Asianet Suvarna News Asianet Suvarna News

ಬೆಂಗ್ಳೂರಲ್ಲಿ ಭೂಮಿ ಸಿಗದೆ ಸಬರ್ಬನ್‌ ರೈಲ್ವೆ ಕಾಮಗಾರಿ ಸ್ತಬ್ಧ..!

ಉಪನಗರ ರೈಲು ಯೋಜನೆ ಶಂಕು ಸ್ಥಾಪನೆಯಾಗಿ ಒಂದೂವರೆ ವರ್ಷ ಕಳೆದಿದೆ. ಎರಡನೇ ಕಾರಿಡಾರ್‌ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರವರೆಗಿನ 24 ಕಿ.ಮೀ. ಮಲ್ಲಿಗೆ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಶೇ. 12ರಷ್ಟು ಕೆಲಸದ ಪ್ರಗತಿಯಾಗಿದೆ. ಇನ್ನು ಮೂರು ಕಾರಿಡಾರ್‌ಗಳ ಕಾಮಗಾರಿ ಪ್ರಾರಂಭವಾಗಿಲ್ಲ. ಅಲ್ಲದೆ ಇವುಗಳಿಗೆ ಅಗತ್ಯವಿರುವ ರೈಲ್ವೆಯ ಭೂಮಿಯೂ ಹಸ್ತಾಂತರ ಆಗಿಲ್ಲ.
 

Suburban Railway Work Stopped due to lack of Land in Bengaluru grg
Author
First Published Dec 7, 2023, 5:49 PM IST

ಮಯೂರ್‌ ಹೆಗಡೆ

ಬೆಂಗಳೂರು(ಡಿ.07):  ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್‌ಪಿ) ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ವಿಸ್ತ್ರತ ಯೋಜನಾ ವರದಿಯ ಪ್ರಸ್ತಾಪಕ್ಕಿಂತ ಹೆಚ್ಚಿನ ಭೂಮಿಯನ್ನು ನೈಋತ್ಯ ರೈಲ್ವೆಯಿಂದ ಕೇಳುತ್ತಿರುವುದು ಯೋಜನೆಯ ಭೂಮಿ ಹಸ್ತಾಂತರ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ.

ಉಪನಗರ ರೈಲು ಯೋಜನೆ ಶಂಕು ಸ್ಥಾಪನೆಯಾಗಿ ಒಂದೂವರೆ ವರ್ಷ ಕಳೆದಿದೆ. ಎರಡನೇ ಕಾರಿಡಾರ್‌ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರವರೆಗಿನ 24 ಕಿ.ಮೀ. ಮಲ್ಲಿಗೆ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಶೇ. 12ರಷ್ಟು ಕೆಲಸದ ಪ್ರಗತಿಯಾಗಿದೆ. ಇನ್ನು ಮೂರು ಕಾರಿಡಾರ್‌ಗಳ ಕಾಮಗಾರಿ ಪ್ರಾರಂಭವಾಗಿಲ್ಲ. ಅಲ್ಲದೆ ಇವುಗಳಿಗೆ ಅಗತ್ಯವಿರುವ ರೈಲ್ವೆಯ ಭೂಮಿಯೂ ಹಸ್ತಾಂತರ ಆಗಿಲ್ಲ.

ಬೆಂಗ್ಳೂರು ಸಬರ್ಬನ್‌ ರೈಲು: ಕನಕ ಕಾರಿಡಾರ್‌ ಇನ್ನೂ ವಿಳಂಬ

ಹೆಚ್ಚಿನ ಭೂಮಿ ಕೋರಿಕೆ:

ಉಪನಗರ ರೈಲು ಯೋಜನೆ ವಿಸ್ತ್ರತ ಯೋಜನಾ ವರದಿಯಲ್ಲಿ ಒಟ್ಟಾರೆ ನಾಲ್ಕು ಕಾರಿಡಾರ್‌ ಸೇರಿ 327 ಎಕರೆ ನೀಡುವ ಪ್ರಸ್ತಾಪವಿತ್ತು. ಆದರೆ, ಈಗ ಕೇವಲ ಎರಡಕ್ಕೆ ಅಂದರೆ ಮಲ್ಲಿಗೆ ಹಾಗೂ ಕನಕ ಕಾರಿಡಾರ್‌ಗೆ ಸೇರಿ 351.484 ಎಕರೆ ಕೋರಲಾಗಿದೆ. ಡಿಪಿಆರ್‌ನಲ್ಲಿ ಮಲ್ಲಿಗೆ ಕಾರಿಡಾರ್‌ಗೆ 53.60, ಕನಕ ಕಾರಿಡಾರ್‌ಗೆ 115.50 ಎಕರೆ ಅಗತ್ಯತೆಯ ಉಲ್ಲೇಖವಿತ್ತು. ಅದರಲ್ಲಿ ಮಲ್ಲಿಗೆ ಮಾರ್ಗವೊಂದಕ್ಕೆ ಕಳೆದ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ 157.07 ಎಕರೆಯನ್ನು ಕೆ-ರೈಡ್‌ಗೆ ಹಸ್ತಾಂತರಿಸಿದೆ. ಕನಕ ಕಾರಿಡಾರ್‌ಗೆ ಕೆ-ರೈಡ್‌ 194.414 ಎಕರೆಯನ್ನು ಕೋರಿದ್ದು, ಭೂಮಿ ಹಸ್ತಾಂತರ ಬಾಕಿ ಇದೆ.

ಮಂಡಳಿಗೆ ನೈಋತ್ಯ ರೈಲ್ವೆ ಪತ್ರ

ರೈಲ್ವೆ ಮಂಡಳಿಯ ಭೂಮಿ ಮತ್ತು ಸೌಕರ್ಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿರುವ ನೈಋತ್ಯ ರೈಲ್ವೆ, ‘ಬಿಎಸ್‌ಆರ್‌ಪಿ ಕಾರ್ಯಸಾಧ್ಯತಾ ವರದಿಯಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಶೇ.261.36ರಷ್ಟು ಹೆಚ್ಚಿನ ಭೂಮಿಯನ್ನು ಕೆ-ರೈಡ್‌ ಕೇಳಿದೆ. ಅದರಲ್ಲಿ ಈಗಾಗಲೇ ಮಲ್ಲಿಗೆ ಕಾರಿಡಾರ್‌ಗೆ ಕಾರ್ಯಸಾಧ್ಯತಾ ವರದಿಯಲ್ಲಿ ಉಲ್ಲೇಖಿಸಿದ್ದಕ್ಕಿಂತ ಶೇ.193.04ರಷ್ಟು ಹೆಚ್ಚಿನ ಭೂಮಿ ನೀಡಿದ್ದೇವೆ. ಅಲ್ಲದೆ, ಕನಕ ಕಾರಿಡಾರ್‌ಗೂ ಶೇ.68ರಷ್ಟು ಹೆಚ್ಚಿನ ಭೂಮಿ ಹಸ್ತಾಂತರಿಸಲು ಕೇಳಿದೆ’ ಎಂದು ಬರೆದಿದೆ.

ಮುಂದುವರಿದು ‘ಇನ್ನೆರಡು ಕಾರಿಡಾರ್‌ಗಳಿಗೆ ಎಷ್ಟು ಭೂಮಿ ಬೇಕೆಂದು ಪ್ರಸ್ತಾವನೆ ಸಲ್ಲಿಸಿಲ್ಲ. ಸಹಜವಾಗಿ ನಾಲ್ಕು ಕಾರಿಡಾರ್‌ಗೆ ಉಪನಗರ ರೈಲ್ವೆ ಡಿಪಿಆರ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನ ಭೂಮಿಯನ್ನು ಕೆ-ರೈಡ್‌ ಅಪೇಕ್ಷಿಸುತ್ತಿದೆ. ಹೀಗಾಗಿ ಬಿಎಸ್‌ಆರ್‌ಪಿ ಯೋಜನೆಗೆ ಹಿಂದೆ ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚಿನ ಭೂಮಿ ನೀಡಬಹುದೆ ಎಂದು ರೈಲ್ವೆ ಮಂಡಳಿಗೆ ನೈಋತ್ಯ ರೈಲ್ವೆಯು ಸ್ಪಷ್ಟನೆ ಹಾಗೂ ಅನುಮೋದನೆ ನೀಡುವಂತೆ ಪತ್ರ ಬರೆದಿದ್ದು, ಈ ಪತ್ರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಪಕ್ಕದ ಜಿಲ್ಲೆ, ಬೆಂಗಳೂರಿಗೆ ಉಪನಗರ ರೈಲ್ವೆ ಯೋಜನೆ ವರದಿ ಒಪ್ಪಿಕೊಳ್ಳುವಂತೆ ರೈಲ್ವೆ ಮಂಡಳಿಗೆ ಪತ್ರ

