Asianet Suvarna News Asianet Suvarna News

ಅಮಾನತು ಪರಿಹಾರವಲ್ಲ, ಕಾಮಗಾರಿ ಮುಗಿಸಿ: ಸಚಿವ ಆನಂದ್‌ ಸಿಂಗ್‌

ಅನುದಾನ ತಡೆಹಿಡಿಯುವುದು, ಅಮಾನತು ಮಾಡುವುದು, ಕಪ್ಪುಪಟ್ಟಿಗೆ ಸೇರಿಸುವುದು ಪರಿಹಾರವಲ್ಲ. ಆದರೆ, ಕಾಮಗಾರಿ ಪೂರ್ಣಗೊಳ್ಳುವುದು ಮತ್ತು ಜನರಿಗೆ ಅದರ ಅನುಕೂಲವಾಗುವುದು ಬಹಳ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಖಡಕ್‌ ಆಗಿ ಅಧಿಕಾರಿಗಳನ್ನು ಎಚ್ಚರಿಸಿದರು. 

Suspension is not a solution get the job done says minister anand singh at koppal gvd
Author
First Published Nov 3, 2022, 10:18 PM IST

ಕೊಪ್ಪಳ (ನ.03): ಅನುದಾನ ತಡೆಹಿಡಿಯುವುದು, ಅಮಾನತು ಮಾಡುವುದು, ಕಪ್ಪುಪಟ್ಟಿಗೆ ಸೇರಿಸುವುದು ಪರಿಹಾರವಲ್ಲ. ಆದರೆ, ಕಾಮಗಾರಿ ಪೂರ್ಣಗೊಳ್ಳುವುದು ಮತ್ತು ಜನರಿಗೆ ಅದರ ಅನುಕೂಲವಾಗುವುದು ಬಹಳ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಖಡಕ್‌ ಆಗಿ ಅಧಿಕಾರಿಗಳನ್ನು ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಸುಮಾರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಕುರಿತು ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಯಿತು. 

ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಈ ಕುರಿತು ಪ್ರಶ್ನೆ ಮಾಡಿ, ಇವು ಮುಗಿಯುವುದಾದರೂ ಯಾವಾಗ ಎಂದು ಕಾರವಾಗಿಯೇ ಕೇಳಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆಯ ಅಧಿಕಾರಿಗಳು ಈ ಕುರಿತು ವಿವರಣೆ ನೀಡುತ್ತಾರೆ. ಜಿಲ್ಲೆಯಲ್ಲಿ ಸುಮಾರು 15 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಕೆಲವೊಂದು ಪೂರ್ಣಗೊಂಡಿದ್ದು, ನಿರ್ವಹಣೆ ವೆಚ್ಚದ ಸಮಸ್ಯೆಯಾಗಿದೆ ಎಂದರು. ಸಂಸದ ಸಂಗಣ್ಣ ಕರಡಿ ಅವರು ಮಧ್ಯೆಪ್ರವೇಶಿಸಿ, ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾನಿಂದಲೂ ಇವುಗಳನ್ನೇ ಹೇಳುತ್ತಲೇ ಇದ್ದೀರಿ. ಅವು ಯಾವಾಗ ಮುಗಿಯುತ್ತವೆ, ಜನರಿಗೆ ಯಾವಾಗ ನೀರು ಕೊಡುತ್ತಿರಿ ಎಂದು ಕಿಡಿಕಾರಿದರು.

ಬಳ್ಳಾರಿಯಲ್ಲಿ ಕುಕ್ಕರ್ ಪಾಲಿಟಿಕ್ಸ್ ಆರಂಭ: ಪ್ರತಿ ಮನೆಗೊಂದು ಕುಕ್ಕರ್ ಉಡುಗೊರೆ

ಸಚಿವ ಹಾಲಪ್ಪ ಆಚಾರ ಮಾತನಾಡಿ, ಯಲುಬುರ್ಗಾ, ಕುಷ್ಟಗಿ ಕುಡಿಯುವ ನೀರು ಯೋಜನೆ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಕಾಮಗಾರಿ ನಿಧಾನಗತಿಯಲ್ಲಿ ಆಗುತ್ತಿರುವುದರಿಂದ ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್‌ ಮಾತನಾಡಿ, ಗುತ್ತಿಗೆ ಕಂಪನಿ ನಿಧಾನಗತಿಯನ್ನು ಅನುಸರಿಸುತ್ತಿರುವುದರಿಂದ ಅವರ ಅನುದಾನ ಕಡಿತ ಮಾಡಿದ್ದೇವೆ ಎಂದರು. ಇದರಿಂದ ಕೋಪಗೊಂಡ ಸಚಿವ ಆನಂದಸಿಂಗ್‌ ಅವರು, ಅಮಾನತು ಬಗ್ಗೆ, ಅನುದಾನ ಕಡಿತದ ಬಗ್ಗೆ ಹೇಳುತ್ತಿರಿ, ಇದರಿಂದ ಪ್ರಯೋಜನ ಆಗಲ್ಲ. ನಮಗೆ ಕೆಲಸ ಆಗಬೇಕಾಗಿರುವುದು ಮುಖ್ಯ ಎಂದರು.

