Asianet Suvarna News Asianet Suvarna News

ಪ್ರಯಾಣಿಕರ ಪಾಲಿಗೆ ಬೆಳಕಾಗಿ ಬಂದ ಸೂರ್ಯವಂಶಿ ಎಲ್ಲರ ಪ್ರಾಣ ಕಾಪಾಡಿದರು

ಕಲಬುರಗಿಯಿಂದ ಶಹಾಬಾದ್‌ಗೆ ಹೊರಟಿದ್ದ ಬಸ್‌ನ ಬ್ರೇಕ್ ಮಾರ್ಗ ಮಧ್ಯದಲ್ಲಿ ಫೇಲ್‌ಆಗಿಬಿಡುತ್ತದೆ. ಡ್ರೈವರ್, ಕಂಡಕ್ಟರ್ ಇಬ್ಬರೂ ಗೊಂದಕ್ಕೆ ಬೀಳುತ್ತಾರೆ. ತುಂಬಿದ ಬಸ್‌ನಲ್ಲಿ ಇರುವ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದರೆ ಎಲ್ಲರೂ ಆತಂಕಕ್ಕೀಡಾಗುತ್ತಾರೆ, ಹೇಳದೇ ಇದ್ದರೆ ಕಷ್ಟ, ಹೀಗಿರುವಾಗ ಏನು ಮಾಡುವುದು ಎಂದುಕೊಳ್ಳುವಾಗ ನೆರವಿಗೆ ಬಂದು ಇಡೀ ಬಸ್‌ನ ಪ್ರಯಾಣಿಕರ ಪ್ರಾಣ ಕಾಪಾಡಿದ್ದು ಸೂರ್ಯವಂಶಿ. ಸಂದಿಗ್ಧ ಸಮಯದಲ್ಲಿ ಅವರು ಮಾಡಿದ ಸಾಹಸದ ವಿವರ ಇಲ್ಲಿದೆ. ಇಂತಹ ಸಾಹಸಿಗೆ ಈ ಬಾರಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ-2019 ನೀಡಿ ಗೌರವಿಸಿದೆ.

Suvarna News Kannada Prabha Shourya Award 2019 Suryavamshi Profile
Author
Bengaluru, First Published Jan 2, 2020, 3:13 PM IST

ಬೆಂಗಳೂರು[ಜ.02]:  2016 ನೇ ಇಸ್ವಿ, ಜುಲೈ 25ನೇ ತಾರೀಖು, ಎಂದಿನಂತೆ  ಕಲಬುರಗಿ ಶಹಾಬಾದ್‌ಗೆ ಬೆಳಗಿನ 8 ಗಂಟೆಯ ಬಸ್ಸು ಹೊರಟಿತ್ತು. ಪ್ರಯಾಣಿಕರು, ಅದರಲ್ಲೂ ಸರಕಾರಿ ನೌಕರರೇ ಅಧಿಕವಾಗಿದ್ದಂತಹ ಕಿಕ್ಕಿರಿದು ತುಂಬಿದ್ದ ಬಸ್ಸು ಅದಾಗಿತ್ತು.

ಬಸ್ಸು ರೇಲ್ವೆ ಮೇಲ್ ಸೇತುವೆ ಹತ್ತಿ ಇಳಿಜಾರಿನಲ್ಲಿ ಓಡೋಡುತ್ತ ಹೊರಟಿತ್ತು. ಅದ್ಯಾಕೋ ಚಾಲಕ ಅಂಬರೀಷ್ ಬೆವರತೊಡಗಿದ, ಕುಳಿತಲ್ಲೇ ಆತನ ಮೊಗ ಬಿಳಚಿಕೊಂಡಿತ್ತು. ಆಗಸವೇ ತಲೆ ಮೇಲೆ ಕಳಚಿ ಬಿತ್ತು ಎಂಬಂತಾಗಿ ಆಚೀಚೆ ನೋಡಲಾರಂಭಿಸಿದ್ದ. ಇದನ್ನರಿತ ನಿರ್ವಾಹಕ ಮಹೇಶ ಅಂಬರೀಷ್ ಬಳಿ ಹೋದಾಗಲೇ ಗೊತ್ತಾಗಿದ್ದು ಬಸ್ಸಿನ ಬ್ರೆಕ್ ಫೇಲ್ ಆಗಿದೆ ಎಂದು.