ಇನ್ನೂ ಸಲ್ಲಿಕೆಯಾಗದ ಕೋರಿಕೆ

ಇನ್ನೊಂದು ಕಡೆ ಕೆಎಸ್‌ಆರ್‌ ಬೆಂಗಳೂರು-ಯಲಹಂಕ- ದೇವನಹಳ್ಳಿ ಸಂಪರ್ಕಿಸುವ ಮೊದಲ ಕಾರಿಡಾರ್‌ ‘ಸಂಪಿಗೆ’ (41.478 ಕಿ.ಮೀ.) ಹಾಗೂ ಮೂರನೇ ಕಾರಿಡಾರ್‌ ಕೆಂಗೇರಿ-ವೈಟ್‌ಫೀಲ್ಡ್‌ ‘ಪಾರಿಜಾತ’ (35.52 ಕಿ.ಮೀ.) ವಿಚಾರದಲ್ಲಿ ಕೆ-ರೈಡ್ ಇನ್ನೂ ಪ್ರಾಥಮಿಕ ಹಂತದ ಪ್ರಕ್ರಿಯೆಯನ್ನೇ ಮುಗಿಸಿಲ್ಲ. ಮುಖ್ಯವಾಗಿ ನೈಋತ್ಯ ರೈಲ್ವೆಯಿಂದ ಎಷ್ಟು ಭೂಮಿ ಬೇಕು ಎಂಬ ಪ್ರಸ್ತಾವನೆಯನ್ನೂ ಕೆ-ರೈಡ್‌ ನೈಋತ್ಯ ರೈಲ್ವೆಗೆ ಸಲ್ಲಿಸಿಲ್ಲ. ‘ಸಂಪಿಗೆ’ ಸಲುವಾಗಿ ನೈಋತ್ಯ ರೈಲ್ವೆ ಬಳಿ 115.5 ಎಕರೆ ಹಾಗೂ ‘ಪಾರಿಜಾತ’ಕ್ಕಾಗಿ 42.12 ಎಕರೆ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ. ಭೂಮಿ ಅಗತ್ಯತೆ ಕೋರಿ ಪ್ರಸ್ತಾವನೆ ಸಲ್ಲಿಸದಿರುವುದು ಕೂಡ ಬಿಎಸ್ಆರ್‌ಪಿಯ ಮೂರು ಕಾರಿಡಾರ್‌ ಕಾಮಗಾರಿ ಪ್ರಾರಂಭ ವಿಳಂಬಕ್ಕೆ ಕಾರಣವಾಗಿದೆ.

ಹೆಚ್ಚಿನ ಭೂಮಿ ಕೊಟ್ಟಿದ್ದೇವೆ: ನೈಋತ್ಯ ರೈಲ್ವೆ

ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಭೂಮಿಯನ್ನು ನೈಋತ್ಯ ರೈಲ್ವೆಯಿಂದ ಕೆ-ರೈಡ್‌ಗೆ ಹಸ್ತಾಂತರ ಮಾಡಲಾಗಿದೆ. ಕನಕ ಕಾರಿಡಾರ್‌ಗೆ ಕೆ ರೈಡ್‌ ಕಾರ್ಯ ಸಾಧ್ಯತಾ ವರದಿಯಲ್ಲಿ ಉಲ್ಲೇಖಿಸಿದ್ದಕ್ಕಿಂತ ಹೆಚ್ಚಿನ ಭೂಮಿ ಕೇಳಿದ್ದು, ಈ ಸಂಬಂಧ ಅನುಮೋದನೆಗೆ ಸೆಪ್ಟೆಂಬರ್‌ನಲ್ಲೇ ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ನೈಋತ್ಯ ರೈಲ್ವೆ ಉನ್ನತ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios