ಸಾರಾ ಸಭೆಯಲ್ಲಿ ಸುಮಲತಾ ಅಂಬರೀಶ್ : ಸಲಹೆ ಸೂಚನೆ ನೀಡಿದ ಸಂಸದೆ

  • ಜೆಡಿಎಸ್ ಮುಖಂಡ ಸಾ ರಾ ಮಹೆಶ್ ನೇತರತ್ವದಲ್ಲಿ ನಡೆದ ಕೆಡಿಪಿ ಸಭೆ
  • ಕೆಡಿಪಿ ಸಭೆಯಲ್ಲಿ  ಸಲಹೆ ಸೂಚನೆಳನ್ನು  ನೀಡಿದ ಸಂಸದೆ ಸುಮಲತಾ ಅಂಬರೀಶ್ 
Sumalatha Ambareesh instruct about Development works in KR nagar KDP meeting snr

 ಕೆ.ಆರ್‌. ನಗರ (ಆ.20):  ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಶಾಸಕ ಸಾ.ರಾ. ಮಹೇಶ್‌ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್‌ ಭಾಗವಹಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಸಂಸದೆಯಾದ ನಂತರ ಇದೇ ಮೊದಲ ಬಾರಿಗೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.

ಸುಮಲತಾ ಆಪ್ತರನ್ನು ಹೊರಗೆ ಕಳುಹಿಸಿದ ಶಾಸಕರು

ಸಾಲಿಗ್ರಾಮ ತಾಲೂಕಿನ ಕುಪ್ಪೆ, ಕೆಸ್ತೂರು ಕೊಪ್ಪಲು, ಶ್ರೀರಾಮಪುರ ಮತ್ತು ಕೆ.ಆರ್‌. ನಗರ ತಾಲೂಕಿನ ಗಂಧನಹಳ್ಳಿ, ಕಂಚಿನಕೆರೆ ಸಂಪರ್ಕ ರಸ್ತೆಗಳಿಗೆ ಪಿಎಂಜಿಎಸ್‌ವೈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಯದಿರುವುದಕ್ಕೆ ಕಾರಣ ಕೇಳಿದರಲ್ಲದೆ, ಕೂಡಲೇ ಕಾಮಗಾರಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಎರಡು ತಾಲೂಕಿನ ವ್ಯಾಪ್ತಿಯ ಹಲವು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಾಣವಾಗಿಲ್ಲ ಎಂದು ಸಂಸದರ ಕಚೇರಿಗೆ ದೂರು ಮತ್ತು ಮನವಿ ಪತ್ರಗಳು ಬಂದಿದ್ದು, ಎನ್‌ಆರ್‌ಇಜಿ ಯೋಜನೆಯಡಿ ಕಾಂಪೌಂಡ್‌ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಿಇಒ ಗಾಯಿತ್ರಿ ಅವರಿಗೆ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಎಷ್ಟುಮಂದಿಗೆ ಸಹಾಯಧನ ನೀಡಲಾಗಿದೆ ಎಂಬ ವಿವರವಾದ ಮಾಹಿತಿಯನ್ನು ಮುಖ್ಯಾಧಿಕಾರಿ ನೀಡಿದರೆ ಅಗತ್ಯವಿದ್ದಲ್ಲಿ ಕೇಂದ್ರದಿಂದ ಮತ್ತಷ್ಟುಅನುದಾನ ಕೊಡಿಸುವುದಾಗಿ ಸಭೆಯಲ್ಲಿ ಸಂಸದರು ಪ್ರಕಟಿಸಿದರು.

ಶಾಸಕರೊಂದಿಗೆ ಮೊದಲ ಬಾರಿಗೆ ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿದ ಸಂಸದೆ ಸುಮಲತಾ ಅಂಬರೀಶ್‌ ಎಲ್ಲರ ಗಮನ ಸೆಳೆದರು.

ಸುಮಲತಾ ಅಂಬರೀಶ್‌ ಮಾತನಾಡಿ, ಈವರೆಗೆ ನಾನು ಕಾರಣಾಂತರಗಳಿಂದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿರಲಿಲ್ಲ, ಇನ್ನು ಮುಂದೆ ಇಂತಹ ಸಭೆಗಳಿಗೆ ಬರುವುದರೊಂದಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸುತ್ತೇನೆ ಎಂದರು.

ಕೆಡಿಪಿ ಸಭೆಗೆ ಸಂಸದರು ಆಗಮಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್‌ ಅಭಿವೃದ್ಧಿ ವಿಚಾರದಲ್ಲಿ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾಯಿತ ಜನಪ್ರತಿನಿಧಿಗಳು ಸಹಕಾರ ನೀಡಿದರೆ ಅದನ್ನು ಸ್ವಾಗತಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios