*  ಕಲ್ಲಿನಡಿಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜು 2 ಟಿಪ್ಪರ್‌ಗಳು ಪಲ್ಟಿ*  ಹೆಬ್ಬಂಡೆಗಳು ನೆಲಕ್ಕುರುಳಿದ ಕಾರಣ ಸಿಲುಕಿದ್ದರೆನ್ನಲಾದ ಕಾರ್ಮಿಕರ ಶವ ಪತ್ತೆಗೆ ಕಾರ್ಯಾಚರಣೆ*  ಏಳು ಜನರ ರಕ್ಷಣೆ 

ಗುಂಡ್ಲುಪೇಟೆ(ಮಾ.05): ಪಟ್ಟಣ ಸಮೀಪದ ಮಡಹಳ್ಳಿ ಗುಡ್ಡ/ಗುಮ್ಮಕ್ಕಲ್‌ ಗುಡ್ಡದ ಬಿಳಿಕಲ್ಲು ಕ್ವಾರಿಯಲ್ಲಿ(Quarry) ಗುಡ್ಡ ಕುಸಿದು ನಾಲ್ಕೈದು ಹಿಟಾಚಿ, ಕುಳಿ ಟ್ರ್ಯಾಕ್ಟರ್‌ ಕುಸಿದ ಕಲ್ಲಿನಡಿಗೆ ಸಿಲುಕಿ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಎರಡು ಟಿಪ್ಪರ್‌ಗಳು ಉರುಳಿ ಬಿದ್ದು ಜಖಂ ಆಗಿದ್ದು ಕಲ್ಲಿನಡಿಗೆ ಸಿಲುಕಿದ್ದವರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಇನ್ನೂ ಮೂವರು ಹಿಟಾಚಿ ಆಪರೇಟರ್ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೊಮ್ಮಲಾಪುರ ಮಹೇಂದ್ರರಿಗೆ ಸೇರಿದ ಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಮಹೇಂದ್ರರ ಕ್ವಾರಿಯನ್ನು ಸಬ್‌ ಲೀಸ್‌ಗೆ ಕೇರಳ(Kerala) ಮೂಲದ ವ್ಯಕ್ತಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಸಂಬಂಧ ರೈಟರ್‌ ನವೀದ್‌ನನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ.
NDRF, STRF ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ. ಕಲ್ಲಿನ ಬಂಡೆ ಕೆಳಗೆ ಸಿಲುಕಿದ್ದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಉತ್ತರ ಪ್ರದೇಶ ಮೂಲದವರಾದ ಫರಾಜ್, ಅಜ್ಮುಲ್ಲಾ, ಮಿರಾಜ್ ಎಂಬ ಮೂವರು ಹಿಟಾಚಿ ಅಪರೇಟರ್‌ಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 

ಸ್ಥಳಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಪವಾರ್‌, ಮಧುಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಎಎಸ್ಪಿ ಕೆ.ಎಸ್‌. ಸುಂದರರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ವಿಶ್ವೇಶ್ವರಯ್ಯ, ತಹಸೀಲ್ದಾರ್‌ ಸಿ.ಜಿ.ರವಿಶಂಕರ್‌, ತಾಪಂ ಇಒ ಶ್ರೀಕಂಠರಾಜೇ ಅರಸ್‌ ಭೇಟಿ ನೀಡಿದ್ದರು.

ಆಪರೇಷನ್ ಸಕ್ಸಸ್... ಮೂರು ದಿನದ ವೈದ್ಯರ ಆರೈಕೆ ಬಳಿಕ ಕಾಡಿಗೆ ಹೊರಟ ನಾಗಪ್ಪ

ಯಾವಾಗ ಕುಸಿಯಿತು?

