ಮಲಪ್ರಭಾ ನದಿ ದಂಡೆಯ ರೈತರಿಗೆ ನಿಲ್ಲದ ಕಾಲುವೆ ಸಂಕಷ್ಟ, ಕಳಪೆ ಕಾಮಗಾರಿಯಿಂದ ಅವಾಂತರ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಬಳಿ ಕಾಲುವೆಯ ಕಳಪೆ ಕಾಮಗಾರಿ. ಒಡೆದು ಹೋದ ಕಾಲುವೆಯಿಂದ ನಿಂತಲ್ಲಿ ನಿಂತ ನೀರು. ಹೊಲಗದ್ದೆಗಳಿಗೆ ನುಗ್ಗುವ ನೀರು. ಹೊಲದಲ್ಲಿ ನೀರು ನಿಂತು ಬೆಳೆಗಳು ಹಾಳು
ಬಾಗಲಕೋಟೆ (ಅ.7): ಸಾಮಾನ್ಯವಾಗಿ ಕಾಲುವೆಗೆ ನೀರು ಬಂದ್ರೆ ಸಾಕು ರೈತರು ಸಂತೋಷಪಡೋದನ್ನ ನೋಡಿದಿವಿ, ಆದ್ರೆ ಇಲ್ಲೊಂದು ಕಾಲುವೆಗೆ ನೀರು ಬಂದ್ರೆ ಸಾಕು ಯಾಕಾದ್ರೂ ನೀರು ಬರುತ್ತೋ ಅನ್ನೋ ಪರಿಸ್ಥಿತಿ ಇಲ್ಲಿನ ರೈತರಿಗಾಗಿದೆ. ಕಾಲುವೆಗೆ ನೀರು ಬಂದ್ರೆ ರೈತರಿಗೆ ಸಂಕಷ್ಟ ಎದುರಾಗುತ್ತೆ. ಒಂದೆಡೆ ಎಲ್ಲೆಂದರಲ್ಲಿ ಕಳಪೆಯಾಗಿರೋ ಕಾಲುವೆ ಕಾಮಗಾರಿ, ಮತ್ತೊಂದೆಡೆ ಕಾಲುವೆಯಲ್ಲಿ ಮುಂದೆ ಹೋಗದೇ ಅಕ್ಕಪಕ್ಕದ ಹೊಲಗದ್ದೆಗಳಿಗೆ ನುಗ್ಗಿದ ನೀರು, ಇವುಗಳ ಮಧ್ಯೆ ಉತ್ತಮ ರಸ್ತೆಗಳಿಲ್ಲದೆ ಅತಂತ್ರ ಸಂಚಾರದ ಸ್ಥಿತಿಯಲ್ಲಿರೋ ರೈತ ಸಮೂಹ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬರೋದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ. ಈ ಭಾಗದಲ್ಲಿ ಮಲಪ್ರಭಾ ನದಿಯ ಇಕ್ಕೆಲಗಳಲ್ಲಿ ಬರುವ ಹೊಲಗದ್ದೆಗಳಿಗೆ ನೀರಾವರಿ ಸೌಲಭ್ಯವಾಗಲಿ ಅನ್ನೋ ಉದ್ದೇಶದಿಂದ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಿಸಿ ನೀರು ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಆದ್ರೆ ಈ ಭಾಗದಲ್ಲಿ ಮಾಡಿರುವ ಕಾಲುವೆ ಕಾಮಗಾರಿಯಲ್ಲಿ ಕೆಲವೆಡೆ ಕಳಪೆ ಕಾಮಗಾರಿಯಾಗಿದ್ದು, ಎಲ್ಲೆಂದರಲ್ಲಿ ಬಿರುಕು ಬಿಟ್ಟಿರೋ ದೃಶ್ಯಗಳು ಕಂಡು ಬರುತ್ತಿವೆ, ಇದ್ರಿಂದ ರೈತರು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ. ಒಂದೊಮ್ಮೆ ಕಾಲುವೆಗೆ ನೀರು ಬಿಟ್ಟಲ್ಲಿ, ಕಳಪೆ ಕಾಲುವೆ ಕಾಮಗಾರಿಯಾಗಿದ್ದರಿಂದ, ಬಿಟ್ಟಂತಹ ನೀರು ಮುಂದೆ ಹೋಗದೇ ಅಕ್ಕಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿ ಹೊಲಗದ್ದೆಗಳಲ್ಲಿನ ಬಹುತೇಕ ಬೆಳೆಗಳು ಹಾನಿಯಾಗುವಂತಾಗಿದೆ.
ಕಾಲುವೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಾಡಿದ ಕೋಟಿ ಕೋಟಿ ಖರ್ಚು ನೀರಿನಲ್ಲಿ ಹೋಮ!
