ಬೆಂಗಳೂರು(ಫೆ.18): ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಹೃದಯ ಸಮಸ್ಯೆಯಿಂದ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ 4.20 ನಿಮಿಷಗಳಲ್ಲಿ ಬೆಂಗಳೂರು ಸೇರಿಕೊಂಡಿದ್ದ ಮಗುವಿಗೆ ಕಳೆದ ಶುಕ್ರವಾರ (ಫೆ.7) ಡಾ. ಜಯಂತ್‌ಕುಮಾರ್‌ ನೇತೃತ್ವದಲ್ಲಿ 12 ಮಂದಿ ವೈದ್ಯರ ತಂಡ 8 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

ಬಳಿಕ ಐಸಿಯು ಹಾಗೂ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಇದೀಗ ಮಗುವು ಸಂಪೂರ್ಣ ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ಫೆ.6ರಂದು ನಲವತ್ತು ದಿನದ ಮಗುವನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಮಗುವಿನ ಸಮಸ್ಯೆ ಪರಿಶೀಲಿಸಿ ಫೆ.7ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸವಾಲಿನ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ನಮ್ಮ ವೈದ್ಯರ ತಂಡ ಯಶಸ್ವಿಯಾಗಿದೆ.

'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಚಿಕಿತ್ಸೆಗೆ 1.50 ಲಕ್ಷ ಖರ್ಚಾಗಿದ್ದು, ಮಗುವಿನ ಕುಟುಂಬ ಬಿಪಿಎಲ್‌ ಕಾರ್ಡ್‌ ಹೊಂದಿರುವುದರಿಂದ1.20 ಲಕ್ಷ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಿದೆ. ಉಳಿದ ಮೊತ್ತವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.