ಸೂರ್ಯವಂಶಿಗೆ ಮಾತ್ರ ತಿಳಿದ ವಿಷಯ ಇವಾಗ ಏನ್ಮಾಡೋದು ಎಂದು ತೊಚದೆ ಡ್ರೈವರ್, ಕಂಡಕ್ಟರ್ ಇಬ್ಬರೂ ಕಂಗಾಲು. ಆದರೂ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ನಿಭಾಯಿಸಬೇಕು. ಬ್ರೇಕ್ ಫೇಲ್ ಆಗಿರುವ ವಿಚಾರ ಯಾವೊಬ್ಬ ಪ್ರಯಾಣಿಕನಿಗೂ ಗೊತ್ತಾಗ ಬಾರದು. ಒಂದು ವೇಳೆ ಗೊತ್ತಾದರೆ ಎಲ್ಲರೂ ಆತಂಕಕ್ಕೆ ಒಳಗಾಗುತ್ತಾರೆ ಎಂದು ನಿರ್ಧರಿಸುತ್ತಾರೆ. ಅದರಂತೆಯೇ ಕಂಡಕ್ಟರ್ ಈ ವಿಚಾರವನ್ನು ಗುಟ್ಟಾಗಿ ಇಟ್ಟರೂ ಬಸ್ಸಿನಲ್ಲಿದ್ದ ಅಬಕಾರಿ ಇಲಾಖೆಯ ಗಾರ್ಡ್ ಯಶವಂತರಾವ ಸೂರ್ಯವಂಶಿಯವರೊಬ್ಬರಿಗೆ ಇದನ್ನು ತಿಳಿಸಿ. ಸಹಾಯ ಬೇಡಿದ್ದಾರೆ. ಇದೊಂದು ಸಹಾಯ ಬಸ್ ದುರಂತಕ್ಕೀಡಾಗುವುದನ್ನು ತಪ್ಪಿಸಿತ್ತು. ಸೂರ್ಯವಂಶಿ ಅವರ ಸಾಹಸದ ಅನಾವರಣವಾಗಲು ಕಾರಣವಾಗಿತ್ತು.

ಸವಾಲಿನ ಸಾಹಸ
ಬಸ್ಸು ದುರಂತಕ್ಕೀಡಾಗುವ ಮುನ್ಸೂಚನೆ ಅರಿತ ಸೂರ್ಯವಂಶಿ ತಡಮಾಡದೆ ಕಂಡಕ್ಟರ್ ಜೊತೆ ಕೆಲಕ್ಷಣ ಚರ್ಚಿಸಿದವರೇ ತಮ್ಮ ಉಪಾಯ ಹೇಳಿ, ಬಸ್ಸಿನ ಬಾಗಿಲು ತೆರೆದು ಹೊರಗೆ ಧುಮುಕಿದ್ದಾರೆ, ಇವರ ಬೆನ್ನಲ್ಲೇ ಕಂಡಕ್ಟರ್ ಮಹೇಶ ಸಹ ಬಸ್ಸಿನಿಂದ ಕೆಳಗೆ ಧುಮುಕಿದ್ದಾರೆ. ಅಷ್ಟೊತ್ತಿಗಾಗಲೇ ಸೂರ್ಯವಂಶಿ ಓಡೋಡುತ್ತ ಹೋಗಿ ರಸ್ತೆಯಬದಿಯಲ್ಲಿ ಬಿದ್ದಿದ್ದಂತಹ ಕಲ್ಲು, ಗುಂಡುಗಳನ್ನೆಲ್ಲ ಹೊತ್ತು ತಂದು ಓಡುತ್ತಿದ್ದ ಬಸ್ಸಿನ ಚಕ್ರಗಳಿಗೆ ಅಡ್ಡಲಾಗಿ ಹಾಕಿದ್ದಾರೆ. ತುಸು ಯಾಮಾರಿದ್ದರೂ ದೊಡ್ಡ ಅಪಾಯವೇ ಸಂಭವಿಸಬಹುದಾಗಿದ್ದ ಈ ವೇಳೆಯಲ್ಲಿ ಅವರು ತುಂಬಾ ಚಾಣಾಕ್ಷತೆಯಿಂದ ಈ ಕಾರ್ಯ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಕಂಡಕ್ಟರ್ ಮಹೇಶ್ ಸಹ ಕೈ ಜೋಡಿಸಿದ್ದಾರೆ.

ಶೌರ್ಯ ಪ್ರಶಸ್ತಿಗೆ ಸಂಬಂಧಿಸಿದ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

ಇವರಿಬ್ಬರ ಸತತ ಯತ್ನದಿಂದ ಇಳಿಜಾರಿನಲ್ಲಿ ನಿಲ್ಲದೆ ಓಡುತ್ತಿದ್ದ ಬಸ್ಸು 300 ಮೀಟರ್ ಕ್ರಮಿಸಿ ಕೊನೆಗೂ ನಿಂತಿತು. ಇದರಿಂದ ಚಾಲಕ ಅಂಬರೀಷ್ ನೆಮ್ಮದಿ ನ್ಟಿಟುಸಿರು ಬಿಟ್ಟರೆ ನಿರ್ವಾಹಕ ಹಾಗೂ ಸೂರ್ಯವಂಶಿಯವರು ತಮ್ಮ ಉಪಾಯ ಫಲಿಸಿತು, ನೂರಾರು ಪ್ರಯಾಣಿಕರ ಪ್ರಾಣ ಉಳಿಯಿತು ಎಂದು ಬೀಗಿದ್ದರು.

ಸೂರ್ಯವಂಶಿಗೆ ಶರಣು
ಘಟನೆ ಸುಖಾಂತ್ಯ ಕಂಡ ಬಳಿಕ ಬಸ್ಸಿನಲ್ಲಿದ್ದವರೆಲ್ಲರನ್ನೂ ಕೆಳಗಿಳಿಸಿ ಬ್ರೆಕ್ ಫೇಲ್ ಆಗಿದ್ದ ಸಂಗತಿ ತಿಳಿಸಿದಾಗ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಕಂಪಿಸಿದ್ದರು. ಮುಂದಾಗಬಹುದಾಗಿದ್ದ ದೊಡ್ಡ ಗಂಡಾಂತರವನ್ನು ತಪ್ಪಿಸಿದ ನಿರ್ವಾಹಕ ಮಹೇಶ್, ಚಾಲಕ ಅಂಬರೀಷ್ ಅವರ ಸಮಯ ಪ್ರಜ್ಞೆಗೆ ಸಲಾಂ ಹೇಳಿದರೆ, ತಕ್ಷಣಕ್ಕೆ ಸ್ಪಂದಿಸಿ ಎಲ್ಲರ ಪ್ರಾಣ ಕಾಪಾಡಿದ ಸೂರ್ಯವಂಶಿ ಅವರಿಗೆ ಅಭಿನಂದಿಸಿ, ತಮ್ಮ ಪ್ರಾಣ ಉಳಿಸಿದ ಪುಣ್ಯಾತ್ಮರು ನೀವು ಎಂದು ಕೊಂಡಾಡಿದ್ದಾರೆ. 

ಈಶಾನ್ಯ ಸಾರಿಗೆ ಸಂಸ್ಥೆ ಅಪಘಾತದಿಂದ ಬರುತ್ತಿದ್ದ ಕೆಟ್ಟ ಹೆಸರು ತಪ್ಪಿತು, ಸಂಸ್ಥೆಯ ಘನತೆ ಉಳಿಯಿತು, ಆರ್ಥಿಕ ನಷ್ಟವೂ ತಪ್ಪಿತು ಎಂದು ಸೂರ್ಯವಂಶಿ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿತ್ತು.

