ನಾಗಮಂಗಲ (ಸೆ.07):  ಜಿಲ್ಲಾಡಳಿತ ಜೆಡಿಎಸ್‌ ಪಕ್ಷವನ್ನು ತೀರಿಸುವ ಕೆಲಸ ಮಾಡುತ್ತಿದೆ. ಜನರಿಂದ ಆಯ್ಕೆಯಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ. ಜನರಿಂದ ತಿರಸ್ಕೃತರಾದವರೇ ಅಧಿಕಾರಿಗಳಿಗೆ ಗಾಡ್‌ಫಾದರ್‌ಗಳಾಗಿದ್ದಾರೆ ಎಂದು ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಾಗಮಂಗಲ ಶಾಸಕ ಕೂಡ ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

ಮೋದಿಯನ್ನು ರಾಜಕೀಯವಾಗಿ ಹಣಿಯಲು ಎದುರಾಳಿಗಳಿಂದ ಶುರುವಾಗಿದೆ ಸುಳ್ಳಿನ ಯುದ್ಧ..!

ಜನರಿಂದ ತಿರಸ್ಕೃತರಾದವರ ಮಾತುಗಳಿಗೆ ಅಧಿಕಾರಿ ವರ್ಗ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಅವರು ಹೇಳುವ ಕೆಲಸಗಳಿಗೆ ಒತ್ತು ಕೊಟ್ಟು ಮಾಡಿಕೊಡುತ್ತಿದ್ದಾರೆ. ಜನರಿಂದ ಪುರಸ್ಕೃತರಾದವರು ಹೇಳುವ ಕೆಲಸಗಳು ಯಾವುದೂ ನಡೆಯುತ್ತಿಲ್ಲ. ಕನಿಷ್ಠ ಮಟ್ಟದ ಪ್ರೋಟೋಕಾಲ್‌ ಕೂಡ ಪಾಲನೆಯಾಗುತ್ತಿಲ್ಲ ಎಂದು ಸುದ್ದಿಗಾರರೆದುರು ಅಸಮಾಧಾನ ಹೊರಹಾಕಿದರು.

ಎರಡು ವರ್ಷದ ಹಿಂದೆ ಕುಡಿವ ನೀರು ಪೂರೈಸಿದವರಿಗೆ ಹಣ ಪಾವತಿಸುವಂತೆ ಹೇಳಿದೆ. ಹಣಕ್ಕೆ ಕೊರತೆಯಿಲ್ಲ. ಆದಷ್ಟುಬೇಗ ಕೊಡ್ತೀವಿ ಅಂತ ಹೇಳಿದವರು ಇನ್ನೂ 7 ತಿಂಗಳ ಬಾಕಿ ಪಾವತಿಸಿಲ್ಲ. ನಾವು ಎಷ್ಟೂಅಂತ ಹೇಳೋಕಾಗುತ್ತೆ. ಕೆ.ಆರ್‌.ಪೇಟೆ ತಾಲೂಕಿನ ಹಣ ಯಾಕೆ ಉಳಿಸಿಕೊಂಡಿಲ್ಲ. ನಾಗಮಂಗಲ ತಾಲೂಕಿನ ಹಣವನ್ನು ಮಾತ್ರ ಏಕೆ ನಿಲ್ಲಿಸಿದ್ದಾರೆ. ಕೊಟ್ಟರೆ ಎಲ್ಲರಿಗೂ ಕೊಡಬೇಕು ತಾನೇ ಎಂದು ಪ್ರಶ್ನಿಸಿದರು.

ನೀರನ್ನು ಸರಬರಾಜು ಮಾಡಿ ಮಾಡಿಲ್ಲವಾದರೆ, ಸುಳ್ಳು ಲೆಕ್ಕ ಏನಾದರೂ ಕೊಟ್ಟಿದ್ದರೆ ಕೊಡೋದು ಬೇಡ. ಅವರಿಗೆ ಬೇಕಾದರೆ ಶಿಕ್ಷೆ ಕೊಡಲಿ. ನೀರು ಪೂರೈಸಿಕೊಂಡು ಹಣ ಕೊಡಲಿಲ್ಲವೆಂದರೆ ಮರ್ಯಾದೆ ಇರುತ್ತಾ. ಈ ಬಗ್ಗೆ ಕೆಡಿಪಿ ಮೀಟಿಂಗ್‌ಗಳಲ್ಲಿ ಚರ್ಚಿಸಿಯಾಗಿದೆ, ವೈಯಕ್ತಿಕವಾಗಿ ಹೇಳಿದ್ದಾಗಿದೆ. ಇನ್ನೂ ಎಷ್ಟೂಅಂತ ಹೇಳೋದು. ನಮ್ಮ ಮಾತಿಗೆ ಬೆಲೆ ಇಲ್ಲದವರ ಬಳಿ ಏನೂಂತ ಹೇಳೋಣ ಎಂದು ಬೇಸರ ವ್ಯಕ್ತಪಡಿಸಿದರು.

ಜನರಿಂದ ತಿರಸ್ಕೃತರಾದವರನ್ನೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆಶ್ರಯಿಸುತ್ತಿದ್ದಾರೆ. ನಿಮ್ಮನ್ನ ಇಷ್ಟುವರ್ಷ ಜಿಲ್ಲೆಯಲ್ಲಿರುವಂತೆ ನೋಡಿಕೊಳ್ಳುಯತ್ತೇವೆ, ಇಲ್ಲೇ ಉಳಿಸುತ್ತೇವೆ ಅಂತೆಲ್ಲಾ ಆಮಿಷವೊಡ್ಡಿದ್ದಾರೆ. ಇದನ್ನು ನೋಡಿದಾಗ ಅವರು ಕಾಂಗ್ರೆಸ್ಸಿಗರೋ ಅಥವಾ ಬಿಜೆಪಿಯವರೋ ಎಂಬ ಅನುಮಾನ ಶುರುವಾಗಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಟಿಯರ ಬಳಿಕ ರಾಜಕಾರಣಿಗಳ ಸರದಿ, ಇವರೆಲ್ಲರ ಕೊರಳಿಗೆ ಡ್ರಗ್‌ ಕೇಸ್‌ ಉರುಳು?

ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಿಗೆ ಯಾರೋ ಒಬ್ಬ ವ್ಯಕ್ತಿ ಹೇಳಿದಂತೆ ಮೀಸಲಾತಿ ಬದಲಾಯಿಸುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ದೂರು ಕೇಳಿಬಂದಿದೆ. ಆದರೆ, ತಾವು ಯಾವುದೇ ರೀತಿಯ ಸಣ್ಣ ಬದಲಾವಣೆಗೂ ಕೋರಿಕೆ ಸಲ್ಲಿಸಿಲ್ಲ. ಅಕಸ್ಮಾತ್‌ ಪ್ರಕಟಗೊಂಡಿರುವ ಮೀಸಲಾತಿಯಲ್ಲಿ ಏನಾದರೂ ವ್ಯತ್ಯಾಸವಾದರೆ ಸರ್ಕಾರದ ಮಾರ್ಗಸೂಚಿಯಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ ಅವರೇ ಕ್ರಮ ಜರುಗಿಸುತ್ತಾರೆ ಎಂದರು.