ಮೊಬೈಲ್ ಬಳಕೆ ನಿಯಂತ್ರಿಸುವ ಸಂಬಂಧ ಪೋಷಕರು, ತಜ್ಞರ ಜೊತೆ ಚರ್ಚಿಸುವುದರೊಂದಿಗೆ ಮುಂದಿನ ಅಧಿವೇಶನದಲ್ಲೂ ಚರ್ಚಿಸಿದ ನಂತರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನ ಪರಿಷತ್ (ಮಾ.24): ರಾಜ್ಯದಲ್ಲಿ 16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಹಾಗೂ ಮೊಬೈಲ್ ಬಳಕೆ ನಿಯಂತ್ರಿಸುವ ಸಂಬಂಧ ಪೋಷಕರು, ತಜ್ಞರ ಜೊತೆ ಚರ್ಚಿಸುವುದರೊಂದಿಗೆ ಮುಂದಿನ ಅಧಿವೇಶನದಲ್ಲೂ ಚರ್ಚಿಸಿದ ನಂತರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿಯ ಪ್ರತಾಪಸಿಂಹ ನಾಯಕ್ ಹಾಗೂ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಸರ್ಕಾರ ಬಹಳ ಹಿಂದೆಯೇ ಸರ್ಕಾರ ಆದೇಶಿಸಿದೆ. ಆದರೆ ಮಕ್ಕಳು ಶಾಲೆಯೊಳಗೆ ಉಪಯೋಗಿಸದಿದ್ದರೂ ಹೊರಗಡೆ ಬಳಕೆ ಇದ್ದೇ ಇರುತ್ತದೆ. ಹೀಗಾಗಿ ಮೊಬೈಲ್ ಬಳಕೆ ನಿಷೇಧಿಸುವಲ್ಲಿ ಪೋಷಕರ ಅಭಿಪ್ರಾಯ ತುಂಬಾ ಮುಖ್ಯವಾಗಿದೆ. ಕೇವಲ ಸಂಪರ್ಕದ ಉದ್ದೇಶದಿಂದ ಮೊಬೈಲ್ ಬಳಕೆ ಇಂದಿನ ಸ್ಥಿತಿಯಲ್ಲಿ ಅನಿವಾರ್ಯ. ಆದರೆ ಮೊಬೈಲ್‌ನಲ್ಲಿ ಒಳ್ಳೆಯದಕ್ಕಿಂತ ಬೇಡವಾದ ವಿಷಯಗಳೇ ಹೆಚ್ಚು ಸಿಗುತ್ತವೆ.
ರಾಜ್ಯ ಸರ್ಕಾರ ತರುವ ಮಾರ್ಗಸೂಚಿಗಳು ಎಲ್ಲ ರಾಜ್ಯಗಳಿಗೂ ಮಾದರಿಯಾಗಬೇಕು. ಸ್ವಲ್ಪ ವಿಳಂಬವಾದರೂ ಉತ್ತಮ ನಿಯಮಗಳನ್ನು ರೂಪಿಸುತ್ತೇವೆ. ಸದನದಲ್ಲಿ ಕಾನೂನು ಮಂಡನೆ ಮಾಡುವಾಗ ಸದಸ್ಯರು ತಮ್ಮ ಸಲಹೆಗಳನ್ನು ನೀಡಿದರೆ ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದೆ ಎಂದು ಹೇಳಿದರು.
ಜಾಗೃತಿ ಮೂಡಿಸಲು ಶಿಕ್ಷಕರಿಗೆ ತರಬೇತಿ
ಮೊಬೈಲ್ ಅತಿ ಬಳಕೆ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಲು ಸರ್ಕಾರಿ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯ 11 ಮಾಡ್ಯೂಲ್‌ಗಳಲ್ಲಿ ಸಮೂಹ ಮಾಧ್ಯಮಗಳು ಹಾಗೂ ಅಂತರ್ಜಾಲದ ಸುರಕ್ಷಿತ ಬಳಕೆ ವಿಷಯವೂ ಒಳಗೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶಾಲೆಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಕುರಿತು ಪ್ರತ್ಯೇಕವಾಗಿ ತರಗತಿ ನಡೆಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