ಅಮಾನತು ಪರಿಹಾರವಲ್ಲ: ಕೆಲಸ ಆಗುವುದು ಮುಖ್ಯ. ಅಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ಕೈಗೊಂಡು ಕಾಮಗಾರಿ ಆಗುವಂತೆ ಮಾಡಬೇಕು. ಅವರಿಗೆ ಹಣ ನೀಡಬೇಕೆ? ಬೇಡವೇ ಎನ್ನುವುದು ಬೇರೆ ಮಾತು. ಆದರೆ, ಆಗಬೇಕಾಗಿರುವ ಕಾಮಗಾರಿ ಆಗುವುದು ಬಹಳ ಮುಖ್ಯ ಎನ್ನುವುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಳಪೆ ಕಾಮಗಾರಿ: ಜಲಜೀವನ ಮಿಷನ್‌ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಆದರೆ, ಅದನ್ನು ಕಾರ್ಯಗತ ಮಾಡುವಲ್ಲಿ ಎಡವಲಾಗುತ್ತದೆ. ಕಳಪೆ ಕಾಮಗಾರಿ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಇದುವರೆಗೂ .390 ಕೋಟಿ ಕಾಮಗಾರಿ ಆಗಿದೆ ಎಂದು ಅಧಿಕಾರಿ ವಿವರಣೆ ನೀಡಿದಾಗ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಬಂದಿದ್ದರೂ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಳವಂಡಿ- ಬೆಟಗೇರಿ ಏತ ನೀರಾವರಿ ಯೋಜನೆಯ ಕುರಿತು ನೀರಾವರಿ ಇಲಾಖೆಯ ಅಧಿಕಾರಿ ಅವರು ವಿವರಣೆ ನೀಡಲು ಮುಂದಾಗುತ್ತಿದ್ದಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಆಕ್ರೋಶ ವ್ಯಕ್ತಪಡಿಸಿದರು. 

ಮಧ್ಯೆ ಪ್ರವೇಶ ಮಾಡಿದ ಸಂಸದ ಸಂಗಣ್ಣ ಕರಡಿ ಅವರು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಾಗೇಶನಹಳ್ಳಿಯಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿರುವುದಾಗಿ ಹೇಳುತ್ತಿರಿ. ಅಲ್ಲಿ ಇನ್ನು ಪ್ರಾರಂಭವಾಗಿಲ್ಲ. ಶಿಕ್ಷಕರೂ ಇಲ್ಲ ಎಂದರು. ಕಾರಟಗಿ ಕೆರೆ ನಿರ್ಮಾಣದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಇದನ್ನು ಮಾಡಲು ಎಷ್ಟುವರ್ಷ ಬೇಕು? ಎಲ್ಲ ದಾಖಲೆಯನ್ನು ನೀಡಲಾಗಿದೆ, ಅನುದಾನ ಬಿಡುಗಡೆಯಾಗಿದೆ. ಆದರೂ ಕಾಮಗಾರಿ ಪೂಜೆ ಮಾಡಿ 2 ವರ್ಷವಾದರೂ ಯಾಕೆ ಪ್ರಾರಂಭ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿಯ ಸಮಸ್ಯೆ ಇದ್ದು, ಇದನ್ನು ಇತ್ಯರ್ಥ ಮಾಡಬೇಕಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳಿದರು. ಆಗ ತಹಸೀಲ್ದಾರರು ಏನು ಮಾಡುತ್ತಿದ್ದಾರೆ? ಡಿಸಿ ಅವರೇ ಹೇಳಿದರೂ ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮಧ್ಯೆಪ್ರವೇಶ ಮಾಡಿದ ಸಚಿವ ಆನಂದಸಿಂಗ್‌ ಅವರು, ಏನ್ರಿ ಇದು, ಶಾಸಕರು ಅಷ್ಟುದಿನಗಳಿಂದ ಪ್ರಶ್ನೆ ಮಾಡುತ್ತಿದ್ದರೂ ಯಾಕೆ ಮಾಡುತ್ತಿಲ್ಲ? ಕೂಡಲೇ ಈ ಕಾಮಗಾರಿಯಾಗಬೇಕು ಎಂದರು. ಕೃಷಿ ಇಲಾಖೆಯ ಅಧಿಕಾರಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವರದಿಯ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸುಂದರೇಶಬಾಬು, ಎಸ್ಪಿ ಅರುಣಾಂಗ್ಷು ಗಿರಿ, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್‌ ಇದ್ದರು.