ನಿರಂತರ ಕ್ರಿಯಾಶೀಲರು
ಕಲಬುರಗಿಯ ಲೋಹಾರಗಲ್ಲಿ ನಿವಾಸಿ, ಸರಕಾರಿ ನೌಕರರಾಗಿರುವ ಯಶ್ವಂತರಾವ ಸೂರ್ಯವಂಶಿ ನಿರಂತರ ಕ್ರಿಯಾಶೀಲರು. ಎಲ್ಲಾದರೂ ಯಾರಿಗಾದರೂ ತೊಂದರೆಯಾಗಿದೆ ಎಂದರೆ ತಕ್ಷಣ ಸ್ಪಂದಿಸುವವರು. ಸರಕಾರಿ ಕೆಲಸವಿದೆ, ತಾನಾಯ್ತು, ತನ್ನ ಕೆಲಸವಾಯ್ತು, ಇನ್ಯಾಕೆ ಪರರ ಚಿಂತೆ? ಎಂದು ಎಂದೂ ಕೈಕಟ್ಟಿಕೊಂಡು ಕುಳಿತವರಲ್ಲ. ಅವರಿಗೀಗ ೫೮ರ ಹರೆಯ, ಈ ಇಳಿ ವಯಸ್ಸಿನಲ್ಲಿಯೂ ಪಾದರಸದಂತೆಸಮಾಜ ಸೇವೆಗೂ ನಿಲ್ಲುತ್ತಾರೆ.

19 ಮಂದಿಯನ್ನು ರಕ್ಷಿಸಿದ್ದರು 
ಹಿಂದೆ ಚಿತ್ತಾಪುರ ತಾಲೂಕಿನ ಬೆಳಗುಂಪಾ ಬಳಿ ಸಂಭವಿಸಿದ್ದ ಅಪಘಾತದಲ್ಲಿ 19 ಜನ ಜೀವನ್ಮರಣ ಹೋರಾಟದಲ್ಲಿದ್ದಾಗ ಅವರ ಪಾಲಿಗೆ ವರವಾಗಿ ಬಂದವರು ಇದೇ ಸೂರ್ಯವಂಶಿ. ಸಹಾಯಕ್ಕಾಗಿ ಕಾಯುತ್ತಿದ್ದ ಗಾಯಾಳುಗಳ ಬಳಿಗೆ ತೆರಳಿ, ಖುದ್ದಾಗಿ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿ ತನ್ನದೇ ವೇತನದ ಹಣದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿದ್ದರು. ಆ ವೇಳೆ ಎಲ್ಲರೂ ಅಪಾಯದಿಂದ ಪಾರಾಗಿದ್ದರು ಕೂಡ. ಸದ್ಯ ಓರ್ವ ಪುತ್ರ ದೀಪಕ್, ಪುತ್ರಿ ಸರಿತಾ ಮೋಹಿತೆ, ಪತ್ನಿ ಮೀನಾಕ್ಷಿ, ಪೋಷಕರಾದ ಅಂಬಾದಾಸರಾವ್- ಕಾಂತಾಬಾಯಿ ಒಳಗೊಂಡ ತುಂಬು ಸಂಸಾರದಲ್ಲಿ ಸೂರ್ಯವಂಶಿ ಸಂತೋಷಿಯಾಗಿದ್ದಾರೆ. ಚಿತ್ತಾಪುರದಲ್ಲಿ ಅಬಕಾರಿ ರಕ್ಷಕ ಸೇವೆಯಲ್ಲಿರುವ ಇವರು ಅಲ್ಲಿಯೂ ಪ್ರಾಮಾಣಿಕತೆ ಮೂಲಕವೇ ಹೆಸರಾದವರು. ಇನ್ನೇನು ನಿವೃತ್ತಿ ಅಂಚನಲ್ಲಿ ಇವರಿದ್ದಾರೆ. ಜೊತೆಗೆ ಕಷ್ಟದಲ್ಲಿರುವವರಿಗಾಗಿ ಮಿಡಿಯುವ ಹೃದಯದ ಇವರು ಕಾರ್ಗಿಲ್ ಯುದ್ಧ ನಡೆದಾಗ ತಮ್ಮ ಸಂಬಳದ 15 ದಿನದ ವೇತನ ದೇಶದ ಯೋಧರಿಗೆ ನೀಡಿದರೆ, 
ಬದರಿ- ಕೇದಾರ್ ಜಲ ಪ್ರಳಯದ ಸಂದರ್ಭದಲ್ಲಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು.

Follow Us:
Download App:
  • android
  • ios