ ಸಂಕಷ್ಟ, ಕಳಪೆ ಕಾಮಗಾರಿಯಿಂದ ಅವಾಂತರ

ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್‌ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಕಚೇರಿಗಳನ್ನು ಅಲೆಯುವ ಜಂಜಾಟ ಇನ್ನು ಮುಂದೆ ತಪ್ಪಲಿದೆ. ಹೌದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಪಿಸುವುದಕ್ಕೆ ಸ್ವಾವಲಂಬಿ ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ವೆಬ್‌ಸೈಟ್‌ ಮೂಲಕವೇ ಭೂಮಿಯ ಮಾಲೀಕರು ಜಮೀನಿನ 11ಇ ನಕ್ಷೆ, ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು rdservices.karnataka.gov.in ವೆಬ್‌ಸೈಟ್‌ ಮೂಲಕ ಫೀ ಭರಣ ಮಾಡಿ ಅರ್ಜಿ ಸಲ್ಲಿಸಿದಲ್ಲಿ, ಅರ್ಜಿದಾರರು ಕೋರಿರುವ ಹಿಸ್ಸೆಗೆ ಸಂಬಂಧಿಸಿದ ನಕ್ಷೆಯನ್ನು ಇಲಾಖೆ ಮುಖಾಂತರ ಅಪ್‌ಲೋಡ್‌ ಮಾಡಲಾಗುತ್ತದೆ. ಅರ್ಜಿದಾರರು ಸದರಿ ನಕ್ಷೆಯನ್ನು ಡೌನ್‌ಲೋಡ್‌ ಮಾಡಿ, ಮಾರಾಟವಾಗಬೇಕಾದ ಭೂಮಿಯನ್ನು ನಿರ್ದಿಷ್ಟಅಳತೆ ಗುರುತಿಸಿ ಮರು ಅಪ್‌ಲೋಡ್‌ ಮಾಡಬೇಕು. ಇಲಾಖೆಯು ಅದನ್ನು ಪರಿಶೀಲಿಸಿದ ಬಳಿಕ ಅನುಮೋದಿಸಿ ದೃಢೀಕರಿಸಿ ಮತ್ತೇ ಅಪ್‌ಲೋಡ್‌ ಮಾಡಲಾಗುತ್ತದೆ. ಸದರಿ ನಕ್ಷೆಯನ್ನು ಆನ್‌ಲೈನ್‌ನಲ್ಲಿ ಎಲ್ಲಿ ಬೇಕಾದರೂ ಪ್ರಿಂಟ್‌ ಪಡೆದು ಮಾರಾಟಕ್ಕೆ ನೋಂದಣಿ ಮಾಡಿಕೊಡಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ಪ್ರತ್ಯೇಕ ಪಹಣಿಗಳು ಸೃಜಿಸಲಾಗುತ್ತದೆ.

ಬಿಜೆಪಿ ಹಿಡಿತದ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಗೆಲುವು ಖಚಿತ

ಈ ಮೊದಲು ನಾಡಕಚೇರಿಗೆ ಹೋಗಿ ಜಮೀನಿನ 11ಇ, ಪೋಡಿ ಕಾರ್ಯ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತ್ತಿತ್ತು. ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು. ಭೂಮಾಪಕರು ಜಮೀನನ್ನು ಪರಿಸೀಲಿಸಿ ನಕ್ಷೆ ಗುರುತಿಸಿ ಅಪ್‌ಲೋಡ್‌ ಮಾಡುತ್ತಿದ್ದರು. ಅಪ್‌ಲೋಡ್‌ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಗೆ ಕಳುಹಿಸಲಾಗುತ್ತಿತ್ತು. ಆದರೆ ಸ್ವಾವಲಂಬಿ ವೆಬ್‌ಸೈಟ್‌ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು ಅತೀ ಕಡಿಮೆ ಅವಧಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ.

ಮೋಜಣಿ-ಕಾವೇರಿಗೆ ಲಿಂಕ್‌ ಸ್ವಾವಲಂಬಿ ವೆಬ್‌ಸೈಟ್‌ ಅನ್ನು ಭೂಮಾಪನ ಇಲಾಖೆಯ ಮೋಜಣಿ ಹಾಗೂ ಉಪನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶಕ್ಕೆ ಲಿಂಕ್‌ ಮಾಡಲಾಗಿದೆ. ಈ ಮೂಲಕ ಸೇವೆ ಪಡೆಯಬೇಕೆಂದರೆ ಆರ್‌ಟಿಸಿ (ಪಹಣಿ) ಹಾಗೂ ನೋಂದಾಯಿತ ಮೊಬೈಲ್‌ ನಂಬರ್‌ ಇರುವ ಆಧಾರ ಕಾರ್ಡ್‌ ತಾಳೆಯಾದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಅರ್ಜಿಗಳು ಸ್ವೀಕೃತವಾಗುತ್ತವೆ. ಕಡ್ಡಾಯವಾಗಿ ಜಮೀನಿನ ಆರ್‌ಟಿಸಿ ನಂಬರ್‌ ಇದ್ದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ. ಈ ಹೊಸ ಯೋಜನೆಯ ಲಾಭವನ್ನು ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಭೂದಾಖಲೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.

Follow Us:
Download App:
  • android
  • ios