ತಪ್ಪು ಮಾಡದವರ ಮೇಲೆ ಕ್ರಮ: ಶಾಸಕರ ಆಕ್ರೋಶ: ಅಬಕಾರಿ ಡಿಸಿ ಅವರು ಇಲಾಖೆಯ ಪ್ರಗತಿಯ ಕುರಿತು ಮಾಹಿತಿ ನೀಡುತ್ತಿದ್ದರು. ಶಾಸಕ ಬಸವರಾಜ ದಢೇಸೂಗೂರು ಅವರು ಅಬಕಾರಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇವರು ಸರಿಯಾಗಿ ಕೆಲಸವನ್ನೇ ಮಾಡುವುದಿಲ್ಲ, ಇವರ ವಿರುದ್ಧ ಸಾಕಷ್ಟುಆರೋಪಗಳಿವೆ. ಅದರಲ್ಲೂ ನ್ಯಾಯಯುತ ಕ್ರಮ ಇಲ್ಲ. ತಪ್ಪು ಮಾಡದವರ ಮೇಲೆ ಕ್ರಮ ವಹಿಸುತ್ತಾರೆ, ತಪ್ಪು ಮಾಡಿದವರ ಮೇಲೆ ಕ್ರಮ ವಹಿಸುವುದಿಲ್ಲ ಎಂದರು. 

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಮಧ್ಯೆಪ್ರವೇಶ ಮಾಡಿದ ಶಾಸಕ ಅಮರೇಗೌಡ ಭಯ್ಯಾಪುರ ಅವರು, ಇವರಿಂದ ಸರ್ಕಾರಕ್ಕೆ ಮತ್ತು ಜಿಲ್ಲೆಗೆ ಕೆಟ್ಟಹೆಸರು ಬರುತ್ತದೆ. ಇವರೇನು ಮಾಡಿದ್ದಾರೆ ಎನ್ನುವ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟುವರದಿಯಾಗಿದೆ. ಅಧಿಕಾರಿಯೇ ಸಚಿವರಿಗೆ ಹಣ ನೀಡಿರುವುದಾಗಿ ಹೇಳಿದ್ದಾರೆ. ಅಂದರೆ ಏನರ್ಥ ಎಂದರು. ಅಬಕಾರಿ ಡಿಸಿ ಅವರು, ಶಾಸಕ ಬಸವರಾಜ ದಢೇಸೂಗೂರು ಅವರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಪ್ಪು ಮಾಹಿತಿಯಿಂದ ನೀವು ಹೀಗೆ ಮಾತನಾಡುತ್ತಿದ್ದೀರಿ ಎಂದರು. 

ನಾನು ನ್ಯಾಯಯುತವಾಗಿ ಕ್ರಮ ವಹಿಸಲು ಮುಂದಾದರೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್‌ ಮಾಡಲು ಬರುತ್ತಾರೆ, 600- 700 ಜನರು ಮುಗಿಬೀಳುತ್ತಾರೆ ಎಂದರು. ಮಧ್ಯೆಪ್ರವೇಶ ಮಾಡಿ, ಈ ರೀತಿಯಾಗಿ ಇಲ್ಲೆಲ್ಲಾ ಚರ್ಚೆ ಮಾಡಬಾರದು. ಇದು ಚರ್ಚೆ ಮಾಡುವ ವೇದಿಕೆಯಲ್ಲ, ಅವರು ಜನಪ್ರತಿನಿಧಿ, ನಿಮಗೆ ಎಷ್ಟುಜವಬ್ದಾರಿ ಇದೆಯೋ ಅದಕ್ಕಿಂತ ಜಾಸ್ತಿ ಜವಾಬ್ದಾರಿ ಜನಪ್ರತಿನಿಧಿಗಳಿಗೆ ಇದೆ. ಅಧಿಕಾರಿಯಾಗಿದ್ದುಕೊಂಡು ಈ ರೀತಿಯಲ್ಲ ವಾದ ಮಾಡಬಾರದು ಎಂದು ಸಚಿವ ಆನಂದಸಿಂಗ್‌ ಅವರು ತಾಕೀತು ಮಾಡಿದರು. ಶಾಸಕರೇ ನೀವು ಸಹ ಅಷ್ಟೇ, ಇಲ್ಲಿ ಚರ್ಚೆ ಮಾಡಬೇಡಿ. ನಿಮ್ಮ ಕ್ಷೇತ್ರದಲ್ಲಿ ಏನಾಗಬೇಕು ಎಂದು ಕರೆಯಿಸಿ ಹೇಳಿ, ಇಲ್ಲದಿದ್ದರೆ ಅವರ ವಿರುದ್ಧ ಕಂಪ್ಲೆಂಟ್‌ ಮಾಡಿ ಎಂದರು.

Follow Us:
Download App:
  • android
  • ios