ಟೆಂಡರ್‌ ತೆರೆದ ಒಂದೆರಡು ವಾರ ಅಥವಾ ತಿಂಗಳಲ್ಲಿ ಕಡಿಮೆ ಬಿಡ್‌ ಸಲ್ಲಿಸಿದ ಕಂಪನಿಗೆ ಟೆಂಡರ್‌ ಆಗಲಿದೆ ಎಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ( ಕೆ-ರೈಡ್‌) ತಿಳಿಸಿತ್ತು. ಆ ಪ್ರಕಾರ ಸಾಗಿದ್ದರೆ ಈಗಾಗಲೇ ‘ಕನಕ’ ಮಾರ್ಗದ ಕಾಮಗಾರಿ ಆರಂಭವಾಗಬೇಕಿತ್ತು. ಈವರೆಗೆ ಈ ಪ್ರಕ್ರಿಯೆ ಆಗಿಲ್ಲ. 

ಮಯೂರ್‌ ಹೆಗಡೆ

ಬೆಂಗಳೂರು(ಡಿ.05): ನಗರದ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ ಉಪನಗರ ರೈಲು ‘ಕನಕ’ ಕಾರಿಡಾರ್‌ನ ಟೆಂಡರ್‌ ತೆರೆದು ಐದು ತಿಂಗಳಾದರೂ ಕಾಮಗಾರಿ ಗುತ್ತಿಗೆ ನೀಡಲಾಗಿಲ್ಲ. ನೈಋತ್ಯ ರೈಲ್ವೆಯಿಂದ ಈ ಮಾರ್ಗಕ್ಕಾಗಿ ಭೂಮಿ ಹಸ್ತಾಂತರ ವಿಳಂಬವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಟೆಂಡರ್‌ ತೆರೆದ ಒಂದೆರಡು ವಾರ ಅಥವಾ ತಿಂಗಳಲ್ಲಿ ಕಡಿಮೆ ಬಿಡ್‌ ಸಲ್ಲಿಸಿದ ಕಂಪನಿಗೆ ಟೆಂಡರ್‌ ಆಗಲಿದೆ ಎಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ( ಕೆ-ರೈಡ್‌) ತಿಳಿಸಿತ್ತು. ಆ ಪ್ರಕಾರ ಸಾಗಿದ್ದರೆ ಈಗಾಗಲೇ ‘ಕನಕ’ ಮಾರ್ಗದ ಕಾಮಗಾರಿ ಆರಂಭವಾಗಬೇಕಿತ್ತು. ಈವರೆಗೆ ಈ ಪ್ರಕ್ರಿಯೆ ಆಗಿಲ್ಲ. ಯೋಜನೆಗಾಗಿ 194.07 ಎಕರೆಯನ್ನು ನೀಡುವಂತೆ ಕೆ-ರೈಡ್‌ ಕಂಪನಿ ನೈಋತ್ಯ ರೈಲ್ವೆ ವಲಯಕ್ಕೆ ಮನವಿ ನೀಡಿದೆ. ಆದರೆ, ನೈಋತ್ಯ ರೈಲ್ವೆ ವಿಳಂಬ ಧೋರಣೆ ಅನುಸರಿಸುತ್ತಿರುವುದೇ ಟೆಂಡರ್‌ ಬಳಿಕದ ಪ್ರಕ್ರಿಯೆ ವಿಳಂಬವಾಗಲು ಕಾರಣ ಎಂದು ಮೂಲಗಳು ತಿಳಿಸಿವೆ. 

ಪಕ್ಕದ ಜಿಲ್ಲೆ, ಬೆಂಗಳೂರಿಗೆ ಉಪನಗರ ರೈಲ್ವೆ ಯೋಜನೆ ವರದಿ ಒಪ್ಪಿಕೊಳ್ಳುವಂತೆ ರೈಲ್ವೆ ಮಂಡಳಿಗೆ ಪತ್ರ

ಕನಕ ಕಾರಿಡಾರ್‌ನ ಟೆಂಡರ್‌ನ್ನು ಕಳೆದ ಜುಲೈ 4ರಂದೆ ತೆರೆದಿದೆ. ಈ ವೇಳೆ ಲಾರ್ಸೆನ್‌ ಆ್ಯಂಡ್‌ ಟರ್ಬೋ, ಅಫ್‌ಕಾನ್ಸ್‌, ಇಂಟಾರ್ವೊ, ದಿನೇಶ್‌ಚಂದ್ರ ಆರ್‌. ಅಗರ್‌ವಾಲ್‌ ಇನ್‌ಫ್ರಾಕಾನ್‌ ಕಂಪನಿಗಳು ಬಿಡ್‌ ಸಲ್ಲಿಸಿವೆ. ತಾಂತ್ರಿಕ ವಿಶ್ಲೇಷಣೆ ಬಳಿಕವೇ ಟೆಂಡರ್‌ ಕಮಿಟಿ ಹೆಚ್ಚು ಬಿಡ್‌ ಸಲ್ಲಿಸಿರುವ ಕಂಪನಿಗೆ ಟೆಂಡರ್‌ ನೀಡುವುದಾಗಿ ತಿಳಿಸಿತ್ತು. ಅದರೆ 150 ದಿನಗಳು ಕಳೆದಿದೆ.

ಜಿಎಂಗೆ ಪತ್ರ:

ರೈಲ್ವೆ ಮಂಡಳಿ, ಗತಿಶಕ್ತಿ ಯೋಜನೆಯ ನಿರ್ದೇಶಕ ಎಫ್.ಎ.ಅಹ್ಮದ್‌ ಅವರು ಕಳೆದ ಅಕ್ಟೋಬರ್‌ನಲ್ಲಿಯೇ ನೈಋತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ್‌ ಕಿಶೋರ್‌ ಅವರಿಗೆ ಪತ್ರ ಬರೆದು ಕೆ-ರೈಡ್‌ಗೆ ಭೂಮಿ ಹಸ್ತಾಂತರ ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಯೋಜನೆ ಮುಗಿಯಲು 40 ತಿಂಗಳ ಕಾಲಾವಧಿ ನಿಗದಿಸಲಾಗಿದೆ. ಆದರೆ, ಈವರೆಗೂ ಕಾಮಗಾರಿ ಗುತ್ತಿಗೆ ನೀಡಲು ಸಾಧ್ಯವಾಗದಿರುವುದಕ್ಕೆ ಭೂಮಿ ಹಸ್ತಾಂತರದ ಪ್ರಕ್ರಿಯೆ ಆಗದಿರುವುದೇ ಕಾರಣ ಎಂದು ತಿಳಿದುಬಂದಿದೆ. ತ್ವರಿತವಾಗಿ ಕ್ರಮ ವಹಿಸುವಂತೆ ತಿಳಿಸಿದ್ದಾರೆ. ಈ ಪತ್ರ ಬಂದು ಎರಡು ತಿಂಗಳು ಕಳೆಯುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ಕಾರಣವೇನು?: 

ಕನಕ ಮಾರ್ಗ ನಿರ್ಮಾಣ ಆಗುವ ಕೆಲವೆಡೆ ನೈಋತ್ಯ ರೈಲ್ವೆ ಷಟ್ಪಥ ರೈಲ್ವೆ ಹಳಿಯನ್ನು ರೂಪಿಸಿಕೊಳ್ಳುವ ಯೋಜನೆ ಹೊಂದಿದೆ ಎನ್ನಲಾಗಿದೆ. ಆದರೆ ಉಪನಗರ ರೈಲ್ವೆ ಯೋಜನೆ ಜಾರಿಗೊಳಿಸುತ್ತಿರುವ ಕೆ-ರೈಡ್‌ಗೆ ಮೇಲಿಂದ ಮೇಲೆ ಪತ್ರ ಬರೆಯುತ್ತ ಸ್ಪಷ್ಟನೆಯನ್ನು ಕೇಳುತ್ತಲೇ ಇದೆ. ಜೊತೆಗೆ ನೈಋತ್ಯ ರೈಲ್ವೆ ಕಡೆಯಿಂದಲೇ ಸಾಕಷ್ಟು ತಾಂತ್ರಿಕ ಪ್ರಕ್ರಿಯೆ ಬಾಕಿ ಉಳಿದಿರುವುದು ಭೂಮಿ ಹಸ್ತಾಂತರಕ್ಕೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

46.285 ಕಿ.ಮೀ. ಕನಕ ಮಾರ್ಗ

ಉಪನಗರ ರೈಲ್ವೆ ಯೋಜನೆಯ ನಾಲ್ಕನೇ ಕಾರಿಡಾರ್‌ ಇದು. ಒಟ್ಟಾರೆ 46.285 ಕಿಮೀ ಹೊಂದಿದ್ದು, ಎತ್ತರಿಸಿದ ಹಂತದಲ್ಲಿ 8.96ಕಿಮೀ ಹಾಗೂ ನೆಲ ಹಂತದಲ್ಲಿ 37.92ಕಿಮೀ ರೈಲ್ವೆ ಮಾರ್ಗ ನಿರ್ಮಾಣ ಆಗಬೇಕಿದೆ. ಯೋಜನೆ ಪ್ರಕಾರ ಸಿಲ್ಕ್ ಬೋರ್ಡ್‌ನಲ್ಲಿ ಕನಕ ಮಾರ್ಗದ ಡಿಪೋ ತಲೆ ಎತ್ತಬೇಕು. ಎತ್ತರಿಸಿದ ಹಂತದಲ್ಲಿ ಇಲ್ಲಿ 4 ನಿಲ್ದಾಣಗಳು ಹಾಗೂ ನೆಲಹಂತದಲ್ಲಿ 15 ನಿಲ್ದಾಣಗಳು ನಿರ್ಮಾಣ ಆಗಲಿವೆ.

ಬೆಂಗಳೂರು: ಮೆಜೆಸ್ಟಿಕ್‌-ಏರ್‌ಪೋರ್ಟ್‌ ರೈಲು ಮಾರ್ಗ ನೆನೆಗುದಿಗೆ

ರಾಜಾನುಕುಂಟೆ, ಮುದ್ದನಹಳ್ಳಿ, ಯಲಹಂಕ (ಇಂಟರ್‌ಚೇಂಜ್‌) , ಜಕ್ಕೂರು, ಹೆಗಡೆ ನಗರ, ತನಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್‌), ಕಾಗದಾಸಪುರ, ದೊಡ್ಡನೆಕ್ಕುಂದಿ, ಮಾರತಹಳ್ಳಿ, ಬೆಳ್ಳಂದೂರು ರೋಡ್‌, ಕಾರ್ಮೇಲ್‌ರಾಂ, ಅಂಬೇಡ್ಕರ್‌ ನಗರ, ಹುಸ್ಕೂರು ಹಾಗೂ ಹೀಲಲಿಗೆಯಲ್ಲಿ ನಿಲ್ದಾಣಗಳನ್ನು ರೂಪಿಸಲು ಯೋಜಿಸಲಾಗಿದೆ.

ಆದಷ್ಟು ಬೇಗ ನೈಋತ್ಯ ರೈಲ್ವೆಯಿಂದ ಕೆ-ರೈಡ್‌ಗೆ ಭೂಮಿ ಹಸ್ತಾಂತರ ಆಗಬೇಕು. ಈ ಸಂಬಂಧ ಸಂಸದರು, ರಾಜ್ಯ ಸಚಿವರು ಹೆಚ್ಚಿನ ಗಮನಹರಿಸಬೇಕು. ಇಲ್ಲದಿದ್ದರೆ ಯೋಜನೆ ಮತ್ತಷ್ಟು ವಿಳಂಬವಾಗಲಿದೆ ಎಂದು ನಗರ ಸಾರಿಗೆ ತಜ್ಞರು ರಾಜ್‌ಕುಮಾರ್‌ ದುಗರ್‌ ತಿಳಿಸಿದ್ದಾರೆ.