ಶುಕ್ರವಾರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ಗುಡ್ಡ ದಿಢೀರ್‌ ಕುಸಿದಿದೆ(Hill Collapse). ಗುಡ್ಡ ಕುಸಿಯುವ ಚಿತ್ರವನ್ನು ಸ್ಥಳೀಯರು ಸೆರೆ ಹಿಡಿದಿದ್ದು ಈ ದೃಶ್ಯಾವಳಿಗಳನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ.

ಅರಣ್ಯರೋದನ

ದಿಢೀರ್‌ ಗುಡ್ಡ ಕುಸಿತದಿಂದ ಕಲ್ಲು ಟಿಪ್ಪರ್‌ ಮೇಲೆ ಬಿದ್ದು ಜಖಂಗೊಂಡ ಹಿನ್ನೆಲೆ ಟಿಪ್ಪರ್‌ನೊಳಗೆ ಟಿಪ್ಪರ್‌ ಚಾಲಕ ಎಂದು ಹೇಳಲಾದ ನೂರುದ್ದೀನ್‌ ಸಿಲುಕಿಕೊಂಡಿದ್ದ ಈತನ ಕಾಲು ಜಖಂಗೊಂಡಿದ್ದು ನರಳಾಟ ಅರಣ್ಯ ರೋದನವಾಗಿತ್ತು.
ಘಟನೆ ವಿಷಯ ಅರಿತು ಅಗ್ನಿ ಶಾಮಕ ದಳದ(Fire Department) ಸಿಬ್ಬಂದಿ ಸ್ಥಳಕ್ಕಾಗಮಿಸಿ ಟಿಪ್ಪರ್‌ ಕೆಲ ಭಾಗ ಗ್ಯಾಸ್‌ನಿಂದ ಕತ್ತರಿಸಿ ನೂರುದ್ದೀನ್‌ ಹೊರ ತೆಗೆಯಲು ಸಿಬ್ಬಂದಿ ಹರಸಾಹಸ ನಡೆಸಿದರು.
ಉರುಳಿದ ಕಲ್ಲು ಬಂಡೆಗಳು ದೊಡ್ಡದಾದ ಕಾರಣ ಹಿಟಾಚಿ, ಕುಳಿ ಟ್ರ್ಯಾಕ್ಟರ್‌ ಸಿಲುಕಿಕೊಂಡಿವೆ. ಕೆಲಸದಲ್ಲಿ ನಿರತರಾಗಿದ್ದ ಬಬ್ಲು, ಇಮ್ರಾನ್‌ ಎಂಬುವರು ಕಲ್ಲಿನಡಿಗೆ ಸಿಲುಕಿದ್ದಾರೆ ಎಂದು ಪೊಲೀಸರು(Police) ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಎಷ್ಟು ಮಂದಿ ಸಿಲುಕಿದ್ದಾರೆ ಎಂದು ದೃಢಪಡಿಸಿಲ್ಲ.

ಕಲ್ಲು ಉರುಳಿ ಗಾಯಗೊಂಡ ಅಸ್ರಾಪ್‌, ಪಾರ್ಸನ್‌ ಎಂಬುವರು ಘಟನೆ ನಡೆದ ಕ್ಷಣವೇ ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.
ಸ್ಥಳದಲ್ಲಿದ್ದ ಮತ್ತಿಬ್ಬರು ಗಾಯಾಳುಗಳು ಚಿಕಿತ್ಸೆ ಪಡೆದು ತೆರಳಿದ್ದಾರೆ. ಆದರೆ ಕಲ್ಲಿನಡಿಗೆ ಸಿಲುಕಿದ ಕಾರ್ಮಿಕರ ಶವ ಪತ್ತೆಗೆ ಕಾರ್ಯಾಚರಣೆ ಆರಂಭವಾಗಿಲ್ಲ. ದೊಡ್ಡ ದೊಡ್ಡ ಬಂಡೆಗಳು ನೆಲಕ್ಕುರುಳಿದ ಕಾರಣ ಬಂಡೆಗಳ ಸರಿಸಲು ಆಗದ ಕಾರಣ ಕಲ್ಲಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ ಕಾರ್ಮಿಕರ(Workers) ಸಾವು ಖಚಿತವಾಗಿಲ್ಲ.

ಸ್ಥಳೀಯರಾರ‍ಯರೂ ಇಲ್ಲ, ಕಾಣದ ಆಕ್ರೋಶ

ಗುಂಡ್ಲುಪೇಟೆ: ಕ್ವಾರಿಯಲ್ಲಿ ಗುಡ್ಡ ಕುಸಿದ ಘಟನೆಯಲ್ಲಿ ಸ್ಥಳೀಯರೇನಾದರೂ ಸಾವನ್ನಪ್ಪಿದ್ದರೆ ಸ್ಥಳೀಯರ ಆಕ್ರೋಶಕ್ಕೆ ಜಿಲ್ಲಾಡಳಿತ ತುತ್ತಾಗುವ ಸಾಧ್ಯತೆ ಹೆಚ್ಚಿತ್ತು. ಗಾಯಗೊಂಡವರು ಹಾಗೂ ಕಲ್ಲಿನಡಿಗೆ ಸಿಲುಕಿದ್ದಾರೆ ಎನ್ನಲಾದ ಕಾರ್ಮಿಕರು ನೆರೆ ರಾಜ್ಯದವರು. ಹಾಗಾಗಿ ಸ್ಥಳೀಯರ ಆಕ್ರೋಶದ ಕಟ್ಟೆಹೊಡೆಯಲಿಲ್ಲ ಹಾಗಾಗಿ ಅಧಿಕಾರಿಗಳು ಬಚಾವ್‌ ಆಗಿದ್ದಾರೆ.

KSRTC: ಡಿಪೋಗೆ 5 ತಾಸು ತಡ​ವಾಗಿ ಬಂದ ಬಸ್‌: ಡ್ರೈವರ್‌ಗೆ 12,300 ದಂಡ..!

ಜನರ ಆಕ್ರೋಶ, ಪ್ರತಿಭಟನೆ, ವಾಗ್ವಾದ

ಗುಂಡ್ಲುಪೇಟೆ: ಮಡಹಳ್ಳಿ ಬಳಿಯ ಗುಡ್ಡ ಕುಸಿತಗೊಂಡರೂ ಸ್ಥಳೀಯ ಶಾಸಕರು ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದಾಗ ಬಿಜೆಪಿ(BJP) ಕೆಲ ಯುವಕರು ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದರು.
ಈ ಸಮಯದಲ್ಲಿ ಪ್ರತಿಭಟನಾಕಾರರು ಹಾಗೂ ಬಿಜೆಪಿ ಕೆಲ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಗಣಿಕಾರಿಕೆಯಿಂದ ಮನೆಗಳೆಲ್ಲ ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಗಣಿಗಾರಿಕೆ ಪ್ರದೇಶದ ಸುತ್ತ ಮುತ್ತಲಿನ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಆಗುತ್ತಿಲ್ಲ. ರಸ್ತೆಗಳೆಲ್ಲ ಹಾಳಾಗುತ್ತಿವೆ ಎಂದು ಕೂಗಾಟ ನಡೆಸಿದಾಗ ಪೊಲೀಸರು ಸಮಾಧಾನಪಡಿಸಿದರು.

ಇಂದಿನ ಘಟನೆ ಹಾಗೂ ಗಣಿಗಾರಿಕೆ(Mining) ಸಂಬಂಧ ಮಾಹಿತಿ ಬಂದಿದೆ. ಯಾವ ಕಾರಣದಿಂದ ಗುಡ್ಡ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ವಾಸ್ತವಾಂಶ ತಿಳಿಯಲಿದೆ. ಏಳು ಜನರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಬಗ್ಗೆ ನಿಖರ ಮಾಹಿತಿ ಇಲ್ಲ ಅಂತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.