ಹೌದು, ಸರ್ಕಾರ ರೈತರಿಗೆ ನೀರಾವರಿ ಅನುಕೂಲಕತೆ ಸಿಗಲಿ ಅನ್ನೋ ಕಾರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿ ಕಾಲುವೆಗಳನ್ನ ನಿರ್ಮಾಣ ಮಾಡುತ್ತೇ ಆದರೆ ಮಲಪ್ರಭಾ ನದಿಯ ಎಡದಂಡೆಯಲ್ಲಿ ನಿರ್ಮಾಣ ಮಾಡಿರುವ ಕಾಮಗಾರಿ ಕಳಪೆಯಾಗಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಯಾಕಂದ್ರೆ ಇಲ್ಲಿ ಇತ್ತೀಚಿಗಷ್ಟೇ ಕಾಲುವೆ ಕಾಮಗಾರಿ ನಡೆದಿದ್ದು, ಅದು ಕೆಲವೆಡೆ ಕಳಪೆಯಾಗಿ ಬಿರುಕುಬಿಟ್ಟಿದೆ, ಇದರಿಂದ ರೈತ ಸಮೂಹಕ್ಕೆ ಸಂಕಷ್ಟ ಎದುರಾಗಿದೆ. ರೈತರಿಗಾಗಿ ಮಾಡಿದಂತ ಯೋಜನೆ ಇಲ್ಲ ವಿಫಲತೆ ಕಾಣುತ್ತಿದೆ. ಹೀಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಲುವೆ ಕಾಮಗಾರಿ ನಡೆದ್ರೂ ಅದು ಕಳಪೆಯಾಗಿದ್ದು, ಕೂಡಲೇ ಸಂಭಂದಪಟ್ಟವರು ಈ ಸಂಭಂದ ಕ್ರಮಕೈಗೊಂಡು ರೈತರ ನೆಮ್ಮದಿಗೆ ಮುಂದಾಗಬೇಕು ಅಂತಾರೆ ಸ್ಥಳೀಯರಾದ ಮೋದಿನ್.
ಬಾಗಲಕೋಟೆಯಲ್ಲಿ ಉಕ್ಕಿ ಹರಿಯುತ್ತಿರೋ ಮಲಪ್ರಭಾ ಮತ್ತು ಘಟಪ್ರಭಾ ನದಿ, ಓರ್ವ ಯುವಕ ಬಲಿ
ಕಾಲುವೆ ನೀರು ನುಗ್ಗಿ ಜೋಳ, ಗೋವಿನಜೋಳ ಸೇರಿದಂತೆ ಪ್ರಮುಖ ಬೆಳೆಗಳಿಗೆ ಜಲಸಂಕಷ್ಟ!
ಇನ್ನು ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಬಿಟ್ಟಾಗ, ಅಲ್ಲಿನ ನೀರು ಮುಂದಿನ ಭಾಗಕ್ಕೆ ಹೋಗದೇ ಕಳಪೆಯಾಗಿರೋ ಕಡೆಯಿಂದ ಇಕ್ಕೆಲಗಳ ಹೊಲಗದ್ದೆಗಳಿಗೆ ನುಗ್ಗುವುದರಿಂದ ಈ ಭಾಗದ ಜೋಳ, ಗೋವಿನಜೋಳ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ಹೋಗುತ್ತಿವೆ. ಕಷ್ಟಪಟ್ಟು ದುಡಿದ ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಪಡುವಂತಾಗಿದೆ. ಈ ಮಧ್ಯೆ ಕಾಲುವೆ ಜೊತೆಗೆ ಇರುವ ದಾರಿಯನ್ನೂ ಸಹ ಸಮರ್ಪಕವಾಗಿ ಮಾಡಿಲ್ಲ, ಇದ್ರಿಂದ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಮತ್ತು ಬರಲು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಫ್ಯಾಕ್ಟರಿಗಳಿಗೆ ಕಬ್ಬು ಸಾಗಿಸುವಾಗಲು ತೊಂದರೆಪಡುವಂತಾಗಿದೆ. ಹೀಗಾಗಿ ಕೂಡಲೇ ಸಂಬಂದಪಟ್ಟ ಸಚಿವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ರೈತ ಮಕ್ತುಮ್ ಆಗ್ರಹಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಗೆ ಲೀಗಲ್ ನೋಟೀಸ್ ನೀಡಲು ಎಂ.ಬಿ.ಪಾಟೀಲ್ ನಿರ್ಧಾರ
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತಾಪಿ ವರ್ಗ ಇದೀಗ ಕಳಪೆ ಕಾಮಗಾರಿಯ ಕಾಲುವೆಯಿಂದ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದು, ಆದಷ್ಟು ಶೀಘ್ರ ಈ ಸಂಬಂದ ಕ್ರಮಕೈಗೊಂಡು ಈ ಭಾಗದ ರೈತರ ನೆಮ್ಮದಿಗೆ ಸಂಭಂಪಟ್ಟವರು ಕಾರಣವಾಗ್ತಾರಾ ಅಂತ ಕಾದು ನೋಡಬೇಕಿದೆ.